ಜನ ಬದಲಾವಣೆ ಬಯಸಿದ್ದಾರೆ: ಎಚ್ಡಿಕೆ

Team Udayavani, Nov 23, 2019, 3:07 AM IST

ಬೆಂಗಳೂರು: ಲೋಕಸಭೆ ಚುನಾವಣೆ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಅವರು ಹದಿನೈದು ಕ್ಷೇತ್ರ ಗೆಲ್ಲುತ್ತೇವೆಂದು ಹೇಳುತ್ತಿದ್ದಾರೆ. ಆದರೆ, ಜನತೆ ಬದಲಾವಣೆ ಬಯಸಿದ್ದಾರೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಪರ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಡಿ ಯೂರಪ್ಪ ಅವರನ್ನು ಯಾವ ರೀತಿ ತೆಗೆಯ ಬೇಕೆಂದು ಕೇಂದ್ರ ಬಿಜೆಪಿ ನಾಯಕರು ಕಾಯುತ್ತಿದ್ದಾರೆ. ಡಿ.9ರ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಅವರೇ ಇದು ನನ್ನ ಕೊನೆಯ ಸಂಪುಟ ಸಭೆ ಎಂದು ಹೇಳಿದ್ದಾರೆ. ಅವರು ಯಾಕೆ ಆ ರೀತಿ ಹೇಳಿದರು, ಆತಂಕ ಇಲ್ಲದೆ ಹೇಳುತ್ತಾರಾ ಎಂದು ಪ್ರಶ್ನಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮೊದಲಿನಿಂದ ಮಾಡುತ್ತಿದ್ದರು. ಪಕ್ಷದ ಎಲ್ಲ ನಾಯಕರ ಜತೆ ಚರ್ಚಿಸಿ ಗಿರೀಶ್‌ ನಾಶಿ ಅವರನ್ನು ಆಯ್ಕೆ ಮಾಡಿದ್ದೇವೆ.

ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಇದೆ ಎಂದು ಇಲ್ಲಿ ಒಕ್ಕಲಿಗರಿಗೆ ಟಿಕೆಟ್‌ ಕೊಡಬೇಕೆಂಬ ಬೇಡಿಕೆ ಇತ್ತು. ಆದರೆ, ನಮ್ಮದು ಜಾತ್ಯತೀತ ಪಕ್ಷ. ಹೀಗಾಗಿ, ವೀರಶೈವ ಸಮುದಾಯದವರಿಗೆ ಟಿಕೆಟ್‌ ಕೊಟ್ಟಿದ್ದೇವೆಂದು ಹೇಳಿದರು. ಇಲ್ಲಿನ ಬಿಜೆಪಿ ಅಭ್ಯರ್ಥಿ ಹಿನ್ನೆಲೆ ನನಗೆ ಗೊತ್ತಿದೆ, ನನ್ನಿಂದ ಬೆಳೆದು ಸ್ವಾರ್ಥ ರಾಜಕೀಯ ಮಾಡುತ್ತಿದ್ದಾರೆ. ಇಲ್ಲಿನ ಜನರನ್ನು ಯಾವ ರೀತಿ ದುರುಪಯೋಗ ಮಾಡಿಕೊಂಡಿದ್ದಾರೆಂದು ಗೊತ್ತಿದೆ ಎಂದರು.

ಡಿವಿಎಸ್‌ಗೆ ಟಾಂಗ್‌: ಸದಾನಂದಗೌಡರು ಬೆವರು ಸುರಿಸಿ ರಾಜಕೀಯ ಮಾಡುತ್ತಿಲ್ಲ. ಕಷ್ಟ ಪಟ್ಟು ಅವರು ಅಧಿಕಾರಕ್ಕೆ ಬಂದಿಲ್ಲ. ಮೋದಿಯವರ ಹೆಸರು ಹೇಳಿ ಅಧಿಕಾರ ಪಡೆದಿರುವ ನಕಲಿ ರಾಜಕಾರಣಿ ಎಂದು ವ್ಯಂಗ್ಯವಾಡಿದರು. ನಮ್ಮ ಕುಟುಂಬದಿಂದ 8 ಸ್ಟಾರ್‌ ಪ್ರಚಾರಕರು ಎಂದು ಟೀಕೆ ಮಾಡಿದ್ದಾರೆ. ಆದರೆ ನಿನ್ನೆ ನಾನು ಹುಣಸೂರಿಗೆ ಹೋದಾಗ ಜನರೇ ನಿಖೀಲ್‌ ಕಳುಹಿಸಿ ಎಂದಿದ್ದಾರೆ. ಜನರು ಬಯಸಿರೋದು, ನಾವಾಗಿ ಸ್ಟಾರ್‌ ಪ್ರಚಾರಕರಾಗಿಲ್ಲ. ನಾವು ಬೆವರು ಸುರಿಸಿ ಪಕ್ಷ ಕಟ್ಟುತ್ತಿದ್ದೇವೆ ಎಂದು ಸದಾನಂದಗೌಡರಿಗೆ ಟಾಂಗ್‌ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ