ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ
Team Udayavani, Nov 18, 2020, 4:59 PM IST
ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶಗೌಡ ಹತ್ಯೆ ಪ್ರಕರಣದ ಆರೋಪದಡಿ ಬಂಧನಕ್ಕೆ ಒಳಗಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ನಾಳೆಗೆ ಮುಂದೂಡಲಾಗಿದೆ.
ಧಾರವಾಡದ 3ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆಯರಾದ ಎಂ.ಪಂಚಾಕ್ಷರಿ ಈ ಆದೇಶ ಹೊರಡಿಸಿದ್ದಾರೆ.
ಸಿಬಿಐ ತಕರಾರು ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಗುರುವಾರ ವಿಚಾರಣೆ ನಡೆಯಲಿದೆ. ಸಿಬಿಐ ಅಧಿಕಾರಿಗಳ ತಂಡ ಬುಧವಾರ ತಕರಾರು ಅರ್ಜಿ ಸಲ್ಲಿಸಬೇಕಿತ್ತು. ಆದರೆ ಗುರುವಾರ ಸಲ್ಲಿಸುವುದಾಗಿ ಹೇಳಿದ್ದರಿಂದ ವಿಚಾರಣೆ ಮುಂದೂಡಿಕೆ ಮಾಡಲಾಗಿದೆ.
ಜಾಮೀನು ಕೋರಿ ಮಾಜಿ ಸಚಿವ ವಿನಯ ಕುಲಕರ್ಣಿ ಪರ ವಕೀಲ ಭರತಕುಮಾರ್ ಎಂ. ಅವರು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:ಮುಂದಿನ ಗಂಡಾಂತರ ತಪ್ಪಿಸಲು ಮರಾಠ ಪ್ರಾಧಿಕಾರ :ಸರಕಾರದ ನಿಲುವು ಸಮರ್ಥಿಸಿದ ಸಚಿವ ವಿ.ಸೋಮಣ್ಣ
ನಿರೀಕ್ಷಣಾ ಜಾಮೀನು ಅರ್ಜಿ ಹುಬ್ಬಳ್ಳಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ಉಪನಗರ ಪೊಲೀಸ್ ಠಾಣೆಯ ತನಿಖಾಧಿಕಾರಿಯಾಗಿದ್ದ ಚೆನ್ನಕೇಶವ ಟಿಂಗರಿಕರ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಧಾರವಾಡ ಹೈಕೋರ್ಟ್ ನ.23ಕ್ಕೆ ದೂಡಿ ಆದೇಶ ಹೊರಡಿಸಿದೆ.
ಸಿಬಿಐ ಅಧಿಕಾರಿಗಳು ತಕರಾರು ಅರ್ಜಿ ಸಲ್ಲಿಸಲು ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ನವೆಂಬರ್ 23ಕ್ಕೆ ಹೈಕೋರ್ಟ್ ಮುಂದೂಡಿದೆ.
ಈ ಹಿಂದೆ ಧಾರವಾಡದ ಮೂರನೇ ಅಧಿಕ ಹಾಗೂ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಟಿಂಗರಿಕರ್ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸಪೆಕ್ಟರ್ ಚನ್ನಕೇಶವ ಟಿಂಗರಿಕರ್ ಹೈಕೋರ್ಟ್ ಮೊರೆ ಹೋಗಿದ್ದರು. ನವೆಂಬರ್ 11ರಂದು ಒಂದು ವಾರ ವಿಚಾರಣೆ ಮುಂದೂಡಿದ್ದ ಧಾರವಾಡ ಹೈಕೋರ್ಟ್ ಮತ್ತೆ 23ಕ್ಕೆ ಮುಂದೂಡಿದೆ.