
ಅ.25: ದೀಪಾವಳಿ ದಿನ ಈ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ; ಭಾರತದಲ್ಲೂ ಗೋಚರ
ನವದೆಹಲಿಯಲ್ಲಿ ಮಧ್ಯಾಹ್ನ 2.28 ನಿಮಿಷಕ್ಕೆ ಮೊದಲು ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ
Team Udayavani, Oct 8, 2022, 3:00 PM IST

ನವದೆಹಲಿ: ಈ ವರ್ಷದ ಕೊನೆಯ ಭಾಗಶಃ ಸೂರ್ಯ ಗ್ರಹಣ ಅಕ್ಟೋಬರ್ 25ರಂದು ಗೋಚರವಾಗಲಿದ್ದು, ಕಾಕತಾಳೀಯ ಎಂಬಂತೆ ದೀಪಾವಳಿ ದಿನದಂದು ಸೂರ್ಯಗ್ರಹಣ ನಡೆಯಲಿದೆ. ಈ ಬಾರಿಯ ಭಾಗಶಃ ಸೂರ್ಯಗ್ರಹಣವು ಯುರೋಪ್, ಪಶ್ಚಿಮ ಸೈಬಿರಿಯಾ, ಮಧ್ಯ ಏಷ್ಯಾ ಮತ್ತು ಆಫ್ರಿಕಾದ ಈಶಾನ್ಯ ಭಾಗದಲ್ಲಿ ಗೋಚರಿಸಲಿದೆ.
ಇದನ್ನೂ ಓದಿ:ಸಾವರ್ಕರ್ ಬ್ರಿಟಿಷರಿಂದ ಸ್ಟೈಫಂಡ್ ಪಡೆಯುತ್ತಿದ್ದರು : ರಾಹುಲ್ ಗಾಂಧಿ ಹೇಳಿಕೆ
ಭಾರತದಲ್ಲಿಯೂ ಗೋಚರಿಸಲಿದೆ:
ಭಾರತದಲ್ಲಿಯೂ ವರ್ಷದ ಕೊನೆಯ ಭಾಗಶಃ ಸೂರ್ಯಗ್ರಹಣ ಗೋಚರಿಸಲಿದೆ ಎಂದು ಟೈಮ್ ಆ್ಯಂಡ್ ಡೇಟ್ ಡಾಟ್ ಕಾಮ್ ತಿಳಿಸಿದೆ. ನವದೆಹಲಿಯಲ್ಲಿ ಮಧ್ಯಾಹ್ನ 2.28 ನಿಮಿಷಕ್ಕೆ ಮೊದಲು ಭಾಗಶಃ ಸೂರ್ಯಗ್ರಹಣ ಗೋಚರವಾಗಲಿದೆ. ಹಂತ, ಹಂತವಾಗಿ ಗ್ರಹಣ ಮುಂದುವರಿದು ಸಂಜೆ 6.20ಕ್ಕೆ ಅಂತ್ಯವಾಗಲಿದೆ.
ಉಡುಪಿಯಲ್ಲಿಯೂ ಭಾಗಶಃ ಸೂರ್ಯಗ್ರಹಣ ಸಂಜೆ 5ಗಂಟೆ 8 ನಿಮಿಷಕ್ಕೆ ಗೋಚರವಾಗತೊಡಗಿ, 5.50ಕ್ಕೆ ಗರಿಷ್ಠ ಪ್ರಮಾಣದಲ್ಲಿ ಗೋಚರಿಸಿ, 6ಗಂಟೆ 6 ನಿಮಿಷಕ್ಕೆ ಗ್ರಹಣ ಕೊನೆಗೊಳ್ಳಲಿದೆ ಎಂದು ತಿಳಿಸಿದೆ.
ಗ್ರಹಣ ಸಂದರ್ಭದಲ್ಲಿನ ನಂಬಿಕೆಗಳು:
ಭಾರತದಲ್ಲಿ ಸಾಮಾನ್ಯವಾಗಿ ಸೂರ್ಯಗ್ರಹಣ ಸಮಯದಲ್ಲಿ ಜನರು ಮನೆಯೊಳಗೆ ಇದ್ದು, ಗ್ರಹಣ ಕಾಲದಲ್ಲಿ ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಅಷ್ಟೇ ಅಲ್ಲ ಯಾವುದೇ ದುಷ್ಪರಿಣಾಮ ಬೀಳದಿರಲಿ ಎಂದು ಊಟ, ತಿಂಡಿ, ನೀರಿಗೆ ಗರಿಕೆ ಹುಲ್ಲು ಅಥವಾ ತುಳಸಿ ಎಲೆಯನ್ನು ಹಾಕಿ ಇಟ್ಟಿರುತ್ತಾರೆ. ಇನ್ನೂ ಕೆಲವು ಜನರು ಗ್ರಹಣ ಮೋಕ್ಷದ ನಂತರ ಸ್ನಾನ ಮಾಡಿ, ಹೊಸ ಬಟ್ಟೆಯನ್ನು ಧರಿಸುವ ಕ್ರಮ ರೂಢಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.
ಮುಖ್ಯವಾಗಿ ಗರ್ಭಿಣಿಯರು ಮನೆಯಿಂದ ಹೊರ ಹೋಗದಂತೆ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಅದೇ ರೀತಿ ಗ್ರಹಣ ಕಾಲದಲ್ಲಿ ಆಹಾರ ಸೇವನೆ ಮತ್ತು ಊಟೋಪಚಾರ ತಯಾರಿಸುವುದು ನಿಷಿದ್ಧ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
