ಮಾನವ ವಲಸೆಯನ್ನು ಸಮಸ್ಯೆಯಂತೆ ಬಿಂಬಿಸುವುದು ಸರಿಯಲ್ಲ : ಖ್ಯಾತ ಚಲನಚಿತ್ರ ನಿರ್ದೇಶಕ ಗೋರನ್

ಯಾರೂ ತಮ್ಮ ಮನೆಯನ್ನು ಬಿಟ್ಟು ಸುಮ್ಮನೆ ಬಂದು ವಲಸಿಗಲಾರರು : ಗೋರನ್

Team Udayavani, Nov 20, 2019, 1:12 PM IST

ಪಣಜಿ(ಉದಯವಾಣಿ ಪ್ರತಿನಿಧಿಯಿಂದ) ನ. 20 : ಮಾನವ ವಲಸೆ ಎಂಬುದು ಇಂದಿನ ಸಮಸ್ಯೆಯಲ್ಲ ; ಅದರ ಇತಿಹಾಸವೇ ದೊಡ್ಡದು. ಹಾಗೆ ನೋಡುವುದಾದರೆ ಎಲ್ಲರೂ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಉತ್ತಮ ಬದುಕನ್ನು ಅರಸಿ ವಲಸೆ ಬಂದವರೇ” ಎಂಬುದು ಖ್ಯಾತ ಚಲನಚಿತ್ರ ನಿರ್ದೇಶಕ ಗೋರನ್ ಪಸ್ಕಲವೆಜಿಕ್.

ಈಗಾಗಲೇ ಸ್ಪೇನ್ ಮತ್ತಿತರ ದೇಶಗಳಲ್ಲಿ ಪ್ರದರ್ಶಿತವಾಗಿರುವ ಅವರ ಡಿಸ್ಪೈಟ್ ಅಫ್ ಫಾಗ್’ ಈ ವರ್ಷದ ಚಿತ್ರೋತ್ಸವದ ಉದ್ಘಾಟನಾ ಚಿತ್ರವಾಗಿ ಪ್ರದರ್ಶಿತವಾಗುತ್ತಿದೆ.

ಮಂಗಳವಾರ ಬೆಳಗ್ಗೆ ಸುದ್ದಿಗೋಷ್ಠಿಯ ಬಳಿಕ ಉದಯವಾಣಿಯೊಂದಿಗೆ ಮಾತನಾಡುತ್ತಾ, “ನನ್ನ ಈ ಚಿತ್ರದ ಉದ್ದೇಶವೇ ಮನುಷ್ಯರ ಸಮಸ್ಯೆಯನ್ನು ಹೇಳುವುದು. ಆದನ್ನು ಹೇಳಿದ್ದೇನೆ. ಇಲ್ಲಿ ಯಾವುದೆ ರಾಜಕೀಯ ಹೇಳಿಕೆಯನ್ನು ನೀಡುವ ಉದ್ದೇಶವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಹೆಚ್ಚುತ್ತಿರುವ ಮಾನವ ವಲಸೆಯನ್ನು ತಮ್ಮ ಚಿತ್ರದ ಪ್ರಧಾನ ಭಾಗವಾಗಿ ಅರಿಸಿಕೊಂಡಿರುವ ಗೋರನ್, ಅ ಮೂಲಕ ಅ ಸಮಸ್ಯೆಗೆ ವಾಸ್ತವವಾಗಿ ವಲಸಿಗರು ಕಾರಣವಲ್ಲ. ಉತ್ತಮ ಬದುಕನ್ನು ಆರಿಸಿಕೊಳ್ಳುವುದು ಪ್ರತಿಯೊಬ್ಬರ ಹಕ್ಕು ಎಂಬಂತೆ ಪ್ರತಿಪಾದಿಸಿದ್ದಾರೆ.

ತಮ್ಮ ಮನೆಯನ್ನು ತೊರೆದು ಇನ್ನೊಬ್ಬರ ಮನೆಗೆ ಹೋಗಿ ಬದುಕಲು ಯಾರಿಗೇ ತಾನೇ ಇಷ್ಟವಿದೆ? ಯಾರು ತಾನೇ ಅದನ್ನು ಅವರಾಗಿಯೇ ಬಯಸುತ್ತಾರೆ? ಇದು ಕೆಲವು ಸಂದರ್ಭಗಳು ಇಂಥ ಸ್ಥಿತಿಯನ್ನು ನಿರ್ಮಿಸಬಹುದು. ಜತೆಗೆ ತಾವೂ ಉತ್ತಮ ಬದುಕನ್ನು ಬಯಸಿ ಇಂಥದೊಂದು ಸ್ಥಿತಿಗೆ ತಮ್ಮನ್ನೇ ತಳ್ಳಿಕೊಳ್ಳಬಹುದು. ಇವು ಎರಡೇ. ಇದನ್ನು ಹೊರತುಪಡಿಸಿ ಬೇರೆ ಏನೂ ಇಲ್ಲ ಎಂದವರು ಗೋರನ್.

ಹಾಗಾದರೆ ನಿಮ್ಮದು ರಾಜಕೀಯ ಕಥಾವಸ್ತುವನ್ನು ಒಳಗೊಂಡಿರುವ ಚಿತ್ರವೇ ಎಂಬ ಮತ್ತೊಂದು ಪ್ರಶ್ನೆಗೆ, ಖಂಡಿತಾ ಹಾಗೆ ಅರ್ಥೈಸಬೇಡಿ. ರಾಜಕೀಯ ಎನ್ನುವುದು ಹೊರಗಿಲ್ಲ ; ಅದು ನಮ್ಮೊಳಗಿದೆ. ಜತೆಗೆ ನಾನು ಎಂದಿಗೂ ನನ್ನ ಚಿತ್ರ ಮಾಧ್ಯಮವನ್ನು ರಾಜಕೀಯ ಹೇಳಿಕೆ ನೀಡುವುದಕ್ಕಾಗಲೀ ಅಥವಾ ರಾಜಕೀಯ ಸಿದ್ಧಾಂತವನ್ನು ಪ್ರತಿಪಾದಿಸುವುದಕ್ಕಾಗಲೀ ಬಳಸುವುದಿಲ್ಲ. ನನ್ನದೇನಿದ್ದರೂ ನಮ್ಮ ಸುತ್ತಲಿನ ಸಮಸ್ಯೆಗಳಿಗೆ ದನಿಯಾಗುವುದು, ಕನ್ನಡಿಯಾಗುವುದಷ್ಟೇ” ಎಂದು ಸ್ಪಷ್ಠವಾಗಿ ತಮ್ಮ ಚಿತ್ರವನ್ನು ರಾಜಕೀಯ ನೆಲೆಯ ಚಿತ್ರ ಎಂಬುದನ್ನು ನಿರಾಕರಿಸಿದರು.

ಅದರೆ, ನನ್ನ ಚಿತ್ರದಲ್ಲಿ ಕೆಲವೆಡೆ ದ್ವಂದ್ವ ನೀತಿ ಆನುಸರಿಸುವ ವ್ಯವಸ್ಥೆಯ ಮತ್ತು ವ್ಯವಸ್ಥೆಯನ್ನು ನಡೆಸುವವರ ದ್ವಿಮುಖ ನೀತಿಯನ್ನು ಟೀಕಿಸಿದ್ದೇನೆ ಎಂದು ಒಪ್ಪಿಕೊಂಡರು.

ಒಂದು ಮಾತ್ರ ನಿಜ. ಈಗ ಆಳುವವರು ಪ್ರತಿ ಸಮಸ್ಯೆಗಳಿಗೂ ವಲಸಿಗರೇ ಕಾರಣ ಎಂದು ಬಿಂಬಿಸುತ್ತಿದ್ದಾರೆ. ಆದರೆ ಅದನ್ನು ಹಾಗೆ ನೋಡುವುದಕ್ಕಿಂತ ಮಾನವೀಯ ನೆಲೆಯಲ್ಲಿ ನೋಡುವ ಕ್ರಮವಾಗಬೇಕು. ಆದು ಸಾಧ್ಯವಾದರೆ ಒಳ್ಳೆಯದು ಎಂದು ತಿಳಿಸಿದರು.

ಯುರೋಪಿನ ಒಳ್ಳೆಯ ನಿರ್ದೇಶಕರಲ್ಲಿ ಗೋರನ್ ಸಹ ಒಬ್ಬರು. ಹದಿನೆಂಟು ಚಲನಚಿತ್ರ ಹಾಗೂ 30 ಕ್ಕೂ ಹೆಚ್ಚು ಸಾಕ್ಷ್ಯಚಿತ್ರಗಳನ್ನು ನಿರ್ಮಿಸಿದ್ದಾರೆ. ಕಾನ್, ಬರ್ಲಿನ್ , ವೆನಿಸ್, ಟೊರೆಂಟೊ ಸೇರಿದಂತೆ ವಿವಿಧ ಸಿನಿಮೋತ್ಸವಗಳಲ್ಲಿ ಭಾಗವಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ