ಕೋವಿಡ್ ಪ್ರಕರಣ : ಪಾಲಿಕೆ ಶಾಲಾ – ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ
Team Udayavani, Mar 23, 2021, 7:54 PM IST
ಬೆಂಗಳೂರು: ನಗರದಲ್ಲಿ ಕ್ಲಸ್ಟರ್ ಮಾದರಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆೆಲೆಯಲ್ಲಿ ಪಾಲಿಕೆಯ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಹಾಯಕ ಸಿಬ್ಬಂದಿಯನ್ನು ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಅವರು ನಿರ್ದೇಶನ ನೀಡಿದ್ದು, ಶಾಲಾ – ಕಾಲೇಜುಗಳಲ್ಲಿ ಸಾಮೂಹಿಕ ಕೊರೊನಾ ಸೋಂಕು ಪರೀಕ್ಷೆ ಪ್ರಾರಂಭಗೊಂಡಿದೆ.
ಪಾಲಿಕೆಯ 33 ಪ್ರೌಢ ಶಾಲೆ, 15 ಪ್ರಾಥಮಿಕ ಶಾಲೆ, 90 ನರ್ಸರಿಗಳು, 14 ಪಿಯು ಕಾಲೇಜುಗಳು, 4 ಪದವಿ ಕಾಲೇಜುಗಳಿದ್ದು, ಈ ವ್ಯಾಪ್ತಿಯಲ್ಲಿ ಒಟ್ಟು 13,839 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಎಲ್ಲ ವಿದ್ಯಾರ್ಥಿಗಳನ್ನು ಹಾಗೂ ಶಾಲಾ ಆಡಳಿತ ಮಂಡಳಿಯ ಸಿಬ್ಬಂದಿಯನ್ನು 15 ದಿನಗಳಿಗೆ ಒಮ್ಮೆ ಕಡ್ಡಾಯವಾಗಿ ಕೊರೊನಾ ಸೋಂಕು ಪರೀಕ್ಷೆಗೆ ಒಳಪಡಿಸುವಂತೆ ಆಯುಕ್ತರು ಸೂಚನೆ ನೀಡಿದ್ದು, ಕೊರೊನಾ ಸೋಂಕು ಪರೀಕ್ಷೆ ಚುರುಕು ಪಡೆದುಕೊಂಡಿದೆ. ಆದರೆ, ಇಲ್ಲಿಯವರೆಗೆ ಪಾಲಿಕೆಯ ಶಾಲಾ- ಕಾಲೇಜಿನ ಯಾವುದೇ ವಿದ್ಯಾರ್ಥಿ ಅಥವಾ ಶಿಕ್ಷಕರಿಗೆ ಕೊರೊನಾ ಸೋಂಕು ದೃಢಪಟ್ಟಿಲ್ಲ ಎಂದು ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ :ಮಠ-ಮಂದಿರಗಳ ಸಾಂಸ್ಕೃತಿಕ ಕಾರ್ಯಕ್ರಮ ಮಾದರಿ: ರೂಪಾ