ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಪಲ್ಟಿ
Team Udayavani, May 11, 2022, 7:13 PM IST
ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮದ ಸೀಟು ಬಳಿ ಕೋಳಿ ಸಾಗಾಟದ ಗೂಡ್ಸ್ ವಾಹನ ಪಲ್ಟಿಯಾದ ಘಟನೆ ಬುಧವಾರ ನಡೆದಿದೆ.
ಬೆಂಗಳೂರಿನಿಂದ ಉಡುಪಿಗೆ ಕೋಳಿಗಳನ್ನು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಮುಂದಿನಿಂದ ಬಂದ ವಾಹನಕ್ಕೆ ದಾರಿ ನೀಡಲು ಎಡಬದಿಗೆ ಸರಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಮಳೆ, ಮಂಜು ಕವಿದ ವಾತಾವರಣ, ರಸ್ತೆಗೆ ಬಾಗಿ ನಿಂತಿರುವ ಮರಗಳು ಈ ಅಪಘಾತಕ್ಕೆ ಕಾರಣವಾಗಿವೆ ಎನ್ನಲಾಗಿದೆ.
ವಾಹನ ಪಲ್ಟಿಯಾಗುತ್ತಿದ್ದಂತೆ ಅದರಿಂದ ಭಾರೀ ಹೊಗೆ ಕಂಡು ಬಂದು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಯಿತು. ಇತರ ವಾಹನಗಳ ಚಾಲಕರು ಈ ಸಮಯ ವಾಹನಗಳನ್ನು ಮುಂದೆ ಚಲಾಯಿಸಲು ಹಿಂದೇಟು ಹಾಕಿದ ಪರಿಣಾಮ ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳ ಸರದಿ ಕಂಡುಬಂತು.
ಗೂಡ್ಸ್ ವಾಹನದಲ್ಲಿದ್ದ ಚಾಲಕ ಹಾಗೂ ಇನ್ನೋರ್ವ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ವಾಹನ ಮಗುಚಿಬಿದ್ದ ಸಂದರ್ಭ ಕೆಲವು ಕೋಳಿಗಳು ಹೆದರಿ ಕಾಡಿನತ್ತ ಓಡಿ ಹೋಗಿವೆ ಎನ್ನಲಾಗಿದೆ.