ಅರಕಲಗೂಡು ಸರ್ಕಾರಿ ಆಸ್ಪತ್ರೆ : ನಡುರಾತ್ರಿ ನವಜಾತ ಗಂಡು ಶಿಶು ಅಪಹರಣ
Team Udayavani, Mar 14, 2022, 7:35 PM IST
ಹಾಸನ: ಅರಕಲಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮಧ್ಯರಾತ್ರಿ ನವಜಾತ ಗಂಡು ಶಿಶುವನ್ನು ಅಪಹರಿಸಿರುವ ಕಳವಳಕಾರಿ ಘಟನೆ ನಡೆದಿದೆ.
ಈ ಸಂಬಂಧ ದೂರು ದಾಖಲಾಗಿದ್ದು, ಅಸ್ಸಾಂ ಮೂಲದ ಕೂಲಿ ಕಾರ್ಮಿಕರಾಗಿರುವ ಮಗುವಿನ ತಾಯಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಮಕ್ಕಳನ್ನು ಅಪಹರಿಸುವವರು ನರ್ಸ್ ರೀತಿಯಲ್ಲ ವೇಷ ಧರಿಸಿ ಆಸ್ಪತ್ರೆಯ ಹಿಂಬಾಗಿಲಿನಿಂದ ಪ್ರವೇಶ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಮವಸ್ತ್ರದಲ್ಲಿದ್ದ ಕಾರಣ ಅವರನ್ನು ಯಾರೂ ಪ್ರಶ್ನಿಸಿರಲಿಲ್ಲ.ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಪೊಲೀಸರು ಸುಳಿವು ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ. ಈ ಸಂಬಂಧ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ದೀಪಕ್ ಅರಕಲಗೂಡು ಠಾಣೆಗೆ ದೂರು ನೀಡಿದ್ದರು.
ಅಸ್ಸಾಂ ಮೂಲದ ಮಹಿಳೆ ಭಾನುವಾರ ಸಂಜೆ 7 ಗಂಟೆಗೆ ಆಸ್ಪತ್ರೆಗೆ ದಾಖಲಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ರಾತ್ರಿ 7 ಗಂಟೆ ಸುಮಾರಿಗೆ ಆಸ್ಪತ್ರೆಗೆ ಪ್ರವೇಶಿಸಿದ್ದ ಮಕ್ಕಳ ಕಳ್ಳರು ಮಧ್ಯರಾತ್ರಿಯವರೆಗೆ ಕಾಯುತ್ತಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ತನಿಖೆಯನ್ನು ನಡೆಸಲಾಗುತ್ತಿದೆ.