ಸುಪ್ರೀಂ ತೀರ್ಪು; 17 ಶಾಸಕರ ಅನರ್ಹತೆ ಸರಿ, ಸದ್ಯಕ್ಕಿಲ್ಲ ಮಂತ್ರಿಗಿರಿ, ಲಾಭದಾಯಕ ಹುದ್ದೆ!

Team Udayavani, Nov 13, 2019, 11:16 AM IST

ನವದೆಹಲಿ: ಹದಿನೇಳು ಮಂದಿ ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಅಂದಿನ ಸ್ಪೀಕರ್ ರಮೇಶ್ ಕುಮಾರ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಪೀಠ ಬುಧವಾರ ಎತ್ತಿಹಿಡಿದಿದ್ದು, ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಸ್ಪರ್ಧಿಸಬಹುದು ಎಂದು ತೀರ್ಪು ನೀಡಿದೆ.

ರಾಜ್ಯ ಉಪಚುನಾವಣೆಯ ಹಿನ್ನೆಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಅನರ್ಹ ಶಾಸಕರ ಪ್ರಕರಣಕ್ಕೆ ತೆರೆ ಬಿದ್ದಂತಾಗಿದೆ.

2023ರವರೆಗೆ ಅನರ್ಹ ಶಾಸಕರು ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂಬ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ. ರಾಜೀನಾಮೆ ಸ್ವೀಕರಿಸುವುದಷ್ಟೇ ಸ್ಪೀಕರ್ ಕೆಲಸ ಎಂದು ಸುಪ್ರೀಂ ಪೀಠ ಸ್ಪಷ್ಟಪಡಿಸಿದೆ.

ಶಾಸಕರ ಅನರ್ಹತೆಗೆ ಅವಧಿ ನಿರ್ಧಾರ ಮಾಡುವಂತಿಲ್ಲ. ಅನರ್ಹತೆ ಕೇವಲ ಉಪಚುನಾವಣೆ ನಡೆಯುವವರೆಗೆ ಮಾತ್ರ. ವಿಧಾನಸಭೆ ಅವಧಿ ಮುಗಿಯುವವರೆಗೆ ಅಲ್ಲ. ಅನರ್ಹ ಶಾಸಕರು ಉಪಚುನಾವಣೆಗೆ ಸ್ಪರ್ಧಿಸಬಹುದು. ಆದರೆ ಚುನಾವಣೆಗೆ ಸ್ಪರ್ಧಿಸುವವರೆಗೆ ಮಂತ್ರಿಯಾಗುವಂತಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ನಂತರ ಮಂತ್ರಿಯಾಗಬಹುದು ಎಂದು ತೀರ್ಪಿನಲ್ಲಿ ಹೇಳಿದೆ.

ಚುನಾವಣೆ ಸ್ಪರ್ಧೆಗೆ ಸ್ಪೀಕರ್ ನಿರ್ಬಂಧ ತಪ್ಪು. ಶಾಸಕರ ರಾಜೀನಾಮೆ ಸ್ವಯಂ ಪ್ರೇರಿತವಾಗಿದ್ದರೆ ಅದನ್ನು ಒಪ್ಪಬೇಕು. ಶಾಸಕರ ರಾಜೀನಾಮೆ ಅಂಗೀಕರಿಸಬೇಕು. ರಾಜೀನಾಮೆ ಅಂಗೀಕರಿಸಲಿ ಅಥವಾ ಅನರ್ಹಗೊಳಿಸಲಿ ಶಾಸಕ ಸ್ಥಾನ ಖಾಲಿಯಾಗುತ್ತದೆ. ಆಗ ಚುನಾವಣೆ ನಡೆಯಲೇಬೇಕಾಗುತ್ತದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ