ಕೊಪ್ಪಳದಲ್ಲಿ ನಾಲ್ವರು ಸೋಂಕಿನಿಂದ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ
Team Udayavani, Jun 13, 2020, 8:38 PM IST
ಕೊಪ್ಪಳ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿನಿಂದ ಬಳಲಿ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಗುಣಮುಖರಾದ ಹಿನ್ನೆಲೆಯಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯರ ತಂಡ ಗುಣಮುಖರಾದ ಜನರಿಗೆ ಶನಿವಾರ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟಿತು. ಜಿಲ್ಲೆಯಲ್ಲು ಒಟ್ಟು ಈ ವರೆಗೂ ಎಂಟು ಜನರು ಸೋಂಕಿನಿಂದ ಗುಣಮುಖರಾದಂತಾಗಿದೆ.
ಜಿಲ್ಲೆಯಲ್ಲಿ ಈಚೆಗೆ ವಿವಿಧ ಹಂತದಲ್ಲಿ 13 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಅವರ ಬಗ್ಗೆ ನಿಗಾ ವಹಿಸಿದ್ದ ಜಿಲ್ಲಾ ಕೋವಿಡ್ ಆಸ್ಪತ್ರೆಯ ವೈದ್ಯರ ತಂಡವು ನಿತ್ಯವೂ ಅವರ ಆರೋಗ್ಯದಲ್ಲಿ ಏರಿಳಿತಗಳ ಕುರಿತು ಗಮನ ಹರಿಸಿತ್ತು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಬಿ.ದಾನರಡ್ಡಿ ಅವರ ನೇತೃತ್ವದ ವೈದ್ಯರ ತಂಡವು ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುತ್ತಿದೆ. ಶನಿವಾರ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಪಿ5647, ಪಿ 5835, ಪಿ 5836, ಪಿ 5837 ಎನ್ನವು ನಾಲ್ವರ ಗಂಟಲು ದ್ರವ ಪರೀಕ್ಷೆ ಮಾಡಿದಾಗ ಅವರ ವರದಿ ನೆಗಟಿವ್ ಬಂದಿತು. ನಾಲ್ವರಲ್ಲಿ ಇಬ್ಬರು ಮಹಿಳೆಯರು, ಇಬ್ಬರು ಪುರುಷರಾಗಿದ್ದು ವೈದ್ಯರ ತಂಡವು ನಾಲ್ವರನ್ನು ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟಿತು.
ಗುಣಮುಖರಾದ ವ್ಯಕ್ತಿಗಳು 14 ದಿನಗಳ ಕಾಲ ಮನೆಯಲ್ಲಿಯೇ ಕ್ವಾರೆಂಟೈನ್‌ನಲ್ಲಿ ಇರಬೇಕು. ಹೊರಗೆ ಸುತ್ತಾಟ ನಡೆಸುವುಂತಿಲ್ಲ. ಏಲ್ಲಿಯೂ ಪ್ರವಾಸ, ಪ್ರಯಾಣ ಕೈಗೊಳ್ಳುವಂತಿಲ್ಲ. ಆರೋಗ್ಯದ ವಿಷಯದ ಕುರಿತು ಆಗಾಗ ವೈದ್ಯರ ತಂಡಕ್ಕೆ ಮಾಹಿತಿ ನೀಡಬೇಕು ಎನ್ನುವ ಕೆಲವೊಂದು ನಿಬಂಧನೆ ಹಾಕಿ ಬೀಳ್ಕೊಟ್ಟಿತು.
8 ಜನರು ಬಿಡುಗಡೆಯಾದಂತಾಯ್ತು :
ಜಿಲ್ಲೆಯಲ್ಲಿ ಈ ವರೆಗೂ 13 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಕಳೆದ ಕೆಲವು ದಿನಗಳ ಹಿಂದೆ ನಾಲ್ಕು ಜನರು ಗುಣಮುಖರಾದ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಶನಿವಾರ ಮತ್ತೆ 4 ಜನರು ಅತಿ ಬೇಗವಾಗಿ ಗುಣಮುಖರಾಗಿದ್ದರಿಂದ ಅವರನ್ನು ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಈ ವರೆಗೂ 8 ಜನರು ಬಿಡುಗಡೆಯಾದಂತಾಗಿದ್ದು, ಇನ್ನೂ 5 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.