ಮಾಜಿ ಶಾಸಕ ಮೊಹಿಯುದ್ದೀನ್ ಬಾವಾರಿಂದ 20,000 ಕುಟುಂಬಕ್ಕೆ ಆಹಾರ ಸಾಮಗ್ರಿ ವಿತರಣೆ
Team Udayavani, Apr 6, 2020, 12:06 PM IST
ಸುರತ್ಕಲ್: ಕೋವಿಡ್-19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ದೇಶದ ಸರ್ಕಾರ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದೆ.ಈ ಹಿನ್ನಲೆಯಲ್ಲಿ ಮಾಜಿ ಶಾಸಕ ಮೊಹಿದ್ದೀನ್ ಬಾವ ಅವರು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಸುಮಾರು 20 ಸಾವಿರ ಕುಟುಂಬಗಳಿಗೆ ದಿನಸಿ ಸಾಮಾನುಗಳ ವಿತರಣೆ ಮಾಡಿದರು.
ಆದಿತ್ಯವಾರ ಸುರತ್ಕಲ್ ಸಮೀಪದ ಜನತಾ ಕಾಲನಿಯಲ್ಲಿ ಸ್ಥಳೀಯ ನಿವಾಸಿಗಳಿಗೆ ದಿನಸಿ ಸಾಮಗ್ರಿ ವಿತರಿಸಿದರು.ಈ ಸಂದರ್ಭ ಮಾತನಾಡಿದ ಅವರು ಪ್ರಪಂಚ, ನಮ್ಮ ದೇಶ ಕೋವಿಡ್-19 ವೈರಸ್ ಉಪಟಳವನ್ನು ಎದುರಿಸುತ್ತಿದೆ. ದೇಶದ ಜನರು ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ನಮ್ಮಿಂದ ಆದಷ್ಟು ಸಹಾಯವನ್ನು ಮಾಡಲು ಮುಂದೆ ಬಂದಿದ್ದೇವೆ. ನಾನು ಸೋತಿರಬಹುದು. ಆದರೆ ನನ್ನ ಮಾನವೀಯತೆ ಸೋತಿಲ್ಲ.ಕ್ಷೇತ್ರದ ಜನತೆಯ ಮೇಲೆ ನನಗೆ ಸದಾ ಅಭಿಮಾನ ,ಗೌರವವಿದೆ ಎಂದರು.
ಕೋವಿಡ್-19 ವೈರಸ್ ನಿವಾರಣೆಗೆ ನಾವು ಸರಕಾರದ ಆದೇಶವನ್ನು ಪಾಲಿಸಬೇಕಾಗಿದೆ ಎಂದು ಮಾಜಿ ಶಾಸಕ ಮೊಯಿದ್ದೀನ್ ಬಾವ ನುಡಿದರು.
ಅಕ್ಕಿ ಚೀಲ ಜೊತೆ ಜಾಗೃತಿ ಮಾಹಿತಿ
ಅಕ್ಕಿ ಚೀಲ ಜತೆ ಜಾಗೃತಿಯ ಅಂಗವಾಗಿ ಮನೆಯಲ್ಲಿಯೇ ಇರಿ, ಸುರಕ್ಷಿತವಾಗಿರಿ, ಸರಕಾರದ ಆದೇಶ ಪಾಲಿಸಿ ಎಂಬ ಪೋಸ್ಟರ್ ಕೂಡ ನೀಡಲಾಯಿತು.
ಸುರತ್ಕಲ್ ಚರ್ಚ್ ನ ಧರ್ಮಗುರುಗಳಾದ ಪೌಲ್ ಡಿಸೋಜ, ಚೊಕ್ಕಬೆಟ್ಟು ಮಸೀದಿಯ ಧರ್ಮಗುರು ಅಬ್ದುಲ್ ಅಝೀಝ್ ದಾರಿಮಿ ಜೊತೆಗಿದ್ದು ಮಾಜಿ ಶಾಸಕರ ಕಾರ್ಯವನ್ನು ಶ್ಲಾಘಿಸಿದರು.