ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಗಂಟಲು ಮಾರಿ ಸೋಂಕು

Team Udayavani, Sep 11, 2019, 3:08 AM IST

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಡಿಫ್ತೀರಿಯಾ (ಗಂಟಲು ಮಾರಿ) ರೋಗ ಮೂರು ಪಟ್ಟು ಹೆಚ್ಚಳವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿವೆ. ಸೂಕ್ತ ಸಮಯದಲ್ಲಿ ಮಕ್ಕಳಿಗೆ ಡಿಫ್ತೀರಿಯಾ ಲಸಿಕೆ ಹಾಕಿಸದ ಕಾರಣ ರೋಗ ಕಾಣಿಸಿಕೊಳ್ಳುತ್ತಿದೆ. ಡಿಫ್ತೀರಿಯಾ ರೋಗವು ಸೋಂಕಿತ ವ್ಯಕ್ತಿಯಿಂದ ಮತ್ತೂಬ್ಬರಿಗೆ ವೇಗವಾಗಿ ಹರಡುತ್ತದೆ. ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಪ್ರಸಕ್ತ ವರ್ಷಾರಂಭದಿಂದ ಆಗಸ್ಟ್‌ ಅಂತ್ಯಕ್ಕೆ 305 ಮಂದಿ ಶಂಕಿತ ಸೋಂಕಿತರನ್ನು ಗುರುತಿಸಲಾಗಿದ್ದು, ಆ ಪೈಕಿ 8 ಮಂದಿ ರೋಗಕ್ಕೆ ಸಾವಿಗೀಡಾಗಿದ್ದಾರೆ.

ಶಂಕಿತರಲ್ಲಿ ಶೇ.60ಕ್ಕೂ ಹೆಚ್ಚಿನ ಮಂದಿ ವಿಜಯಪುರ, ಕೊಪ್ಪಳ, ಕಲಬುರಗಿ, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಯವರಾಗಿದ್ದಾರೆ. ಹಿಂದೆಲ್ಲ 5- 8 ವರ್ಷದ ಒಳಗಿನ ಮಕ್ಕಳಲ್ಲಿ ಮಾತ್ರವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ಈ ರೋಗ, ಇದೀಗ ದೊಡ್ಡ ಮಕ್ಕಳಲ್ಲೂ ಪತ್ತೆಯಾಗುತ್ತಿರುವುದು ಭೀತಿ ಮೂಡಿಸಿದೆ. ಪ್ರಸಕ್ತ ಸಾಲಿನಲ್ಲಿ ಶಂಕಿತರು ಎಂದು ಗುರುತಿಸಿದವರಲ್ಲಿ 5 ರಿಂದ 10 ವರ್ಷದ ಮಕ್ಕಳು ಶೇ.42ರಷ್ಟು, 10 ರಿಂದ 16 ವರ್ಷದ ಮಕ್ಕಳು ಶೇ.24ರಷ್ಟು, 16ಕ್ಕಿಂತ ಹೆಚ್ಚಿನ ವಯಸ್ಸಿನ ಶೇ.20ರಷ್ಟು ಮಂದಿ ಇದ್ದಾರೆ.

ಮೂರು ಪಟ್ಟು ಹೆಚ್ಚಳ: ಸಾಂಕ್ರಾಮಿಕ ರೋಗ ವಾಗಿರುವ ಡಿಫ್ತೀರಿಯಾ, ಕಳೆದ ಎರಡು ವರ್ಷ ಗಳಿಗಿಂತ ಈ ಬಾರಿ ರಾಜ್ಯ ದಲ್ಲಿ ಹೆಚ್ಚಾಗಿದೆ. 2017ರಲ್ಲಿ 203 ಶಂಕಿತ ಸೋಂಕಿತರು, 2018ರಲ್ಲಿ 115 ಶಂಕಿತ ಸೋಂಕಿತರು ಪತ್ತೆಯಾ ಗಿದ್ದರು. ಈ ಬಾರಿ ಆಗಸ್ಟ್‌ ಅಂತ್ಯಕ್ಕೆ 305 ಮಂದಿ ಶಂಕಿತ ಸೋಂಕಿತರು ಪತ್ತೆಯಾಗಿ ಆತಂಕ ಮೂಡಿಸಿದೆ. ಕಲಬುರಗಿಯಲ್ಲಿ ಆಗಸ್ಟ್‌ ಅಂತ್ಯಕ್ಕೆ 46 ಶಂಕಿತರು ಪತ್ತೆಯಾಗಿದ್ದಾರೆ. ಕಲಬುರಗಿಯಲ್ಲಿ ಒಂದೇ ಕಾಲೇಜು ವಿದ್ಯಾರ್ಥಿ ನಿಲಯದ 25 ವಿದ್ಯಾರ್ಥಿನಿಯರು ಶಂಕಿತರಾಗಿದ್ದರು. ಈ ವಾರ ಮತ್ತೆ ಒಂಭತ್ತು ಪ್ರಕರಣಗಳು ಕಾಣಿಸಿಕೊಂಡಿವೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಉತ್ತರ ಕರ್ನಾಟಕದಲ್ಲಿ ಹೆಚ್ಚಳ ಏಕೆ?: ಲಸಿಕೆ ಹಾಕಿಸುವ ಪ್ರಮಾಣ ಎಲ್ಲಿ ಕಡಿಮೆ ಇರುತ್ತದೆಯೋ ಆ ಭಾಗದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಗು ಜನಿಸಿದ ಒಂದೂವರೆ ವರ್ಷ ದೊಳಗೆ ಹಾಗೂ ಐದು ವರ್ಷ ಇದ್ದಾಗ ಡಿಫ್ತೀರಿಯಾ ಲಸಿಕೆ ಯನ್ನು ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಬೇಕು. ಉತ್ತರ ಕರ್ನಾಟಕ ಭಾಗದ ಜನರಲ್ಲಿ ಹೆಚ್ಚಿರುವ ವಲಸೆ ಪ್ರವೃತ್ತಿ, ಸಂತಾನೋತ್ಪತ್ತಿ ಪ್ರಮಾಣ, ಕಡಿಮೆ ಆರೋಗ್ಯ ಕಾಳಜಿಯಂತಹ ಅಂಶಗಳು ಮಕ್ಕಳಿಗೆ ಸೂಕ್ತ ಸಮಯಕ್ಕೆ ಲಸಿಕೆ ಹಾಕಿಸುವುದನ್ನು ಮರೆಸುತ್ತವೆ. ಹೀಗಾಗಿಯೇ, ಆ ಭಾಗದಲ್ಲಿ ರೋಗ ಹೆಚ್ಚು ಕಂಡು ಬರುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆಯ ಲಸಿಕಾ ವಿಭಾಗದ ವೈದ್ಯರು.

ಏನಿದು ಡಿಫ್ತೀರಿಯಾ?: ಡಿಫ್ತೀರಿಯಾ ಎಂಬುದು ಕೊರಿನೇ ಬ್ಯಾಕ್ಟಿರಿಯಂ ಡಿಫ್ತೀ ರಿಯಾ ಟ್ಯಾಕ್ಸಿಜೆನಿಕ್‌ ತಳಿಯಿಂದ ಉಂಟಾಗುವ ಗಂಟಲು ಸೋಂಕು. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಹಾಗೂ ಡಿಫ್ತೀರಿಯಾ ಲಸಿಕೆ ಹಾಕಿಸಿಕೊಳ್ಳದ ಮಕ್ಕಳಲ್ಲಿ ಇದು ಕಾಣಿಸಿ ಕೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಚುಚ್ಚುಮದ್ದು ಹಾಕಿಸು ವಲ್ಲಿ ತೋರುವ ನಿರ್ಲಕ್ಷ್ಯವೇ ರೋಗಕ್ಕೆ ಕಾರಣ. ಇದರಲ್ಲಿನ ಬ್ಯಾಕ್ಟೀರಿಯಾ ಗಂಟಲು ಸೇರಿದರೆ ಅಲ್ಲಿ ದ್ರವ ರೂಪದಲ್ಲಿ ಮಾಸಲು ಅಥವಾ ಬಿಳಿಯ ಪದರ ಸೃಷ್ಟಿಸಿ, ಸಂತಾನೋತ್ಪತ್ತಿ ಮಾಡಿಕೊಳ್ಳುತ್ತದೆ.

ಈ ಪದರ ಒಮ್ಮೆ ಗಂಟಲನ್ನು ಕಚ್ಚಿಕೊಂ ಡರೆ ತೆಗೆಯಲು ಸಾಧ್ಯವಿಲ್ಲ. ತೆಗೆಯಲು ಪ್ರಯತ್ನಿಸಿದರೆ ರಕ್ತಸ್ರಾವ ಆಗುತ್ತದೆ. ಈ ಬ್ಯಾಕ್ಟೀರಿಯಾವು ಬಾಯಿ ಹಾಗೂ ಗಂಟಲಿನ ನರಗಳು ಮತ್ತು ಮಾಂಸಖಂಡಗಳನ್ನು ದುರ್ಬಲಗೊಳಿಸಿ ಕ್ರಿಯಾ ಹೀನಗೊಳಿಸುತ್ತದೆ. ಇದರಿಂದ ಮಾತು ನಿಂತು ಹೋಗಿ, ಉಸಿರಾಡಲು ಸಾಧ್ಯವಾಗದಂತೆ ಮಾಡುತ್ತದೆ. ಆಗ ರೋಗಿಯೂ ಉಸಿರುಗಟ್ಟಿ ಸಾವನ್ನಪ್ಪುವ ಸಾಧ್ಯತೆಗಳಿವೆ. ಗಂಟಲಲ್ಲಿ ಉತ್ಪತ್ತಿಯಾಗುವ ಟ್ಯಾಕ್ಸಿನ್‌, ರಕ್ತದಲ್ಲಿ ಸೇರಿ ಹೃದಯ, ಮೂತ್ರಪಿಂಡ ಸೇರಿ ದೇಹದ ಇತರ ಅಂಗಗಳನ್ನು ವೈಫ‌ಲ್ಯಗೊಳಿಸುತ್ತದೆ.

ರೋಗ ಲಕ್ಷಣಗಳು: ಗಂಟಲು ನೋವು, ನುಂಗಲು ತೊಂದರೆ, ಸ್ಪಲ್ಪ ಜ್ವರ, ಗಂಟಲಲ್ಲಿ ಬೂದು ಅಥವಾ ಕಪ್ಪು ಬಣ್ಣದ ಪದರ ಕಾಣಿಸಿಕೊಳ್ಳುವುದು. ಗಂಟಲು ರಕ್ತಸ್ರಾವವಾಗುವುದು ರೋಗದ ಪ್ರಮುಖ ಲಕ್ಷಣವಾಗಿದೆ. ಶೇ.99 ರಷ್ಟು ಉಸಿರಾಟದಿಂದ ತಗಲುವ ಸೋಂಕಾಗಿದೆ. ಸೋಂಕಿತರ ಕೆಮ್ಮು, ಸೀನು, ಉಗುಳು, ಮೂಗಿನ ದ್ರವ ಹಾಗೂ ರೋಗಿ ಬಳಸುವ ಕರವಸ್ತ್ರಗಳಿಂದ ಇದು ಹರಡಲಿದ್ದು, ಅಂತರ ಕಾಯ್ದುಕೊಳ್ಳಬೇಕು. ಶಂಕಿತರು ಸೂಕ್ತ ಚಿಕಿತ್ಸೆ ಪಡೆದುಕೊಂ ಡರೆ ವಾರದಲ್ಲಿಯೇ ರೋಗ ವಾಸಿ ಯಾಗುತ್ತದೆ ಎನ್ನುತ್ತಾರೆ ವೈದ್ಯರು.

ವಿವಿಧ ಜಿಲ್ಲೆಯ ಪ್ರಕರಣಗಳು
ವಿಜಯಪುರ – 46
ಕಲಬುರಗಿ- 46
ರಾಯಚೂರು – 23
ಕೊಪ್ಪಳ- 31
ಬಾಗಲಕೋಟೆ – 26

* ಜಯಪ್ರಕಾಶ್‌ ಬಿರಾದಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ