ಹಾವಂಜೆಯಲ್ಲಿ ಸೈಬೀರಿಯದ ಪಕ್ಷಿಗಳು!
75 ಬಗೆಯ ಪಕ್ಷಿ ಪ್ರಭೇದಗಳ ಗುರುತು
Team Udayavani, Dec 1, 2022, 11:14 AM IST
ಉಡುಪಿ: ಪಕ್ಷಿ ಪ್ರಪಂಚವೇ ವಿಸ್ಮಯ, ವಿಶಿಷ್ಟತೆಗಳ ಆಗರ. ಎಲ್ಲಿಯ ಸೈಬೀರಿಯ, ಎಲ್ಲಿಯ ಹಾವಂಜೆ? ಬರೋಬ್ಬರಿಗೆ 6 ಸಾವಿರ ಕಿ. ಮೀ. ದೂರವನ್ನು ಕ್ರಮಿಸಿ ದೂರದ ಸೈಬೀರಿಯ ದೇಶದಿಂದ ಹಾವಂಜೆ ಗ್ರಾಮಕ್ಕೆ ಪ್ರವಾಸ ಬಂದಿವೆ ಸೈಬೀರಿಯನ್ ಸ್ಟೋನ್‌ಚಾಟ್ ಎಂಬ ಹೆಸರಿನ ಮುದ್ದಾದ ಪಕ್ಷಿಗಳು.
ಹಾವಂಜೆ ಗ್ರಾ. ಪಂ. ವತಿಯಿಂದ ನಡೆದ ಪಕ್ಷಿ ವೀಕ್ಷಣೆ ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಣಿಪಾಲ ಬರ್ಡರ್ಸ್ ಕ್ಲಬ್‌ನ ಸದಸ್ಯರು ಹಲವು ಪಕ್ಷಿಗಳನ್ನು ಗುರುತಿಸಿದ್ದಾರೆ. ಇದರಲ್ಲಿ ವಿಶೇಷವಾಗಿರುವುದು ಸೈಬೀರಿಯನ್ ಸ್ಟೋನ್ ಚಾಟ್ ಪಕ್ಷಿ. ಚಳಿಗಾಲಕ್ಕೆ ದಕ್ಷಿಣ ಏಷ್ಯಾ ಕಡೆಗೆ ವಲಸೆ ಬರುವ ಈ ಪಕ್ಷಿಗಳು ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ನವೆಂಬರ್‌ನಿಂದ-ಫೆಬ್ರವರಿ ತಿಂಗಳವರೆಗೆ ಕಾಲ ಕಳೆದು. ಆಹಾರ, ಸಂತಾನೋತ್ಪತ್ತಿ ಪ್ರಕ್ರಿಯೆ ನಡೆಸಿ ತಮ್ಮ ಪ್ರದೇಶಕ್ಕೆ ಮರಳುತ್ತವೆ. ಹಾವಂಜೆ ಗ್ರಾಮದ ಸುತ್ತಮುತ್ತಲ ಪರಿಸರದಲ್ಲಿ ಸೈಬೀರಿಯನ್ ಸ್ಟೋನ್‌ಚಾಟ್ ಪಕ್ಷಿಗಳು ಸಾಕಷ್ಟು ಕಂಡು ಬಂದಿವೆ. ಸಾಮಾನ್ಯವಾಗಿ ಚಳಿಗಾಲದ ಅವಧಿಯಲ್ಲಿ ಕರಾವಳಿ ಕರ್ನಾಟಕದ ಕಡೆಗಳಲ್ಲಿ ಈ ಪಕ್ಷಿಗಳು ಮಣ್ಣಪಳ್ಳ ಸಹಿತ ಜಿಲ್ಲೆಯ ಹಲವು ಭಾಗದಲ್ಲಿ ಕಂಡು ಬರುತ್ತವೆ. ಹಾವಂಜೆಯ ಈ ಕಾರ್ಯಕ್ರಮದ ಆಯೋಜನೆ ಯಿಂದಾಗಿ ಅದನ್ನು ಇಲ್ಲಿಯೂ ಗುರುತಿಸಲು ಸಾಧ್ಯವಾಗಿದೆ ಎನ್ನುತ್ತಾರೆ ಮಣಿಪಾಲ ಬರ್ಡರ್ಸ್ ಕ್ಲಬ್ ಸದಸ್ಯರು.
ಅದೇ ರೀತಿ ಉತ್ತರ ಭಾರತದ ಹಿಮಾಲಯ, ದಿಲ್ಲಿ ಕಡೆಗಳಿಂದ ಹಲವಾರು ಪಕ್ಷಿಗಳು ಇಲ್ಲಿ ಕಾಣಬಹುದಾಗಿದೆ. ಗ್ರೇ ಸ್ವಂಪೇನ್, ನೀರಿನಲ್ಲಿರುವ ವರ್ಣರಂಜಿತ ಪಕ್ಷಿ ಜಕಾನ ಪ್ರಮುಖವಾಗಿವೆ. ರೆಡ್‌ವೆಂಟೆಡ್ ಬುಲ್ ಬುಲ್, ಮೈನಾ, ಕಿಂಗ್ ಫಿಶರ್, ಮಲಬಾರ್ ಹಾರ್ನ್ಬಿಲ್ಸ್ ಏಷ್ಯನ್ ಗ್ರೀನ್ ಬೀ ಈಟರ್, ಬ್ಲ್ಯೂಟೇಲ್ಡ್ -ಬೀ ಈಟರ್, ವೆರ್ನಲ್ ಹ್ಯಾಂಗಿಂಗ್ ಪ್ಯಾರೋಟ್, ಇಂಡಿಯನ್ ಗೋಲ್ಡನ್ ಒರಿಯೋಲ್, ಪಿನ್‌ಟೈಲ್ಡ್ ಸ್ನೈಪ್, ಬ್ರಾಹ್ಮಿಣಿ ಕೈಟ್ ಸಹಿತ 75ಕ್ಕೂ ಅಧಿಕ ಪಕ್ಷಿ ಪ್ರಭೇದಗಳನ್ನು ಗುರುತಿಸಿ, ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.
ಹಾವಂಜೆ ಗ್ರಾ.ಪಂ. ಜೀವ ವೈವಿಧ್ಯ ಸಮಿತಿ
ಹಾವಂಜೆ ಗ್ರಾ.ಪಂ. ಜೀವ ವೈವಿಧ್ಯ ನಿರ್ವಹಣ ಸಮಿತಿ ಹಾವಂಜೆ, ಗ್ರಾಮ ವಿಕಾಸ ಸಮಿತಿ ಆಶ್ರಯದಲ್ಲಿ ಭಾವನಾ ಪ್ರತಿಷ್ಠಾನ ಹಾವಂಜೆ ಸಹಯೋಗದೊಂದಿಗೆ ಪ್ರತಿಷ್ಠಾನದ ಡಾ| ಜನಾರ್ದನ್ ರಾವ್ ಅವರ ನೇತೃತ್ವದಲ್ಲಿ ನ.25ರಂದು ಬೆಳಗ್ಗೆ ಬೆಳಗ್ಗೆ ಪಕ್ಷಿ ವೀಕ್ಷಣೆ ಹಮ್ಮಿಕೊಳ್ಳಲಾಗಿತ್ತು. ಹಾವಂಜೆ ಶ್ರೀ ಮಹಾಲಿಂಗೇಶ್ವರ ದೇಗುಲದಿಂದ ಹೊರಟು ಕಂಬಳಕಟ್ಟ-ಹೊಳೆಬದಿ ರಸ್ತೆಯಲ್ಲಿ ಸಂಚರಿಸಿ ದೂಮಾವತಿ ಗರಡಿ ಬಳಿ ಯಿಂದ ಮೇಪಾವಳಿ ಕೆರೆ ಮಾರ್ಗವಾಗಿ ವೀಕ್ಷಣೆ ನಡೆಸಲಾಯಿತು. ಗ್ರಾ.ಪಂ. ಅಧ್ಯಕ್ಷ ಅಜಿತ್ ಗೋಳಿಕಟ್ಟೆ, ಪಿಡಿಒ ದಿವ್ಯಾ ಎಸ್., ಕಾರ್ಯದರ್ಶಿ ವಿಮಲಾಕ್ಷಿ ಶೆಟ್ಟಿ, ಸದಸ್ಯೆ ಆಶಾ ಡಿ. ಪೂಜಾರಿ, ಗ್ರಾ.ಪಂ. ಸಿಬಂದಿ. ಸ್ಥಳೀಯರು ಭಾಗವಹಿಸಿದ್ದರು. ಮಣಿಪಾಲ ಬರ್ಡರ್ ಕ್ಲಬ್ ತಂಡದವರು ಭಾಗವಹಿಸಿ ಪಕ್ಷಿಗಳ ಮಾಹಿತಿ ನೀಡಿದರು.
ಅರಿವು ಮೂಡಿಸುವುದು ಅಗತ್ಯ: ಹಾವಂಜೆಯಲ್ಲಿ ನಡೆದ ಪಕ್ಷಿ ವೀಕ್ಷಣೆ ಕಾರ್ಯಕ್ರಮ ವಿಶೇಷ ಅನುಭವ. ಸಾಮಾನ್ಯವಾಗಿ ಚಳಿಗಾಲದಲ್ಲಿ ವಿದೇಶ ಮತ್ತು ಉತ್ತರ ಭಾರತದಿಂದ ಕರಾವಳಿ ಕರ್ನಾಟಕದ ಕಡೆಗೆ ಹಲವು ಪಕ್ಷಿಗಳು ವಲಸೆ ಬರುತ್ತವೆ. ಈ ಕಾರ್ಯಕ್ರಮದ ಮೂಲಕ ಇಲ್ಲಿಯೂ ಸೈಬೀರಿಯದಿಂದ ಬರುವ ಪಕ್ಷಿಗಳನ್ನು ಗುರುತಿಸಲು ಸಾಧ್ಯವಾಯಿತು. ವನ್ಯಜೀವಿಗಳು, ಪ್ರಾಣಿ, ಪಕ್ಷಿಗಳ ಸಂರಕ್ಷಣೆಗಾಗಿ ಗ್ರಾಮಮಟ್ಟದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಜೀವ ವೈವಿಧ್ಯ ನಿರ್ವಹಣಾ ಸಮಿತಿ ರಚಿಸಲಾಗಿದೆ. ಬಹುತೇಕ ಗ್ರಾ.ಪಂ. ಗಳಲ್ಲಿ ಈ ಸಮಿತಿ ಇದ್ದರೂ ಇಲ್ಲದಂತಿದೆ. ಈ ನಿಟ್ಟಿನಲ್ಲಿ ಹಾವಂಜೆ ಗ್ರಾ. ಪಂ. ಮಾದರಿ ಎನಿಸಿದೆ. ಎಲ್ಲ ಗ್ರಾ.ಪಂ. ಈ ಸಮಿತಿ ಚಟುವಟಿಕೆಯಿಂದ ಕಾರ್ಯನಿರ್ವಹಿಸಬೇಕಿದೆ. – ತೇಜಸ್ವಿ ಆಚಾರ್ಯ, ಮಣಿಪಾಲ ಬರ್ಡರ್ ಕ್ಲಬ್