ಅಗ್ರಸ್ಥಾನಿ ಡೆಲ್ಲಿಗೆ ಸೋಲಿನ ಆಘಾತ
Team Udayavani, Oct 1, 2019, 5:24 AM IST
ಪಂಚಕುಲ (ಹರ್ಯಾಣ): ಪ್ರೊ ಕಬಡ್ಡಿ 7ನೇ ಆವೃತ್ತಿಯಲ್ಲಿ ಬೆಂಗಾಲ್ ವಾರಿಯರ್ ಅಂಕಪಟ್ಟಿಯಲ್ಲಿ ಮತ್ತೂಮ್ಮೆ ಅಗ್ರಸ್ಥಾನದತ್ತ ದಿಟ್ಟ ಹೆಜ್ಜೆ ಇಟ್ಟಿದೆ. ಸೋಮವಾರ ದೇವಿಲಾಲ್ ನ್ಪೋರ್ಟ್ಸ್ ಕಾಂಪ್ಲೆಕ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ ಅಂಕಪಟ್ಟಿಯ ಅಗ್ರಸ್ಥಾನಿ, ಬಲಿಷ್ಠ ಎದುರಾಳಿ ದಬಾಂಗ್ ಡೆಲ್ಲಿ ತಂಡವನ್ನು 42-33 ಅಂಕಗಳ ಅಂತರದಿಂದ ಸೋಲಿಸಿತು. ಇದರೊಂದಿಗೆ ಬೆಂಗಾಲ್ ವಾರಿಯರ್ 78 ಅಂಕ ಗಳಿಸಿ ಸದ್ಯ 2ನೇ ಸ್ಥಾನದಲ್ಲೇ ಮುಂದುವರಿದಿದೆ. 82 ಅಂಕ ಹೊಂದಿರುವ ಡೆಲ್ಲಿ ಮೊದಲ ಸ್ಥಾನದಲ್ಲಿದೆ.
ದಿನದ ಇನ್ನೊಂದು ಪಂದ್ಯದಲ್ಲಿ ಯು ಮುಂಬಾ 36-32 ಅಂತರದಿಂದ ತಮಿಳ್ ತಲೈವಾಸ್ಗೆ ಸೋಲುಣಿಸಿತು.
ಗರ್ಜಿಸಿದ ಮಣಿಂದರ್
ತಾರಾ ಆಟಗಾರ ಮಣಿಂದರ್ ಸಿಂಗ್ (13 ಅಂಕ) ಅಮೋಘ ರೈಡಿಂಗ್ನಿಂದಾಗಿ ಬೆಂಗಾಲ್ಗೆ ಗೆಲುವು ಸುಲಭಗೊಂಡಿತು. 12 ಸಲ ಡೆಲ್ಲಿ ಕೋಟೆಗೆ ಲಗ್ಗೆ ಇಟ್ಟ ಅವರು 2 ಸಲ ವೈಫಲ್ಯ ಅನುಭವಿಸಿದ್ದು ಬಿಟ್ಟರೆ 13 ಟಚ್ ಪಾಯಿಂಟ್ಗಳನ್ನು ತಂದದ್ದು ವಿಶೇಷ. ಇವರಿಗೆ ಕನ್ನಡಿಗ ರೈಡರ್ ಸುಕೇಶ್ ಹೆಗ್ಡೆ (7 ರೈಡಿಂಗ್ ಅಂಕ) ಮತ್ತು ಮೊಹಮ್ಮದ್ ನಬಿಭಕ್Ò (5 ಟ್ಯಾಕಲ್ ಅಂಕ) ಉತ್ತಮ ಬೆಂಬಲ ನೀಡಿದರು.
ನವೀನ್ ಸಿಡಿದರೂ ಗೆಲ್ಲದ ಡೆಲ್ಲಿ
ನವೀನ್ ಕುಮಾರ್ (15 ರೈಡಿಂಗ್ ಅಂಕ) ಹಾಗೂ ಚಂದ್ರನ್ ರಂಜಿತ್ (6 ರೈಡಿಂಗ್ ಅಂಕ) ಅತ್ಯುತ್ತಮ ಪ್ರದರ್ಶನ ನೀಡಿದರೂ ದಬಾಂಗ್ ಡೆಲ್ಲಿಗೆ ಗೆಲುವು ಎಟುಕಲಿಲ್ಲ. ರಕ್ಷಣಾ ವಿಭಾಗದಲ್ಲಿ ಅನಿಲ್ ಕುಮಾರ್ (3 ಟ್ಯಾಕಲ್ ಅಂಕ), ರವೀಂದರ್ ಪಹಾಲ್ (2 ಟ್ಯಾಕಲ್) ಅಂಕ ಕಳಪೆ ಪ್ರದರ್ಶನ ನೀಡಿದರು.