ಸ್ವಯಂಪ್ರೇರಿತ ದೂರು ದಾಖಲು, ಕ್ರಮ ಏಕಿಲ್ಲ?
ಎಲ್‌ಕೆಜಿ,ಯುಕೆಜಿ ಮಕ್ಕಳಿಗೆ ಆನ್‌ಲೈನ್ ಶಿಕ್ಷಣ; ಎಚ್ಚರಿಕೆ ನೀಡಿ 20 ದಿನ ಕಳೆದರೂ ಕ್ರಮವಿಲ್ಲ
Team Udayavani, Jun 8, 2020, 5:50 AM IST
ಸಾಂದರ್ಭಿಕ ಚಿತ್ರ.
ಬೆಂಗಳೂರು: ಎಳೆಯರಿಗೆ ಆನ್‌ಲೈನ್ ಶಿಕ್ಷಣ ನೀಡುವ ಶಾಲೆಗಳ ವಿರುದ್ಧ ಕ್ರಮ ಕಾದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಎಚ್ಚರಿಕೆ ನೀಡಿ 20 ದಿನಗಳು ಕಳೆದರೂ ಯಾರ ಮೇಲೂ ಕ್ರಮ ಕೈಗೊಳ್ಳಲಾಗಿಲ್ಲ. ಆನ್‌ಲೈನ್ ತರಗತಿ ನಿಲ್ಲಿಸಲು ಶಿಕ್ಷಣ ಸಚಿವರಿಗೆ, ಶಿಕ್ಷಣ ಇಲಾಖೆಗೆ ಸಾಧ್ಯವಾಗಿಲ್ಲ.
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿ ನಡೆಸಲು ಶಿಕ್ಷಣ ಇಲಾಖೆ ಅನುಮತಿ ಕಲ್ಪಿಸಿದೆ. ಆದರೆ ಕೆಲವು ಖಾಸಗಿ ಶಾಲೆಗಳು ಇದನ್ನು ದುರುಪಯೋಗ ಮಾಡಿಕೊಂಡು ಪೂ.ಪ್ರಾಥಮಿಕ, ಪ್ರಾಥಮಿಕ ತರಗತಿಗಳಿಗೂ ಆನ್‌ಲೈನ್ ಶಿಕ್ಷಣ ನೀಡುತ್ತಿದ್ದು, ಸಾವಿರಾರು ರೂ. ಶುಲ್ಕ ವಸೂಲಿ ಮಾಡುತ್ತಿವೆ. ಇದನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಗಿಲ್ಲ.
ಶುಲ್ಕ ಪಾವತಿಗೆ ವಾಟ್ಸ್ ಆ್ಯಪ್ ಸಂದೇಶ
ರಾಜ್ಯ ಸರಕಾರ ಶಾಸಗಿ ಶಾಲೆಗಳಿಗೆ ಶುಲ್ಕ ಸಂಗ್ರಹಕ್ಕೆ ಅನುಮತಿ ನೀಡಿದೆ. ಬೆಂಗಳೂರಿನ ನಾಗರಭಾವಿಯ ಖಾಸಗಿ ಶಾಲೆಯೊಂದು ಪೋಷಕರಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿ ಜೂ.5ರೊಳಗೆ ಶುಲ್ಕ ಪಾವತಿಸಬೇಕು, ಇಲ್ಲದಿದ್ದರೆ ಆನ್‌ಲೈನ್ ಶಿಕ್ಷಣಕ್ಕೆ ನಿಮ್ಮ ಮಗುವನ್ನು ಸೇರ್ಪಡೆ ಮಾಡಿಕೊಳ್ಳುವುದಿಲ್ಲ ಎಂದು ತಿಳಿಸಿರುವ ಉದಾಹರಣೆಯಿದೆ. ಇದೇ ರೀತಿ ನೂರಾರು ಶಾಲೆಗಳು ಪೋಷಕರಿಗೆ ಸಂದೇಶ ಕಳುಹಿಸಿವೆ.
ಈ ವಿಚಾರ ಸರಕಾರ, ಶಿಕ್ಷಣ ಇಲಾಖೆ ಮತ್ತು ಸ್ವತಃ ಸಚಿವ ಸುರೇಶ್ ಕುಮಾರ್‌ಗೂ ತಿಳಿದಿದೆ. ಆದರೆ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸೂಕ್ತ ನಿಯಮವನ್ನು ಶಿಕ್ಷಣ ಇಲಾಖೆ ರೂಪಿಸಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ.
ಕ್ರಮ ಕೈಗೊಳ್ಳಲು ಸಾಧ್ಯ
ಸೈಬರ್ ಕ್ರೆಂ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಯಾವೆಲ್ಲ ಶಾಲೆಗಳು ಆನ್‌ಲೈನ್ ತರಗತಿ ನಡೆಸುತ್ತಿವೆ ಎಂಬ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬಹುದು. ಕೆಲವು ಶಾಲೆಗಳು ಅವರದ್ದೇ ಆ್ಯಪ್ ಬಳಸಿ ಆನ್‌ಲೈನ್ ತರಗತಿ ನಡೆಸುತ್ತಿವೆ. ಇದರ ಮಾಹಿತಿ ಸೈಬರ್ ಕ್ರೈಂ ವಿಭಾಗಕ್ಕೆ ಸುಲಭವಾಗಿ ಸಿಗುತ್ತದೆ. ಹೀಗಾಗಿ ಸರಕಾರ ಅಥವಾ ಶಿಕ್ಷಣ ಇಲಾಖೆ ಯಾವುದೇ ದೂರು ಇಲ್ಲದೆ, ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಮಕ್ಕಳಿಗೆ ಆಗುತ್ತಿರುವ ಅನ್ಯಾಯ ತಡೆಯಲು ಸಾಧ್ಯವಿದೆ. ಪಾಲಕರಿಗೂ ಧೈರ್ಯ ತುಂಬಬಹುದಾಗಿದೆ ಎಂದು ಸೈಬರ್ ಕ್ರೈಂ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞರೊಬ್ಬರು ಮಾಹಿತಿ ನೀಡಿದ್ದಾರೆ.
ಶಾಲೆಗಳಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಸಂಬಂಧಿಸಿ ಈವರೆಗೂ ಯಾವುದೇ ಸ್ಪಷ್ಟ ನಿಯಮ ಇಲ್ಲ. ಹೀಗಾಗಿ ನಿಮ್ಹಾ®Õ… ತಜ್ಞರು, ಮಕ್ಕಳ ಮನೋಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ವಿವಿಧ ಕ್ಷೇತ್ರದ ಪ್ರಮುಖರ ಅಭಿಪ್ರಾಯ ಸಂಗ್ರಹಿಸಿ ಶೀಘ್ರವೇ ಸೂಕ್ತ ತೀರ್ಮಾನ ತೆಗೆದುಕೊಳ್ಳ ಲಿದ್ದೇವೆ. ಹೆಚ್ಚುವರಿ ಶುಲ್ಕ ಪಾವತಿ ಅಥವಾ ಆನ್‌ಲೈನ್ ತರಗತಿ ಒತ್ತಡದ ಕುರಿತು ದೂರು ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ.
– ಎಸ್.ಆರ್. ಉಮಾಶಂಕರ್,
ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ.