“ಸರಕಾರದ ನಿಯಮಗಳನ್ನು ಪಾಲಿಸೋಣ’
Team Udayavani, Apr 12, 2020, 5:28 AM IST
ಬೆಂಗಳೂರು: ವಿಶ್ವದಾದ್ಯಂತ ತಲ್ಲಣ ಸೃಷ್ಟಿಸಿರುವ ಕೋವಿಡ್ 19ಸೋಂಕಿನಿಂದ ಪಾರಾಗಲು ಎಲ್ಲ ದೇಶಗಳು ಲಾಕ್‌ಡೌನ್ ಮೊರೆ ಹೋಗಿದ್ದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸುತ್ತಿದೆ. ಹೀಗೆ ಭಾರತ ಕ್ರಿಕೆಟ್ ತಂಡದ ಮಾಜಿ ವೇಗಿ ಕನ್ನಡಿಗ ಜಾವಗಲ್ ಶ್ರೀನಾಥ್ ಕೂಡ ಜನಸಾಮಾನ್ಯರಲ್ಲಿ ಕೋವಿಡ್-19 ಕುರಿತಾಗಿ ಜಾಗೃತಿ ಮೂಡಿಸಿದ್ದು, ಎಲ್ಲರೂ ಒಗ್ಗಟ್ಟಾಗಿ ಸರಕಾರದ ಆದೇಶಗಳನ್ನು ಪಾಲಿಸುವ ಮೂಲಕ ಜಗತ್ತಿನಿಂದ ಈ ಸೋಂಕನ್ನು ಒ¨ªೋಡಿಸೋಣ ಎಂದು ವೀಡಿಯೋ ಸಂದೇಶದ ಮೂಲಕ ಕರೆ ನೀಡಿದ್ದಾರೆ.
ಕೋವಿಡ್ 19 ಪ್ರಪಂಚದೆಲ್ಲೆಡೆ ಹಬ್ಬಿ ತೊಂದರೆ ಕೊಟ್ಟಿದೆ. ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಕೊಂಚ ಹಿಡಿತದಲ್ಲಿದೆ. ಇದಕ್ಕೆ ಕಾರಣ ಸರಕಾರ ತೆಗೆದುಕೊಂಡ ನಿರ್ಧಾರಗಳು. ಆದರೆ ಸರಕಾರದ ಈ ನಿರ್ಧಾರಗಳನ್ನು ಗಾಳಿಗೆ ತೂರುವಂಥ ಕೆಲಸವನ್ನು ನಾವು ಮಾಡಬಾರದು. ಸರಕಾರ ಹೇಳುವಂತಹ ಎಲ್ಲ ಕ್ರಮಗಳಿಗೆ ನಾವೆಲ್ಲರೂ ಸ್ಪಂದಿಸಿದರೆ ಮಾತ್ರ ಈ ಮಹಾಮಾರಿಯನ್ನು ಹೊಡೆದೋಡಿಸಬಹುದು. ಹೀಗಾಗಿ ಎಲ್ಲರೂ ಸಹಕರಿಸಬೇಕೆಂದು ಶ್ರೀನಾಥ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.ಪೊಲೀಸ್, ವೈದ್ಯ, ಪೌರಕಾರ್ಮಿಕರ ಸೇವೆ ಶ್ಲಾಘನೀಯ.
ಕೋವಿಡ್ 19ವೈರಸ್ ಸಂಕಷ್ಟದ ದಿನಗಳಲ್ಲಿಯೂ ತಮ್ಮ ಕುಟುಂಬವನ್ನು ಮರೆತು ಹಗಲು ರಾತ್ರಿ ದುಡಿಯುತ್ತಿರುವ ಪೊಲೀಸ್, ವೈದ್ಯಕೀಯ ಬಳಗ ಯೋಧರಂತೆ ಈ ಮಹಾಮಾರಿಯನ್ನು ಹೋಗಲಾಡಿಸಲು ಶ್ರಮ ಪಡುತ್ತಿದ್ದಾರೆ. ಉಳಿದಂತೆ ಪೌರಕಾರ್ಮಿಕರು ಕೂಡ ದಿನನಿತ್ಯ ಕಸವನ್ನು ತೆಗೆದು ದೇಶದಲ್ಲಿ ಶುಚಿತ್ವ ಕಾಪಾಡುತ್ತಿದ್ದಾರೆ. ಹೀಗಿರುವಾಗ ನಾವೆಲ್ಲರೂ ಬೇಜವಾಬ್ದಾರಿಯಿಂದ ಹೊರಗಡೆ ತಿರುಗುತ್ತಿದ್ದೇವೆ. ಇನ್ನಾದರೂ ನಾವು ಎಚ್ಚೆತ್ತು ಸರಕಾರದ ನಿಯಮಗಳನ್ನು ಪಾಲಿಸಿ ಮನೆಯಲ್ಲೆ ಇರೋಣ ಈ ಮೂಲಕವಾದರೂ ಪೊಲೀಸ್, ವೈದ್ಯ ಹಾಗೂ ಪೌರ ಕಾರ್ಮಿಕರ ಶ್ರಮಕ್ಕೆ ಕೈಜೋಡಿಸೋಣ ಎಂದು ಶ್ರೀನಾಥ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.