ಪರ್ಯಾಯ ಕಳೆದರೂ ಜಾತ್ರೆಯ ಕಳೆ: ಶ್ರೀಕೃಷ್ಣನ ದರ್ಶನಕ್ಕೆ ಭಕ್ತ ಸಮೂಹ
Team Udayavani, Jan 20, 2022, 5:10 AM IST
ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯೋತ್ಸವದ ಸಂಭ್ರಮ ಕಳೆದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಮಂಗಳವಾರ ಅಪರಾಹ್ನದ ಬಳಿಕ ರಾತ್ರಿಯವರೆಗೆ ಹಾಗೂ ಬುಧವಾರ ಬೆಳಗ್ಗೆ ಮತ್ತು ಸಂಜೆಯ ವೇಳೆಗೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರೆ, ಮಧ್ಯಾಹ್ನದ ವೇಳೆಗೆ ವಿರಳವಾಗಿತ್ತು. ಪರ್ಯಾಯ ದಿನ ದೇವರ ದರ್ಶನಕ್ಕೆ ಬರಲಾಗದಿದ್ದವರು ಮರುದಿನ ಆಗಮಿಸಿದ್ದು ಕಂಡು ಬಂತು. ಈ ವೇಳೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿದ್ದಾರೆ.
ಪರ್ಯಾಯಕ್ಕೆಂದು ಆಗಮಿಸಿದ ಸಂತೆಮಾರುಕಟ್ಟೆಗಳು ರಥಬೀದಿ ಪರಿಸರದಲ್ಲಿ ಬುಧವಾರವೂ ಕಂಡುಬಂತು. ಹೊರಜಿಲ್ಲೆಯ ಭಕ್ತರೂ ಅಧಿಕ ಸಂಖ್ಯೆಯಲ್ಲಿ ಕಂಡುಬಂದರು. ಜಿಲ್ಲಾಡಳಿತದ ವತಿಯಿಂದ ಕರಕುಶಲ ವಸ್ತುಪ್ರದರ್ಶನ ಮಳಿಗೆ ಬುಧವಾರವೂ ತೆರೆದಿತ್ತು.
ಆಸನಗಳ ತೆರವು
ದರ್ಬಾರ್ ನಡೆದ ಸ್ಥಳದಲ್ಲಿರಿಸಲಾಗಿದ್ದ ಆಸನಗಳು ಹಾಗೂ ಪರ್ಯಾಯ ಮಹೋತ್ಸವಕ್ಕೆಂದು ಹಾಕಲಾದ ಹೆಚ್ಚುವರಿ ಕುರ್ಚಿಗಳನ್ನು ಬುಧವಾರ ತೆಗೆಯಲಾಯಿತು. ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳು ಸೀಮಿತಸಂಖ್ಯೆಯಲ್ಲಿ ಕಂಡುಬಂದವು.
ಎಚ್ಚರಿಕೆ ಫಲಕಗಳ ತೆರವು
ಶ್ರೀಕೃಷ್ಣ ಮಠದ ಸಹಿತ ನಗರದ ವಿವಿಧ ಭಾಗಗಳಲ್ಲಿ ಜಿಲ್ಲಾ ಪೊಲೀಸರು ಅಳವಡಿಸಿದ್ದ ಜಾಗೃತಿ ಫಲಕಗಳನ್ನು ಬುಧವಾರ ತೆರವುಗೊಳಿಸಲಾಯಿತು. ರಥಬೀದಿಯಲ್ಲಿದ್ದ ಪೊಲೀಸ್ ಚೆಕ್‌ಪೋಸ್ಟ್ ಕಾರ್ಯಾಚರಣೆಯಲ್ಲಿತ್ತು.