ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಡಲು ಸಾಧ್ಯವಿಲ್ಲ: ಜೊಲ್ಲೆ
Team Udayavani, Jun 1, 2020, 10:06 PM IST
ಹುಬ್ಬಳ್ಳಿ: ನನ್ನನ್ನು ಸಚಿವ ಸ್ಥಾನದಿಂದ ಕೈ ಬಿಡಲಾಗುತ್ತಿದೆ ಎನ್ನುವುದು ಕೇವಲ ಊಹಾಪೋಹ. ಪಕ್ಷಕ್ಕಾಗಿ ದುಡಿದಿರುವುದು ಹಾಗೂ ನನ್ನ ಹಿನ್ನೆಲೆ ನೋಡಿ ಅವಕಾಶ ನೀಡಿರುವುದರಿಂದ ಸಚಿವ ಸ್ಥಾನದಿಂದ ಕೈ ಬಿಡಲು ಸಾಧ್ಯವಿಲ್ಲ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದ ಸಾಮಾನ್ಯ ಕಾರ್ಯಕರ್ತಳಾಗಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇನೆ. ಹಲವು ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದಿದ್ದೇನೆ. ಇದ್ದಕ್ಕಿದ್ದಂತೆ ಬಂದು ಅಧಿಕಾರ ಪಡೆದಿಲ್ಲ. ಮಹಿಳಾ ಶಾಸಕರಲ್ಲಿ ಹಿರಿಯಳಾಗಿರುವುದರಿಂದ ಸಚಿವ ಸ್ಥಾನ ನೀಡಿದ್ದಾರೆ. ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರ ಆಶೀರ್ವಾದದಿಂದ ಈ ಅವಕಾಶ ದೊರೆತಿದೆ. ಪಕ್ಷಕ್ಕೆ ಪ್ರಾಮಾಣಿಕವಾಗಿದ್ದು, ಪಕ್ಷ ಹೇಳಿದಂತೆಯೇ ಬದ್ಧಳಾಗಿರುವುದರಿಂದ ಸಚಿವ ಸ್ಥಾನದಿಂದ ಕೈಬಿಡುತ್ತಾರೆ ಎನ್ನುವುದು ಕೇವಲ ವದಂತಿ. ಮನೆಯ ಜಗಳ ಮನೆಯ ಹಿರಿಯರೇ ಕುಳಿತು ಬಗೆಹರಿಸುತ್ತಾರೆ ಎಂದರು.