ಗೋವಾ ಸಿಎಂ ಅಭ್ಯರ್ಥಿ: ಭಂಡಾರಿ ಸಮುದಾಯಯಕ್ಕೆ ಮಣೆ ಹಾಕಿದ ಆಪ್
Team Udayavani, Jan 19, 2022, 5:49 PM IST
ಪಣಜಿ: ಗೋವಾ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಬುಧವಾರ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಿದ್ದು, ಜಾತಿ ಲೆಕ್ಕಾಚಾರವನ್ನೂ ಹಾಕಿಕೊಂಡಿದೆ ಎನ್ನುವುದು ಸ್ಪಷ್ಟವಾಗಿದೆ.
ಪಣಜಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅಮಿತ್ ಪಾಲೇಕರ್ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಘೋಷಿಸಿ, ಗೋವಾದಲ್ಲಿ ಕೆಲ ಪಕ್ಷಗಳು ಹಣದ ಬಲದಿಂದ ಅಧಿಕಾರ ಪಡೆದುಕೊಂಡಿದ್ದಾರೆ. ಈ ಪಕ್ಷಗಳಿಂದ ಗೋವಾದ ಜನತೆ ಬೇಸರಗೊಂದಿದ್ದಾರೆ. ಇದರಿಂದಾಗಿ ದೆಹಲಿಯಂತೆಯೇ ಅಭಿವೃದ್ಧಿ ಮಾಡಲು ಆಮ್ ಆದ್ಮಿ ಪಕ್ಷ ಗೋವಾಕ್ಕೆ ಬಂದಿದೆ ಎಂದರು.
ಮುಖ್ಯಮಂತ್ರಿ ಅಭ್ಯರ್ಥಿ ಹೊಸ ಮುಖವಾಗಿದ್ದು, ಗೋವಾವನ್ನು ಪ್ರೀತಿಸುವರು ಗೋವಾಕ್ಕಾಗಿ ಪ್ರಾಣಕೊಡಬಲ್ಲ ವ್ಯಕ್ತಿ ಮಾತ್ರ ಗೋವಾದ ಮುಖ್ಯಮಂತ್ರಿಯಾಗಬೇಕು. ಗೋವಾ ಮುಖ್ಯಮಂತ್ರಿ ಸುಶಿಕ್ಷಿತರಾಗಿರಬೇಕು, ಸಮುದಾಯಕ್ಕೆ ಸೇವೆ ಸಲ್ಲಿಸುವವರಾಗಿರಬೇಕು. ಪ್ರಾಮಾಣಿಕ ವ್ಯಕ್ತಿಯಾಗಿರಬೇಕು ಎಂದರು.
ಗೋವಾದಲ್ಲಿ ಭಂಡಾರಿ ಸಮುದಾಯದ ಜನರು ಹೆಚ್ಚಿದ್ದಾರೆ, ಆದರೆ ಅವರಿಗೆ ಅನ್ಯಾಯ ಮಾಡಲಾಗಿದೆ. ನಾವು ಪ್ರತಿ ಸಮುದಾಯಕ್ಕೂ ನ್ಯಾಯ ನೀಡುತ್ತೇವೆ. ಹಾಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಭಂಡಾರಿ ಸಮುದಾಯದ ಅಭ್ಯರ್ಥಿಯೇ ಸೂಕ್ತ ಎಂದು ಕೇಜ್ರಿವಾಲ್ ಹೇಳಿದರು.