
ರಬಕವಿ-ಬನಹಟ್ಟಿ: ಸೋಜಿಗ ಮೂಡಿಸುವ ಗೀಜುಗ; ತನ್ನ ಮನೆಗೆ ತಾನೇ ಎಂಜನಿಯರ್
ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಇದು ಗೂಡು ಕಟ್ಟುವುದು ಸಾಮಾನ್ಯ.
Team Udayavani, May 30, 2023, 6:16 PM IST

ರಬಕವಿ-ಬನಹಟ್ಟಿ: ಆಧುನಿಕತೆಯಿಂದಾಗಿ ಬಾವಿ, ಹಳ್ಳ, ಕೆರೆ ಸಮೀಪದ ಗಿಡಗಂಟಿಗಳಲ್ಲಿ ಕಾಣ ಸಿಗುತ್ತಿದ್ದ ಗೀಜುಗ ಈಗ ಕಣ್ಮರೆಯಾಗುತ್ತಿದೆ. ನೇಯ್ಗೆ ಹಕ್ಕಿ ಎಂದೇ ಕರೆಯಿಸಿಕೊಳ್ಳುವ ಗಂಡು ಗೀಜುಗ ಗೂಡು ಹೆಣೆಯುವುದರಲ್ಲಿ ಎತ್ತಿದ ಕೈ. ಈ ಕಲೆ ಗಂಡು ಹಕ್ಕಿಗೆ ದೇವರು ನೀಡಿದ ವರ ಎಂದರೆ ತಪ್ಪಾಗಲಿಕ್ಕಿಲ್ಲ. ಸುಂದರ ಕಟ್ಟಡ ನಿರ್ಮಾಣಕ್ಕೆ ಇಂಜನಿಯರ್ ಅವಶ್ಯವಿದೆ. ಆದರೆ ಗೀಜುಗ ಹಕ್ಕಿ ತನ್ನ ಮನೆಗೆ ತಾನೇ ಇಂಜಿನಿಯರ್ ಆಗಿದೆ. ಯಾರಿಗೂ ನಿಲುಕದ ಹಾಗೆ ಬಾವಿ, ದೊಡ್ಡ ದೊಡ್ಡ ಕಾಲುವೆ ಹಾಗೂ ನಿರಂತರ ಹರಿಯುವ ನೀರಿನ ಪಕ್ಕ, ಬಾಗಿದ ಗಿಡಗಂಟಿಗಳ ತುತ್ತ ತುದಿಗಳಲ್ಲಿ ಗಟ್ಟಿಮುಟ್ಟಾದ, ಸುಂದರವಾದ ಗೂಡು ಕಟ್ಟುತ್ತದೆ. ಯಾವ ಬಿರುಗಾಳಿ ಮಳೆಗೂ ಜಗ್ಗದೆ, ಹನಿ ನೀರು ಕೂಡಾ ಗೂಡಿನೊಳಗೆ ನುಸುಳದಂತೆ ನಿರ್ಮಿಸುವ ಕಲೆ ಇಂಜನಿಯರ್ ಕೂಡಾ ನಾಚಿಸುವಂತಿದೆ.
ಹೆಣಿಕೆಗೆ ಸರಿಸಾಟಿ ಯಾರಿಲ್ಲ?: ಗೂಡು ಹೆಣೆಯುವುದರಲ್ಲಿ ಗೀಜುಗನಿಗೆ ಆಸಕ್ತಿ, ಶ್ರದ್ಧೆ ನಿಜಕ್ಕೂ ಆಶ್ಚರ್ಯ ಮೂಡಿಸುತ್ತದೆ. ಅಷ್ಟಕ್ಕೂ ಇದು ಗೂಡು ಕಟ್ಟುವುದು ತನ್ನ ಸಂಗಾತಿಯನ್ನು ಆಕರ್ಷಿಸಲು ಹಾಗೂ ತನ್ನ ಪುಟ್ಟ ಸಂಸಾರ ಹೂಡಲು. ಗೂಡು ಕಟ್ಟುತ್ತ ತನ್ನ ಮರಿಗಳಿಗೆ ಬದುಕು ಕಟ್ಟಿಕೊಡುವ ಅದಮ್ಯ ಆಸೆ. ಈ ಸುಂದರ ಹಕ್ಕಿಗೆ ಇಕ್ಕಳದಂತಹ ತನ್ನ ಚುಂಚಿನಲ್ಲಿ ಸಟಪಟನೆ ನೇಯುವ ಇದರ ಮುಂದೆ ಯಾವುದೇ ತಂತ್ರಜ್ಞಾನ ಸರಿಸಾಟಿಯಾಗದು.
ಗೂಡುಕಟ್ಟುವ ವಿಧಾನ:
ಮುಂಗಾರು ಬೆಳೆಯ ಮಧ್ಯೆ ಹಿಂಗಾರು ಮಳೆ ಆರಂಭದ ಹಂತದಲ್ಲಿ ಈ ಗೀಜುಗಗಳು ಗೂಡು ಕಟ್ಟಲು ಆರಂಭಿಸುತ್ತವೆ. ಗೀಜುಗದ ಗೂಡಿನ ಪ್ರವೇಶ ದ್ವಾರ ಕಿರಿದಾಗಿರುತ್ತದೆ. ಈ ಗೂಡು ಉದ್ದನೆಯ ಬಾಲದ ಮೂಲಕ ಕೆಳಮುಖವಾಗಿ ಜೋತು ಬಿದ್ದಿರುತ್ತದೆ. ಹಾಗಾಗಿ ಕೆಳಗಿನಿಂದ ಗೂಡನ್ನು ಪ್ರವೇಶಿಸಬೇಕು. ಗೀಜಗ ಗೂಡನ್ನು ಹಸಿರಾದ ಎಳೆಗಳಿಂದ ನಿರ್ಮಿಸುತ್ತದೆ. ಗೂಡು ಕೊಂಬೆಗಳಿಗೆ ಭದ್ರವಾಗಿ ಹೆಣೆದಿರುತ್ತದೆ. ಗೂಡಿಗೆ ಬೇಕಾದ ಸಾಮಗ್ರಿಗಳನ್ನು ಒಂದೊಂದೇ ತನ್ನ ಚೊಂಚಿನಲ್ಲಿ ಅಳತೆ ಪ್ರಕಾರ ಕತ್ತರಿಸಿ ತಂದು ಪರೀಕ್ಷಿಸಿದ ನಂತರವೇ ಗೂಡಿಗೆ ಸೇರಿಸುತ್ತದೆ. ಗಂಡು ಹಕ್ಕಿ ಗೂಡನ್ನು ಅರ್ಧ ನಿರ್ಮಿಸಿದ ನಂತರ ಗೂಡಿನ ಆಕೃತಿಯನ್ನು ತನ್ನ ಸಂಗಾತಿಗೆ ತೋರಿಸುತ್ತದೆ. ಒಂದು ವೇಳೆ ಗೂಡು ಸಂಗಾತಿಗೆ ಇಷ್ಟವಾದರೆ ಮುಂದುವರಿಸುತ್ತದೆ ಇಲ್ಲದಿದ್ದರೆ ಮರಳಿ ಕಟ್ಟುತ್ತದೆ.
ಗೂಡು ಅಪೂರ್ಣವಾಗಿರುವಾಗಲೇ ಹೆಣ್ಣು ಹಕ್ಕಿ ಪ್ರವೇಶಿಸಿ ಮೊಟ್ಟೆ ಇಡುತ್ತದೆ. ನಂತರ ಗಂಡು ಹಕ್ಕಿ ಇತರರು ಪ್ರವೇಶಿಸದಂತೆ ಕೆಳಗಿನ ಬಾಯಿಯವರೆಗೂ ಮುಚ್ಚಿ ಬಿಡುತ್ತದೆ. ಗಂಡು ಹಕ್ಕಿ ತಾನು ಹೆಣೆದ ಗೂಡನ್ನು ಮರಿಗಳ ಪೋಷಣೆಗೆ ಬಿಟ್ಟು ಇನ್ನೊಂದು ಗೂಡನ್ನು ಕಟ್ಟಿಕೊಳ್ಳುತ್ತದೆ. ತಾಯಿ ಮತ್ತು ಮರಿಗಳಿಗೆ ಆಹಾರ ಚುಂಚಲ್ಲಿ ಕಚ್ಚಿಕೊಂಡು ಬಂದು ಹೊರಗಿನಿಂದ ನೀಡುತ್ತದೆ. ಹಾವುಗಳಿಂದ ಮರಿಗಳನ್ನು ರಕ್ಷಣೆ ಮಾಡುವ ಸಲುವಾಗಿ ತೆಳ್ಳಗಿನ ಕೊಂಬೆಗಳ ತುತ್ತ ತುದಿಯಲ್ಲಿ ಇದು ಗೂಡು ಕಟ್ಟುವುದು ಸಾಮಾನ್ಯ.
ಉದರ ಪೋಷಣೆಗೆ ಹಿಂಗಾರಿ ಹಿತಕರ: ಹಿಂಗಾರು ಮಳೆ ಆರಂಭವಾಗುವಷ್ಟರಲ್ಲಿ ರೈತರ ಹೊಲದಲ್ಲಿನ ಸಜ್ಜಿ, ಮುಂಗಾರು ಜೋಳ ಹೀಗೆ ತೆನೆತೆನೆಗಳಲ್ಲಿ ಕಾಳು ಬೆಳೆಗಳು ಕಾಳಿನ ಹಂತದಲ್ಲಿರುವಾಗಲೇ ಈ ಗೀಜುಗ ತನ್ನ ಮರಿಗಳನ್ನು ಬೆಳೆಸುವುದರೊಂದಿಗೆ ಸಂಸಾರ ವೃದ್ಧಿಸಿಕೊಳ್ಳುತ್ತದೆ. ಇಕ್ಕೆಲಗಳಲ್ಲಿ ಗಡುಸಾದ ಗಿಡಗಂಟಿಗಳು ಇರುವುದನ್ನು ಗಮನಿಸಿ ಗೂಡು ನಿರ್ಮಿಸುತ್ತದೆ. ಮರಿಗಳು ಬೆಳೆದು ಬಲಿಷ್ಟವಾಗುವವರೆಗೂ ಆಹಾರ ತರುತ್ತದೆ. ಜಮೀನುಗಳಲ್ಲಿನ ಕೀಟಗಳನ್ನು ತಿನ್ನುವ ಪಕ್ಷಿ ಇದೀಗ ಆಧುನಿಕತೆಯಿಂದ ಮರೆಯಾಗುತ್ತಿವೆ. ಈ ಪಕ್ಷಿ ಸಂಕುಲ ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಗೀಜುಗ ವಿಶೇಷವಾಗಿ ಗೂಡು ನಿರ್ಮಿಸುತ್ತವೆ. ಅವು ನೋಡಲು ತುಂಬಾ ವೈಶಿಷ್ಟ್ಯವಾಗಿವೆ. ಆಧುನಿಕತೆಯಿಂದಾಗಿ ಬಾವಿ, ಹಳ್ಳ, ಕೆರೆ ಸಮೀಪದ ಗಿಡಗಂಟಿಗಳಲ್ಲಿ ಕಾಣ ಸಿಗುತ್ತಿದ್ದ ಗೀಜುಗ ಈಗ ಕಣ್ಮರೆಯಾಗುತ್ತಿರುವುದು ನಿಜವಾಗಿಯೂ ದುಃಖದ ಸಂಗತಿ.
∙ರಾಜಕುಮಾರ ಪಿಟಗಿ,
ಪಕ್ಷಿ ಪ್ರೇಮಿ ಹಾಗೂ ಪಕ್ಷಿಗಳ, ಛಾಯಾಗ್ರಾಹಕರು
*ಕಿರಣ ಶ್ರೀಶೈಲ ಆಳಗಿ
ಟಾಪ್ ನ್ಯೂಸ್
