ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಕಡ್ಡಾಯ : ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ
Team Udayavani, Sep 3, 2021, 10:09 PM IST
ಬೆಂಗಳೂರು : ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜುಗಳಲ್ಲಿ ಸೆ. 6ರಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ಭೌತಿಕ ತರಗತಿ ಆರಂಭಿಸಬೇಕು, ಪ್ರತೀ ದಿನದ ವಿದ್ಯಾರ್ಥಿಗಳ ಹಾಜರಾತಿ ಮಾಹಿತಿಯನ್ನು ವಿದ್ಯಾರ್ಥಿ ಸಾಧನೆ ಟ್ರ್ಯಾಕಿಂಗ್ ವ್ಯವಸ್ಥೆ (ಎಸ್ಎಟಿಎಸ್)ನಲ್ಲಿ ದಾಖಲಿಸಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಈ ಸಂಬಂಧ ಇಲಾಖೆಯು ಸುತ್ತೋಲೆ ಹೊರಡಿಸಿದೆ. ಆ. 23ರಿಂದಲೇ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಆರಂಭಿಸಲು ಅನುಮತಿ ನೀಡಲಾಗಿದೆ. ಪ್ರಥಮ ಪಿಯು ದಾಖಲಾತಿ ಪ್ರಕ್ರಿಯೆ ನಡೆಯುತ್ತಿದ್ದರಿಂದ ಅನೇಕ ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿಲ್ಲ. ಸೆ. 6ರಿಂದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪಿಯು ಕಾಲೇಜುಗಳಲ್ಲಿ ಪ್ರಥಮ ಪಿಯುಸಿಗೂ ಭೌತಿಕ ತರಗತಿ ಆರಂಭಿಸಬೇಕು. ವಿದ್ಯಾರ್ಥಿಗಳ ಪ್ರತೀ ದಿನದ ಹಾಜರಾತಿಯನ್ನು ಎಸ್ಎಟಿಎಸ್ನಲ್ಲಿ ದಾಖಲಿಸಬೇಕು. ಯಾವುದೇ ಕಾಲೇಜುಗಳು ಭೌತಿಕ ತರಗತಿಗಳನ್ನು ನಡೆಸದಿರುವುದು ಕಂಡುಬಂದರೆ ಆಯಾ ಜಿಲ್ಲಾ ಉಪ ನಿರ್ದೇಶಕರು ಕಾಲೇಜುಗಳಿಗೆ ಭೇಟಿ ನೀಡಿ ತರಗತಿ ಆರಂಭಿಸಲು ಕ್ರಮ ಕೈಗೊಳ್ಳಬೇಕು. ವರದಿಯನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಇಲಾಖೆಯ ನಿರ್ದೇಶಕಿ ಆರ್. ಸ್ನೇಹಲ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ :ಅಂಟಾಲಿಯಾ ಪ್ರಕರಣ: ಮಾಜಿ ಪೊಲೀಸ್ ಅಧಿಕಾರಿ ಸೇರಿ 10 ಮಂದಿ ವಿರುದ್ಧ ಚಾರ್ಜ್ಶೀಟ್