ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ: ಕುಮಾರಸ್ವಾಮಿ

Team Udayavani, Apr 12, 2019, 6:00 AM IST

ಬೆಂಗಳೂರು: “ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವುದರಿಂದ ಬಿಜೆಪಿಯವರಲ್ಲಿ ಆತಂಕ ಮೂಡಿದೆ. ಹೀಗಾಗಿ, ಐಟಿ ದಾಳಿ
ಮೂಲಕ ನಮ್ಮ ಮುಖಂಡರಲ್ಲಿ ಭಯ ಹುಟ್ಟಿಸಲು ಪ್ರಯತ್ನಿಸಲಾಗುತ್ತಿದೆ. ಮೈತ್ರಿಕೂಟ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ’ ಎಂದು ಉದಯವಾಣಿಗೆ ನೀಡಿದ ಸಂದರ್ಶನದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

– ಚುನಾವಣಾ ಪ್ರಚಾರ ಹೇಗಿದೆ?
ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ಎರಡೂ ಪಕ್ಷಗಳ ನಾಯಕರು ಜತೆಗೂಡಿ ಪ್ರಚಾರ ಮಾಡುತ್ತಿದ್ದೇವೆ. ಮತದಾರರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗುತ್ತಿದೆ.

– ಮೈತ್ರಿ ಬಗ್ಗೆ ಅಪಸ್ವರ, ಗೊಂದಲ, ಸ್ಥಳೀಯ ಮಟ್ಟದಲ್ಲಿ ಸಂಘರ್ಷ ಮುಂದುವರೆದಿದೆಯಲ್ಲಾ?
ಹಾಗೇನಿಲ್ಲ. ರಾಷ್ಟ್ರದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಾವು ಮಾಡಿಕೊಂಡಿರುವ ಮೈತ್ರಿ ಆರೋಗ್ಯಕರವಾಗಿಯೇ ಇದೆ. ಸ್ಥಳೀಯ ಮಟ್ಟದಲ್ಲೂ ಬಹುತೇಕ ಕಡೆ ಹೊಂದಾಣಿಕೆ ಏರ್ಪಟ್ಟಿದೆ. ಮಂಡ್ಯದಲ್ಲಿ ವಿಚಿತ್ರ ಸನ್ನಿವೇಶ ಇದೆ. ಅದನ್ನು ನಾನು ಒಪ್ಪುತ್ತೇನೆ. ದುರದೃಷ್ಟಕರ ಎಂದರೆ ನಮ್ಮ ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್‌ ಸೇರಿದ್ದವರು ಪಕ್ಷೇತರ ಅಭ್ಯರ್ಥಿ ಪರ ನಿಂತಿದ್ದಾರೆ. ಅವರ ಮನವೊಲಿಕೆಗೆ ಎಲ್ಲ ರೀತಿಯ ಪ್ರಯತ್ನ ವಿಫ‌ಲವಾಯಿತು. ನರೇಂದ್ರ ಮೋದಿಯವರೇ ಮೈಸೂರಿಗೆ ಬಂದು ಪಕ್ಷೇತರ ಅಭ್ಯರ್ಥಿಗೆ ಮತ ಕೇಳಿದ್ದಾರೆ. ಹೀಗಾಗಿ, ಅವರು ಈಗ ಬಿಜೆಪಿ ಅಭ್ಯರ್ಥಿಯೇ. ಈಗ ಅವರ ಪರ ಕೆಲಸ ಮಾಡುತ್ತಿರುವ ಕೆಲ ಕಾಂಗ್ರೆಸ್‌ ನಾಯಕರ ನಿಲುವೇನು ಎಂಬುದನ್ನು ನಾನು ನಿರೀಕ್ಷಿಸುತ್ತಿದ್ದೇನೆ.

– ನೀವು ಮಂಡ್ಯಕ್ಕೆ ಸೀಮಿತವಾಗಿದ್ದೀರಿ ಎಂಬ ಆರೋಪ ಇದೆಯಲ್ಲಾ?
ನಾನು ಮಂಡ್ಯಗೆ ಪ್ರಾರಂಭದಲ್ಲಿ ಬಂದಿದ್ದು ಬಿಟ್ಟರೆ ಈಗಲೇ ಹೋಗಿರುವುದು. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ ಎಲ್ಲ ಕಡೆ ಪ್ರಚಾರ ಮಾಡಿದ್ದೇನೆ. ಬೆಂಗಳೂರು ಉತ್ತರ, ದಕ್ಷಿಣ, ಕೇಂದ್ರ ಕ್ಷೇತ್ರಗಳಲ್ಲೂ ಪ್ರಚಾರ ಮಾಡಿದ್ದೇನೆ. ಉಳಿದ ಕ್ಷೇತ್ರಗಳಿಗೂ ಹೋಗುವವನಿದ್ದೇನೆ. ವಿರೋಧಿಗಳು ಯಾವುದೇ ವಿಷಯ ಸಿಗಲ್ಲ ಎಂದು ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ.

– ಮಂಡ್ಯ ಚುನಾವಣೆ ಮಾತ್ರ ಯಾಕೆ ಹೆಚ್ಚು ಗಮನ ಸೆಳೆಯುತ್ತಿದೆ?
ಅದೇ ನನಗೂ ಅರ್ಥವಾಗುತ್ತಿಲ್ಲ. ಮಾಜಿ ಪ್ರಧಾನಿ, ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕರು, ಮಾಜಿ ಮುಖ್ಯಮಂತ್ರಿಯವರ ಪುತ್ರರು ಸ್ಪರ್ಧೆ ಮಾಡಿದ್ದಾರೆ. ಆದರೆ, ವಿದ್ಯುನ್ಮಾನ ಮಾಧ್ಯಮಗಳು ಕೇವಲ ಮಂಡ್ಯದಲ್ಲಷ್ಟೇ ಚುನಾವಣೆ ನಡೆಯುತ್ತಿದೆ ಎಂಬಂತೆ ಬಿಂಬಿಸುತ್ತಿವೆ.

– ಮಂಡ್ಯದಲ್ಲಿ ಟೀಕೆ, ಆರೋಪ-ಪ್ರತ್ಯಾರೋಪ ಎಲ್ಲೆ ಮೀರಿದೆ ಅನಿಸುವುದಿಲ್ಲವಾ?
ಹೌದು. ಆದರೆ, ಪಕ್ಷೇತರ ಅಭ್ಯರ್ಥಿ ಏನಾದರೂ ಹೇಳಿಕೆ ಕೊಟ್ಟರೆ ಅದಕ್ಕೆ ಉತ್ತರ ನೀಡಬೇಕಲ್ಲವೇ. ಇಲ್ಲದಿದ್ದರೆ ಅವರು ಹೇಳಿದ್ದೇ ಸತ್ಯ ಎಂಬ ಸಂದೇಶ ಹೋಗುವುದಿಲ್ಲವೇ? ನಾನಾಗಿ ಯಾರ ಬಗ್ಗೆಯೂ ಹಗುರವಾಗಿ ಮಾತನಾಡಲು ಹೋಗುವುದಿಲ್ಲ. ನಮ್ಮ ಪಕ್ಷದ ಶ್ರೀಕಂಠೇಗೌಡರು, ಎಚ್‌.ಡಿ.ರೇವಣ್ಣ, ಶಿವರಾಮೇಗೌಡರು ವೈಯಕ್ತಿಕವಾಗಿ ಟೀಕೆ ಮಾಡಿದಾಗಲೂ ನಾನು ಕ್ಷಮೆಯಾಚಿಸಿದ್ದೇನೆ.

– ಕಾಂಗ್ರೆಸ್‌ ನಾಯಕರು ನಿಜಕ್ಕೂ ಮನಃಪೂರ್ವಕವಾಗಿ ಮೈತ್ರಿ ಧರ್ಮ ಪಾಲಿಸುತ್ತಿದ್ದಾರಾ?
ಆ ವಿಚಾರದಲ್ಲಿ ನನಗೇನೂ ಅನುಮಾನವಿಲ್ಲ. ಸಿದ್ದರಾಮಯ್ಯ, ಡಾ.ಜಿ.ಪರಮೇಶ್ವರ್‌, ದಿನೇಶ್‌ ಗುಂಡೂರಾವ್‌, ಈಶ್ವರ್‌ ಖಂಡ್ರೆ, ಡಿ.ಕೆ.ಶಿವಕುಮಾರ್‌, ಜಮೀರ್‌ ಅಹಮದ್‌ ಸಮೇತ ಎಲ್ಲರೂ ಒಟ್ಟಾಗಿಯೇ ಮೈತ್ರಿಕೂಟದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತಿದ್ದಾರೆ.

– ತುಮಕೂರಿನಲ್ಲಿ ಹೇಗಿದೆ?
ನಿಜ ಹೇಳಬೇಕಾದರೆ ತುಮಕೂರಿನಲ್ಲಿ ಜೆಡಿಎಸ್‌ನವರಿಗಿಂತ ಹೆಚ್ಚಾಗಿ ಕಾಂಗ್ರೆಸ್‌ನವರು ಎಚ್‌.ಡಿ.ದೇವೇಗೌಡರ ಪರ ಕೆಲಸ ಮಾಡುತ್ತಿದ್ದಾರೆ. ಆ ವಿಚಾರದಲ್ಲಿ ಐ ಆ್ಯಮ್‌ ವೆರಿ ಗ್ರೇಟ್‌ಫ‌ುಲ್‌ ಟು ಸಿದ್ದರಾಮಯ್ಯ ಅಂಡ್‌ ಪರಮೇಶ್ವರ್‌.

– ಜೆಡಿಎಸ್‌ ನಾಯಕರು ಕಾಂಗ್ರೆಸ್‌ ಪರ ಕೆಲಸ ಮಾಡುತ್ತಿದ್ದಾರಾ?
ಶೇ.100ಕ್ಕೆ 100ರಷ್ಟು ಕೆಲಸ ಮಾಡುತ್ತಿದ್ದಾರೆ. ಬಳ್ಳಾರಿ, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ನಾಯಕರ ಜತೆ ನಾನೇ ಸಭೆ ನಡೆಸಿ ಸೂಚನೆ ನೀಡಿದ್ದೇನೆ. ಬೆಂಗಳೂರಿನಲ್ಲಂತೂ ನಿಮಗೆ ಈ ಬಾರಿ ಅಚ್ಚರಿ ಫ‌ಲಿತಾಂಶ ಸಿಗಲಿದೆ ಕಾದು ನೋಡಿ. ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲಲಿದೆ.

– ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಎಷ್ಟು ಸ್ಥಾನ ಗೆಲ್ಲಲಿದೆ?
ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದೆ. ಮಾಧ್ಯಮಗಳಲ್ಲಿ ಬರುತ್ತಿರುವುದೇ ಬೇರೆ, ಗ್ರೌಂಡ್‌ ರಿಯಾಲಿಟಿನೇ ಬೇರೆ.

– ಲೋಕಸಭೆ ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಇರುತ್ತಾ?
ನಾನು ಮೊದಲೇ ಹೇಳಿದೆನಲ್ಲ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮತ್ತಷ್ಟು ಗಟ್ಟಿಗೊಳ್ಳಲಿದೆ. ಪಾಪ, ಬಿಜೆಪಿಯವರು ಕನಸು ಕಾಣುತ್ತಿದ್ದಾರೆ, ಭ್ರಮೆಯಲ್ಲಿದ್ದಾರೆ. ಅವರ ಸಂಚು ಫ‌ಲಿಸುವುದಿಲ್ಲ.

– ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಮೇಲೆ ಯಾಕೆ ನಿಮಗೆ ಆ ಪರಿ ಸಿಟ್ಟು
ಆದಾಯ ತೆರಿಗೆ ಇಲಾಖೆ ಕಾನೂನು ಪ್ರಕಾರ ದಾಳಿ ನಡೆಸಲು ನನ್ನ ಅಭ್ಯಂತರ ಇಲ್ಲ. ಐಟಿ, ಸಿಬಿಐ ಪಾವಿತ್ರ್ಯತೆ ಉಳಿಯಬೇಕು. ಆದಾಯ ತೆರಿಗೆ ಇಲಾಖೆ ದಾಳಿಗೆ ಕೆಲವು ಅಳತೆಗೋಲು, ಮಾನದಂಡ, ಸಿದ್ಧತಾ ಕ್ರಮಗಳು ಇವೆ. ಆದರೆ. ಇದ್ಯಾವುದೂ ಮಾಡದೆ ಏಕಾಏಕಿ ಬಿಜೆಪಿಯ ಸ್ಥಳೀಯ ನಾಯಕರು ಕೊಟ್ಟ ಲಿಸ್ಟ್‌ ಆಧಾರದಲ್ಲಿ ಅಮಿತ್‌ ಶಾ ಹಾಗೂ ನರೇಂದ್ರಮೋದಿ ಅವರ ಸೂಚನೆ ಮೇರೆಗೆ ದಾಳಿ ಮಾಡಲಾಗುತ್ತಿದೆ. ಇದು ತಪ್ಪಲ್ಲವೇ? ನಮ್ಮ ಮುಖಂಡರಲ್ಲಿ ಭಯ ಮೂಡಿಸುವುದಷ್ಟೇ ಇದರ ಉದ್ದೇಶ. ಕರ್ನಾಟಕವಷ್ಟೇ ಅಲ್ಲ, ಮಧ್ಯಪ್ರದೇಶ ಸೇರಿ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಪ್ರತಿಪಕ್ಷಗಳ ಮಣಿಸುವ ಕೆಲಸ ಬಿಜೆಪಿ ಮಾಡುತ್ತಿದೆ.

– ಲಿಸ್ಟ್‌ ಕೊಡುತ್ತಿರುವ ಬಿಜೆಪಿ ನಾಯಕರು ಯಾರು?
ಸಮಯ ಬಂದಾಗ ನಾನು ಹೇಳುತ್ತೇನೆ. ಆದರೆ, ಆದಾಯ ತೆರಿಗೆ ಇಲಾಖೆಯ ಪ್ರಧಾನ ಮಹಾನಿರ್ದೇಶಕ ಬಾಲಕೃಷ್ಣನ್‌ ಬಿಜೆಪಿಯ ಏಜೆಂಟ್‌ ಎಂಬುದರಲ್ಲಿ ಅನುಮಾನವೇ ಬೇಡ. ಆ ಮಾತಿನಿಂದ ನಾನು ಹಿಂದೆ ಸರಿಯುವುದೂ ಇಲ್ಲ.

ಮಂಡ್ಯ ಮತದಾರರ ಪಲ್ಸ್‌ ಗೊತ್ತಿದೆ
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಅವರ ಕಡೆಯವರು ಪ್ರಚೋದನೆ ಮಾಡುತ್ತಿರುವುದಂತೂ ಸತ್ಯ. ಆದರೂ ನಮ್ಮ ಕಾರ್ಯಕರ್ತರಿಗೆ ಸಹನೆ ಹಾಗೂ ತಾಳ್ಮೆಯಿಂದ ಇರುವಂತೆ ಸೂಚಿಸಿದ್ದೇನೆ. ಮಂಡ್ಯದಲ್ಲಿ ನಿಖೀಲ್‌ ಗೆಲುವು ಖಚಿತ. ಅಲ್ಲಿಯ ಮತದಾರರ ಪಲ್ಸ್‌ ನನಗೆ ಗೊತ್ತಿದೆ. ನಮ್ಮ ರಾಜಕೀಯ ವಿರೋಧಿಗಳೆಲ್ಲರೂ ಒಟ್ಟಾಗಿದ್ದಾರೆ.

– ಎಸ್‌. ಲಕ್ಷ್ಮಿನಾರಾಯಣ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ