
ಮೀಸಲು ಹೆಚ್ಚಳ: ಸರ್ಕಾರದ ಮೇಲೆ ಒತ್ತಡ ಇರುವುದು ನಿಜ: ಸಚಿವ ಆರ್.ಅಶೋಕ್
Team Udayavani, Nov 29, 2022, 6:40 AM IST

ಬೆಂಗಳೂರು: ಮೀಸಲಾತಿ ಹೆಚ್ಚಳ ವಿಚಾರವಾಗಿ ಸರ್ಕಾರದ ಮೇಲೆ ಒತ್ತಡ ಇರುವುದು ನಿಜ. ಇದೊಂದು ಜಟಿಲ ಸಮಸ್ಯೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ಸಮರ್ಥವಾಗಿ ನಿಭಾಯಿಸಲಿದ್ದಾರೆ ಎಂಬ ಭರವಸೆಯನ್ನು ಸಚಿವ ಆರ್.ಅಶೋಕ್ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗಾರರ ಜತೆ ಮಾತನಾಡಿ, ಈಗಾಗಲೇ ಪಂಚಮಸಾಲಿಗಳು ಕೂಡ 2ಎ ಮೀಸಲಾತಿಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಜತೆಗೆ ಕುರುಬ ಸಮುದಾಯ ಸೇರಿ ಹಲವು ಸಮುದಾಯಗಳು ಮೀಸಲಾತಿ ಬೇಡಿಕೆಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಎಲ್ಲವೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.
ಒಕ್ಕಲಿಗ ಸಮುದಾಯ ಕೂಡ ಈಗಾಗಲೇ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ನೀಡಿ ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದೆ. ಈಗಿರುವ ಮೀಸಲಾತಿ ಪ್ರಮಾಣವನ್ನು ಶೇ.4ರಿಂದ 12ಕ್ಕೆ ಏರಿಕೆ ಮಾಡುವಂತೆ ಮನವಿ ಮಾಡಿದೆ. ಇದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿದರು.
ನನಗೆ ಮುಂದಾಳತ್ವ ನೀಡಿದ್ದಾರೆ: ಆದಿಚುಂಚನಗಿರಿಯ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತ ಮುಂದಾಳತ್ವವನ್ನು ನನಗೆ ನೀಡಿದ್ದಾರೆ. ನಾನು, ಕೂಡ ಒಕ್ಕಲಿಗ ಸಮುದಾಯದಕ್ಕೆ ಸೇರಿದವನು. ಆ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದಲ್ಲಿ ನನಗೆ ಸಚಿವ ಸ್ಥಾನ ದೊರೆತಿದೆ. ಸಮುದಾಯಕ್ಕೆ ಮೀಸಲಾತಿ ದೊರಕಿಸುವುದು ನನ್ನ ಜವಾಬ್ದಾರಿ ಕೂಡ ಆಗಿದೆ. ಮೀಸಲಾತಿ ಹೆಚ್ಚಳ ಕುರಿತಂತೆ ಸಿಎಂ ಜತೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
