ಉಪ ಸಮರ: ಯಾರ ನಾಯಕತ್ವಕ್ಕೆ ಜೈ

Team Udayavani, Dec 8, 2019, 6:45 AM IST

ಕಾಂಗ್ರೆಸ್‌ಗೆ 5ಕ್ಕಿಂತ ಕಡಿಮೆ ಸ್ಥಾನ ಬಂದರೆ ಸಿದ್ದು ನಾಯಕತ್ವಕ್ಕೆ ಕುತ್ತು?
ಉ.ಕ. ಭಾಗದಲ್ಲಿ ಬಿಜೆಪಿ ಹೆಚ್ಚು ಗೆಲ್ಲದಿದ್ದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನಡೆ

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ 5ಕ್ಕಿಂತ ಕಡಿಮೆ ಸ್ಥಾನಗಳನ್ನು ಗಳಿಸಿದರೆ ಸಿದ್ದರಾಮಯ್ಯ ಅವರ ವಿಪಕ್ಷ ನಾಯಕತ್ವಕ್ಕೆ ಕುತ್ತು ತರುವ ಪ್ರಯತ್ನ ನಡೆಯುತ್ತದೆಯೇ? ಉತ್ತರ ಕರ್ನಾಟಕ ಭಾಗದ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಯಡಿಯೂರಪ್ಪ ಅವರಿಗೆ ವೈಯಕ್ತಿಕ ಹಿನ್ನಡೆ ಆಗಲಿದೆಯೇ? – ಇದು ರಾಜಕೀಯ ವಲಯದಲ್ಲಿ ಈಗ ಚಾಲ್ತಿಯಲ್ಲಿರುವ ಚರ್ಚೆ.

ಕಾಂಗ್ರೆಸ್‌ -ಬಿಜೆಪಿ ಫ‌ಲಿತಾಂಶವನ್ನು ಗಂಭೀರ ವಾಗಿ ಪರಿಗಣಿಸಿವೆ. ಉಪ ಚುನಾವಣೆ ನಡೆದ 15 ಕ್ಷೇತ್ರಗಳ ಪೈಕಿ ಹತ್ತರಲ್ಲಿ ಲಿಂಗಾಯತ ಮತ್ತು ಕುರುಬ ಮತದಾರರೇ ನಿರ್ಣಾಯಕರಾಗಿರುವ ಕಾರಣ ಫ‌ಲಿತಾಂಶವು ಈ ಎರಡೂ ಸಮುದಾಯ ಎಷ್ಟರ ಮಟ್ಟಿಗೆ ಈ ಇಬ್ಬರು ನಾಯಕರ ಜತೆಗಿದೆ ಎಂಬುದನ್ನು ಆಧರಿಸಿದೆ ಎನ್ನಲಾಗುತ್ತಿದೆ.

ಗೋಕಾಕ್‌, ಅಥಣಿ, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು, ಹುಣಸೂರು ಕ್ಷೇತ್ರಗಳಲ್ಲಿ ಕುರುಬ ಮತ್ತು ಲಿಂಗಾಯತ ಮತಗಳು ಹೆಚ್ಚಾಗಿವೆ. ಹೊಸಕೋಟೆ, ಕೆ.ಆರ್‌. ಪೇಟೆ, ಮಹಾಲಕ್ಷ್ಮೀ ಲೇ ಔಟ್‌ಗಳಲ್ಲಿ ಒಕ್ಕಲಿಗ ಮತಗಳು ಹೆಚ್ಚಾಗಿದ್ದರೂ ನಿರ್ಣಾಯಕ ಸ್ಥಾನ ಕುರುಬ ಮತಗಳದ್ದು.
ಮತದಾನೋತ್ತರ ಸಮೀಕ್ಷೆಗಳು ಏನೇ ಇದ್ದರೂ ಇಬ್ಬರೂ ನಾಯಕರು ತಮ್ಮದೇ ಆದ ಲೆಕ್ಕಾಚಾರ ದಲ್ಲಿದ್ದಾರೆ. ಇಬ್ಬರಲ್ಲೂ ಆತಂಕ ಇರುವುದು ನಿಜ. ಕುಮಾರಸ್ವಾಮಿಯವರೂ ಫ‌ಲಿತಾಂಶದ ಬಗ್ಗೆ ತಮ್ಮದೇ ಲೆಕ್ಕಾಚಾರ ಹಾಕಿದ್ದು, ಏನಾಗುವುದೋ ಎಂಬ ಚಿಂತೆಯಲ್ಲಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈಗೆ ಹಿನ್ನಡೆ ಆಗುವುದೇ?
ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚು ಸೀಟುಗಳನ್ನು ಗೆಲ್ಲುತ್ತದೆ ಎಂದಿರುವುದರಿಂದ ಯಡಿಯೂರಪ್ಪ ಅವರ ನಾಯಕತ್ವ ಅಬಾಧಿತ ಎಂದೇ ಅವರ ಆಪ್ತ ವಲಯ ಹೇಳುತ್ತಿದೆ. ಆದರೆ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚು ಸ್ಥಾನ ಬಂದರೆ ಮಾತ್ರ ಅವರ ಪ್ರಭಾವ ಕೆಲಸ ಮಾಡಿದೆ ಎಂದರ್ಥ ಎಂಬ ಮಾತೂ ಇದೆ.

ಹಳೇ ಮೈಸೂರು ಭಾಗದಲ್ಲಿ ಬಿಜೆಪಿಗೆ ಕಾರ್ಯಕರ್ತರ ಬಲ ಇದೆ. ಇಲ್ಲಿ ಲೋಕಸಭೆ ಚುನಾವಣೆಯಲ್ಲಿ ಕೆಲಸ ಮಾಡಿದಂತೆ ಉಪ ಚುನಾವಣೆಯಲ್ಲೂ ಆಗಿದೆ. ಹುಣಸೂರು, ಹೊಸಕೋಟೆ ಮತ್ತು ಕೆ.ಆರ್‌. ಪೇಟೆಯಲ್ಲಿ ಬಿಜೆಪಿಯ ತಳಮಟ್ಟದ ಸಂಘಟನೆ ಇಲ್ಲ. ಆದರೆ ಯಶವಂತಪುರ, ಶಿವಾಜಿನಗರ, ಮಹಾಲಕ್ಷ್ಮೀ ಲೇ ಔಟ್‌, ಕೆ.ಆರ್‌. ಪುರಗಳಲ್ಲಿ ಅದು ಹಿಂದಿನಿಂದಲೂ ಪ್ರಬಲವಾಗಿದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಕಡಿಮೆ ಸ್ಥಾನ ಬಂದರೆ ಬಿಎಸ್‌ವೈಗೆ ವೈಯಕ್ತಿಕ ಹಿನ್ನೆಡೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ.

ಸಿದ್ದುಗೆ ಕುತ್ತು
ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರ ಪತನದ ಅನಂತರ ವಿಪಕ್ಷ ನಾಯಕ ಸ್ಥಾನ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಹಲವು ದಿನ ಕಾದು ಅನಂತರ ಉಪ ಚುನಾವಣೆ ಹಿನ್ನೆಲೆಯಲ್ಲಿಯೇ ಸಿದ್ದರಾಮಯ್ಯ ಅವರನ್ನು ನೇಮಿಸಿತ್ತು. ಜತೆಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲೂ ಸಿದ್ದರಾಮಯ್ಯ ಅವರ ಮಾತಿಗೆ ಮಣೆ ಹಾಕಿತ್ತು. ಟಿಕೆಟ್‌ ಹಂಚಿಕೆಯಲ್ಲೂ ಅವರೇ ಮೇಲುಗೈ ಸಾಧಿಸಿದ್ದರು.

ಹೀಗಾಗಿ ಸಹಜವಾಗಿ ಈಗ ಫ‌ಲಿತಾಂಶದ ಸಂಪೂರ್ಣ ಹೊಣೆಗಾರಿಕೆ ಸಿದ್ದರಾಮಯ್ಯ ಅವರದೇ. 15 ಕ್ಷೇತ್ರಗಳಲ್ಲಿ 12 ಕಾಂಗ್ರೆಸ್‌ನವೇ. ಕನಿಷ್ಠ ಆರನ್ನಾದರೂ ಗೆಲ್ಲದಿದ್ದರೆ ಹೈಕಮಾಂಡ್‌ ವ್ಯತಿರಿಕ್ತ ನಿರ್ಧಾರಕ್ಕೆ ಬರಬಹುದು. ಕಾಂಗ್ರೆಸ್‌ನ ಹಿರಿಯ ನಾಯಕರು ಸಿದ್ದರಾಮಯ್ಯ ಅವರನ್ನು ವಿಪಕ್ಷ ನಾಯಕ ಸ್ಥಾನದಿಂದ ತೆಗೆಯಬೇಕು ಎಂದು ಹೈಕಮಾಂಡ್‌ ಮೊರೆ ಹೊಗಬಹುದು ಎಂದು ಕಾಂಗ್ರೆಸ್‌ ನಾಯಕರೊಬ್ಬರು ಹೇಳಿದ್ದಾರೆ.

ದಿನೇಶ್‌ಗೂ ಸಂಕಷ್ಟ
ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರಿಗೂ ಸಂಕಷ್ಟ ಎದುರಾಗಬಹುದು. ಸಿದ್ದರಾಮಯ್ಯ ಬೆಂಬಲದಿಂದಾಗಿಯೇ ಕೆಪಿಸಿಸಿ ಅಧ್ಯಕ್ಷ ಪಟ್ಟದಲ್ಲಿ ಇರುವ ಅವರಿಗೆ, ಉಪಚುನಾವಣೆ ಫ‌ಲಿತಾಂಶ ಕೈಹಿಡಿಯದಿದ್ದರೆ ನೈತಿಕ ಕಾರಣದಿಂದ ರಾಜೀನಾಮೆ ಕೊಡಿ ಎಂಬ ಒತ್ತಡ ಹೆಚ್ಚಬಹುದು ಎನ್ನಲಾಗಿದೆ.

ನಾಳೆ ಭವಿಷ್ಯ ನಿರ್ಧಾರ
15 ಕ್ಷೇತ್ರಗಳ ಉಪ ಚುನಾವಣೆ ಫ‌ಲಿತಾಂಶ ಸೋಮವಾರ ಹೊರಬೀಳಲಿದೆ. 13 ಅನರ್ಹ ಶಾಸಕರು ಸೇರಿ 15 ಮಂದಿಯ ಭವಿಷ್ಯ ಅಂದು ನಿರ್ಧಾರವಾಗಲಿದೆ. ಮತಎಣಿಕೆಗಾಗಿ ಚುನಾವಣ ಆಯೋಗ ಸಿದ್ಧತೆ ಮಾಡಿಕೊಂಡಿದೆ. ಮಧ್ಯಾಹ್ನದ ವೇಳೆಗೆ 15 ಕ್ಷೇತ್ರಗಳ ಸೋಲು-ಗೆಲುವಿನ
ವಿವರ ಹೊರಬೀಳಲಿದೆ.

ಎಚ್‌ಡಿಕೆ ನಾಯಕತ್ವಕ್ಕೆ ಪೆಟ್ಟು?
ಒಕ್ಕಲಿಗ ಮತದಾರರು ಹೆಚ್ಚಿರುವ ಯಶವಂತಪುರ, ಹುಣಸೂರು, ಕೆ.ಆರ್‌. ಪೇಟೆ, ಚಿಕ್ಕಬಳ್ಳಾಪುರ, ಮಹಾಲಕ್ಷ್ಮೀ ಲೇ ಔಟ್‌ ಬಗ್ಗೆ ಜೆಡಿಎಸ್‌ ನಿರೀಕ್ಷೆ ಹೊಂದಿದೆ. ಡಿಕೆಶಿ ಸಹಕಾರವೂ ಸಿಕ್ಕಿರುವುದರಿಂದ ಸಮುದಾಯದ ಬೆಂಬಲ ಗೌಡರ ಕುಟುಂಬಕ್ಕೆ ಲಭಿಸುವುದೇ ಎಂಬ ಪ್ರಶ್ನೆಯಿದೆ. ಜೆಡಿಎಸ್‌ಗೆ ಗಳಿಸುವ ಮತಗಳ ಪ್ರಮಾಣವೂ ಮುಖ್ಯವಾಗಿದೆ.

-  ಎಸ್‌. ಲಕ್ಷ್ಮೀನಾರಾಯಣ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ