ಹೊಸ ಸರಕಾರಿ ಹಾಸ್ಟೆಲ್‌ಗೆ 6.5 ಕೋ.ರೂ. ಬಿಡುಗಡೆ
Team Udayavani, May 26, 2022, 2:10 AM IST
ಉಡುಪಿ: ಉಡುಪಿ ನಗರದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ಅನಂತರದ ಬಾಲಕಿಯರ ನೂತನ ಹಾಸ್ಟೆಲ್ ನಿರ್ಮಾಣಕ್ಕೆ 6.50 ಕೋ.ರೂ. ಹಂಚಿಕೆ ಮಾಡಲಾಗಿದೆ.
ಉಡುಪಿಯಲ್ಲಿ ವಿದ್ಯಾರ್ಥಿನಿ ಯರಿಗಾಗಿ ನೂತನ ಹಾಸ್ಟೆಲ್ ನಿರ್ಮಾಣವಾಗಲಿದೆ ಎಂದು ಉದಯವಾಣಿ ಫೆ. 12ರಂದು ವಿಸ್ತೃತ ವರದಿ ಪ್ರಕಟಿಸಿತ್ತು. ಉಡುಪಿಯಲ್ಲಿ ಮೆಟ್ರಿಕ್ ಅನಂತರದ ಬಾಲಕಿಯರ ವಿದ್ಯಾರ್ಥಿ ನಿಯಲಕ್ಕೆ ಸಾಕಷ್ಟು ಬೇಡಿಕೆ ಇರುವ ಹಿನ್ನೆಲೆಯಲ್ಲಿ ಹೊಸ ವಸತಿ ನಿಲಯ ಮಂಜೂರಾತಿಗೆ ಇಲಾಖೆಯ ಕೇಂದ್ರ ಕಚೇರಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದ ಪಕ್ಕದಲ್ಲಿರುವ ಇಲಾಖೆಯ ಜಮೀನಿನಲ್ಲಿ ಹೊಸ ಹಾಸ್ಟೆಲ್ ನಿರ್ಮಾಣಕ್ಕೆ 6.50 ಕೋ.ರೂ. ಅನುದಾನ ನೀಡಿ ಸರಕಾರ ಆದೇಶ ಹೊರಡಿಸಿದೆ. ಶೀಘ್ರವೇ ನಿರ್ಮಿತಿ ಕೇಂದ್ರ ಕಾಮಗಾರಿ ಆರಂಭಿಸಲಿದೆ. ಸಕ್ಷಮ ಪ್ರಾಧಿಕಾರದಿಂದ ಆಡಳಿತಾತ್ಮಕ ಅನುಮೋದನೆ ಪಡೆದ ಅನಂತರ ಕಾಮಗಾರಿ ಆರಂಭಕ್ಕೆ ನಿರ್ದೇಶನ ನೀಡಲಾಗಿದೆ.
200 ಮಂದಿಗೆ ಅವಕಾಶ
ಸುಮಾರು 200 ವಿದ್ಯಾರ್ಥಿನಿ ಯರಿಗೆ ಅನುಕೂಲವಾಗುವಂತೆ ಹಾಸ್ಟೆಲ್ ನಿರ್ಮಾಣ ಮಾಡಲಾಗು ವುದು. ಏಕರೂಪ ವ್ಯವಸ್ಥೆಯಲ್ಲಿ ಎಲ್ಲವೂ ಬರುವಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾಗಲಿದೆ. ಉಡುಪಿ ಅಜ್ಜರಕಾಡು ಸಹಿತ ಸುತ್ತಲಿನ ಪರಿಸರದಲ್ಲಿ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳು ಇರುವುದರಿಂದ ಉಡುಪಿ ಸಹಿತ ಹೊರ ಜಿಲ್ಲೆಯ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವ ರೀತಿಯಲ್ಲಿ ಹಾಸ್ಟೆಲ್ ನಿರ್ಮಿಸಲಿದ್ದೇವೆ ಎಂದು ಇಲಾಖೆಯ ಜಿಲ್ಲಾ ಅಧಿಕಾರಿ ದೇವೀಂದ್ರ ಬಿರಾದಾರ ಅವರು ಮಾಹಿತಿ ನೀಡಿದ್ದಾರೆ.