ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆ: ಶೀಘ್ರ ಕ್ರಮವೆಂದ ಗೃಹ ಸಚಿವರು
ರೌಡಿ ಶೀಟರ್ ಗೆ ಜೈಲು ಅಧಿಕಾರಿಗಳಿಂದ ವಿಶೇಷ ಆರೈಕೆ...!!
Team Udayavani, Jan 25, 2022, 6:24 PM IST
ಶಿವಮೊಗ್ಗ: ಪರಪ್ಪನ ಅಗ್ರಹಾರದಲ್ಲಿ ಅಕ್ರಮ ಚುಟುವಟಿಕೆಗಳ ಬಗ್ಗೆ ತನಿಖೆಯನ್ನು ನಡೆಸುತ್ತೆವೆ, ತಪ್ಪಿತಸ್ಥ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ರೌಡಿ ಶೀಟರ್ ಗೆ ಜೈಲು ಅಧಿಕಾರಿಗಳಿಂದ ವಿಶೇಷ ಆರೈಕೆ ನೀಡಲಾಗುತ್ತಿರುವ ವಿಡಿಯೋ ವೈರಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಭಯೋತ್ಪಾದನೆ, ತೀವ್ರ ಕುಕೃತ್ಯದಲ್ಲಿ ಭಾಗಿಯಾದವರು ಇರುವ ಸೆಲ್ ಗಳಿಗೆ ನಿಯಂತ್ರಣ ಹಾಕುತ್ತೇವೆ. ಪರಪ್ಪನ ಅಗ್ರಹಾರದಲ್ಲಿ ಜಾಮರ್ ಅಳವಡಿಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ.ಈ ಬಗ್ಗೆ ಸಿಎಂ ಜೊತೆ ಮಾತನಾಡಿ, ಕ್ರಮಕೈಗೊಳ್ಳುತ್ತೇವೆ ಎಂದರು.
ಇತ್ತೀಚಿಗೆ ನಾವು ಬಿಗಿಯಾದ ಕ್ರಮ ತೆಗೆದುಕೊಳ್ಳುತ್ತೀದ್ದೇವೆ. ನಾನು ಸಹ ವಿವರ ಕೇಳಿದ್ದೇನೆ ಎಂದರು.
ಏನೂ ತೊಂದರೆ ಇಲ್ಲ
ಉಸ್ತುವಾರಿ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಉಸ್ತುವಾರಿಯಾಗಿ ನನಗೆ ಏನೂ ತೊಂದರೆ ಇಲ್ಲ.ಚಿಕ್ಕಮಗಳೂರು ಜಿಲ್ಲೆ ನನಗೆ ಗೊತ್ತಿತ್ತು.. ತುಮಕೂರು ಹೊಸದು ನನಗೆ ಒಂದು ಸಂತೋಷವೆಂದರೆ ಇದ್ದಲ್ಲೇ ಇರೋದಕ್ಕಿಂತ ಹೊಸ ಹೊಸ ಸ್ಥಳಗಳಿಗೆ ಹೋಗಬೇಕು.ಅಲ್ಲಿನ ಸಮಸ್ಯೆ ಅರ್ಥ ಮಾಡ್ಕೋಬೇಕು. ಸಮಸ್ಯೆಗಳನ್ನು ಬಿಡಿಸುವ ಯೋಗ್ಯತೆ ನಮಗೆ ಬರಬೇಕು.ಅದೇ ನಮಗೆ ಇರುವಂತಹ ಚಾಲೆಂಜ್. ಅದನ್ನ ನಾನು ಮಾಡ್ತೇನೆ. ಯಾವುದೇ ತೊಂದರೆ ಇಲ್ಲ. ಇವತ್ತೇ ಹೋಗಿ ತುಮಕೂರಿನಲ್ಲಿ ನಿಲ್ಲುತ್ತೇನೆ. ನಾಳೆ ಧ್ವಜಾರೋಹಣ ನೆರವೇರಿಸಿ, ಸಾಧ್ಯವಾದರೆ ಕೋವಿಡ್ ನಿರ್ವಹಣೆ ಸಭೆ ಕೂಡ ಮಾಡುತ್ತೇನೆ ಎಂದರು.
ನನ್ನ ಬಗ್ಗೆ ಅವರಿಗೆ ಬಹಳ ಖಾತರಿ
ಯಾವುದೇ ಜಿಲ್ಲೆ ಕೊಟ್ಟರೂ ಮಂತ್ರಿಗಳಿಗೆ ಒಳ್ಳೆಯದಾಗುತ್ತೆ. ಹೋಗಿ ಕೆಲಸ ಮಾಡಬೇಕು.ಸ್ವಕ್ಷೇತ್ರದಲ್ಲಿ ಹಿರಿಯರಾದ ಈಶ್ವರಪ್ಪನವರು ಇದ್ದರು.ನನಗೆ ಮಲೆನಾಡು ಸರಿಯಾಗುತ್ತದೆ ಎಂದು ಸಿಎಂ ಅವರಿಗೂ ಹೇಳಿದ್ದೆ. ಅವರಿಗೆ ಅನಿಸಿರಬೇಕು. ನಾನು ಸ್ವಲ್ಪ ಬಯಲುಸೀಮೆಗೆ ಬರಲಿ ಅಂತಾ. ನನ್ನ ಬಗ್ಗೆ ಅವರಿಗೆ ಬಹಳ ಖಾತರಿ. ಅದಕ್ಕೆ ಕೊಟ್ಟಿದ್ದಾರೆ. ನಾನು ಸಂತೋಷದಿಂದ ಸ್ವೀಕರಿಸಿ ಮಾಡುತ್ತೇನೆ ಎಂದರು.
ಯತ್ನಾಳ್ ನಮ್ಮ ಸ್ನೇಹಿತರು.ಆ ರೀತಿ ಏನೂ ಇಲ್ಲ.ಇವತ್ತು ಜಗತ್ತೇ ಬಿಜೆಪಿ ಕಡೆ ನೋಡುತ್ತಿದೆ.ಹೀಗಿದ್ದಾಗ ಯಾರಾದರೂ ಬಿಟ್ಟೋಗ್ತಾರೇನ್ರೀ…?ಹೋದರೆ ಅವರಿಗೆ ಪ್ರಯೋಜನ ಇಲ್ಲ.ಒಳ್ಳೆಯ ಭವಿಷ್ಯ ಇಲ್ಲ ಎಂದರು.