Ashes Test : ಉಸ್ಮಾನ್ ಖ್ವಾಜಾ ಸೆಂಚುರಿ
Team Udayavani, Jun 18, 2023, 7:34 AM IST
ಬರ್ಮಿಂಗ್ಹ್ಯಾಮ್: ಆರಂಭಕಾರ ಉಸ್ಮಾನ್ ಖ್ವಾಜಾ ಆಪತ್ಕಾಲದ ಶತಕದ ಮೂಲಕ ಆಸ್ಟ್ರೇಲಿಯ ಸರದಿಯನ್ನು ಆಧರಿಸಿ ನಿಂತಿದ್ದಾರೆ. ಇಂಗ್ಲೆಂಡ್ ತಂಡದ 393 ರನ್ನುಗಳ ಮೊದಲ ಇನ್ನಿಂಗ್ಸ್ಗೆ ಉತ್ತರವಾಗಿ 5 ವಿಕೆಟಿಗೆ 278 ರನ್ ಗಳಿಸಿ ಬರ್ಮಿಂಗ್ಹ್ಯಾಮ್ ಟೆಸ್ಟ್ ಪಂದ್ಯದ 2ನೇ ದಿನದ ಅಂತಿಮ ಅವಧಿಯ ಆಟವನ್ನು ಮುಂದುವರಿಸುತ್ತಿದೆ. ಖ್ವಾಜಾ 119 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ವಿಕೆಟ್ ನಷ್ಟವಿಲ್ಲದೆ 14 ರನ್ ಮಾಡಿದಲ್ಲಿಂದ ಶನಿವಾರದ ಆಟ ಮುಂದುವರಿಸಿದ ಆಸ್ಟ್ರೇಲಿಯ, 29ಕ್ಕೆ ತಲುಪಿದ ವೇಳೆ ಅವಳಿ ಆಘಾತಕ್ಕೆ ಸಿಲುಕಿತು. ಸ್ಟುವರ್ಟ್ ಬ್ರಾಡ್ ಒಂದೇ ಓವರ್ನಲ್ಲಿ ಡೇವಿಡ್ ವಾರ್ನರ್ (9) ಮತ್ತು ಮಾರ್ನಸ್ ಲಬುಶೇನ್ (0) ಅವರನ್ನು ಪೆವಿಲಿಯನ್ಗೆ ಅಟ್ಟಿದರು. ಲಬುಶೇನ್ ಗೋಲ್ಡನ್ ಡಕ್ ಸಂಕಟಕ್ಕೆ ಸಿಲುಕಿದರು. ಸ್ಟೀವನ್ ಸ್ಮಿತ್ (16) ಕೂಡ ತಂಡದ ನೆರವಿಗೆ ನಿಲ್ಲಲಿಲ್ಲ. 67ಕ್ಕೆ 3 ವಿಕೆಟ್ ಬಿತ್ತು.
4ನೇ ವಿಕೆಟಿಗೆ ಜತೆಗೂಡಿದ ಖ್ವಾಜಾ-ಟ್ರ್ಯಾವಿಸ್ ಹೆಡ್ 81 ರನ್ ಪೇರಿಸಿದರು. ಐಸಿಸಿ ಟೆಸ್ಟ್ ಫೈನಲ್ನಲ್ಲಿ ಭರ್ಜರಿ ಸೆಂಚುರಿ ಬಾರಿಸಿದ್ದ ಹೆಡ್ ಕೊಡುಗೆ ಭರ್ತಿ 50 ರನ್. ಬಳಿಕ ಖ್ವಾಜಾ-ಕ್ಯಾಮರಾನ್ ಗ್ರೀನ್ (38) 72 ರನ್ ಜತೆಯಾಟ ನಡೆಸಿದರು.