
Asian Games: ರೋಯಿಂಗ್: ಭಾರತಕ್ಕೆ ಅವಳಿ ಕಂಚು
Team Udayavani, Sep 25, 2023, 11:11 PM IST

ಹ್ಯಾಂಗ್‌ಝೂ: ರೋಯಿಂಗ್ ಸ್ಪರ್ಧೆಯಲ್ಲಿ ಸೋಮವಾರ ಭಾರತ ಮತ್ತೆರಡು ಪದಕಗಳನ್ನು ಗೆದ್ದಿದೆ. ಇವೆ ರಡೂ ಕಂಚಿನ ಪದಕಗಳಾಗಿವೆ. ರವಿವಾರ ಅವಳಿ ರಜತಗಳ ಖುಷಿ ಇತ್ತು.
ಮೊದಲು ಮೆನ್ಸ್ ಫೋರ್ ವಿಭಾಗದ ಸ್ಪರ್ಧೆಯಲ್ಲಿ ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನೀತ್ ಕುಮಾರ್ ಮತ್ತು ಅಶಿಷ್ ಗೊಲಿಯಾನ್ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕವನ್ನು ಸ್ವಲ್ಪದರಲ್ಲೇ ಕಳೆದುಕೊಂಡಿತು. ಭಾರತ 2 ಸಾವಿರ ಮೀಟರ್‌ಗಳ ಈ ದೂರವನ್ನು 6:10.81 ಸೆಕೆಂಡ್‌ಗಳಲ್ಲಿ ಕ್ರಮಿಸಿತು. ಚೀನ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಜಯಿಸಿದರೆ (6:10.04), ಉಜ್ಬೆಕಿಸ್ಥಾನ್ ಚಿನ್ನ ಗೆದ್ದಿತು (6:04.96).
ಬಳಿಕ ಪುರುಷರ ಕ್ವಾಡ್ರಾಪಲ್ ವಿಭಾಗದಲ್ಲಿ ಸತ್ನಾಮ್ ಸಿಂಗ್, ಪರ್ಮಿಂದರ್ ಸಿಂಗ್, ಜಾಕರ್ ಖಾನ್, ಸುಕ್‌ಮೀತ್ ಸಿಂಗ್ ಕೂಡ ತೃತೀಯ ಸ್ಥಾನಿಯಾದರು. ಭಾರತದ ಸ್ಪರ್ಧಿಗಳಿಲ್ಲಿ 6:08.61 ಸೆಕೆಂಡ್‌ಗಳಲ್ಲಿ ದೂರ ಕ್ರಮಿಸಿದರು, ಚೀನ ಚಿನ್ನ (6:02.65 ಸೆ.) ಮತ್ತು ಉಜ್ಬೆಕಿಸ್ಥಾನ್ (6.04.64 ಸೆ.) ಬೆಳ್ಳಿ ಪದಕ ಜಯಿಸಿತು.
ಪುರುಷರ ಸಿಂಗಲ್ಸ್ ಸ್ಕಲ್ಸ್‌ನಲ್ಲಿ ಬಲ್ರಾಜ್ ಪನ್ವಾರ್ ಮೊದಲ ಸಲ ಪೋಡಿಯಂ ಏರುವ ಅವಕಾಶವನ್ನು ಕಳೆದುಕೊಂಡರು. ಅವರು 4ನೇ ಸ್ಥಾನಿಯಾದರು. 1,500 ಮೀ. ತನಕ ಅಗ್ರ 3 ಸ್ಥಾನ ಕಾಯ್ದುಕೊಂಡಿದ್ದ ಬಲ್ರಾಜ್, ಕೊನೆಯ 500 ಮೀ. ಹಂತದಲ್ಲಿ ಹಿನ್ನಡೆ ಅನುಭವಿಸಿದರು (7:08.79 ಸೆಕೆಂಡ್ಸ್). ಕಂಚು ಗೆದ್ದ ಹಾಂಕಾಂಗ್ ಸ್ಪರ್ಧಿಗಿಂತ ಬಲ್ರಾಜ್ 9 ಸೆಕೆಂಡ್‌ಗಳ ಹಿನ್ನಡೆಯಲ್ಲಿದ್ದರು.
“ವುಮೆನ್ಸ್ 8′ ವಿಭಾಗದಲ್ಲಿ ಭಾರತ ಕೊನೆಯ ಸ್ಥಾನಿಯಾಗಿ ನಿರಾಸೆ ಮೂಡಿಸಿತು.
ಭಾರತಕ್ಕೆ 5ನೇ ಸ್ಥಾನ
ಭಾರತ ಒಟ್ಟು 5 ಪದಕಗಳೊಂದಿಗೆ ಸ್ಪರ್ಧೆ ಮುಗಿಸಿತು. ಪದಕ ಗಳಿಕೆಯಲ್ಲಿ ಇದು 2018ರ ಜಕಾರ್ತಾ ಏಷ್ಯಾಡ್‌ಗಿಂತ ಉತ್ತಮ ಸಾಧನೆ. ಆದರೆ ಈ ಬಾರಿ ಚಿನ್ನ ಒಲಿಯಲಿಲ್ಲ. ಜಕಾರ್ತಾದಲ್ಲಿ ಭಾರತ ರೋವಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ ಹಾಗೂ 2 ಕಂಚಿನ ಪದಕ ಜಯಿಸಿತ್ತು. ಆದರೆ 6ನೇ ಸ್ಥಾನಿಯಾಗಿತ್ತು. ಈ ಬಾರಿ ಒಂದು ಸ್ಥಾನ ಮೇಲೇರಿದೆ.
ಈ ಬಾರಿ ಆತಿಥೇಯ ಚೀನ ಅಗ್ರಸ್ಥಾನ ಅಲಂಕರಿಸಿದರೆ (11 ಚಿನ್ನ, 2 ಬೆಳ್ಳಿ), ಉಜ್ಬೆಕಿಸ್ಥಾನ ದ್ವಿತೀಯ ಸ್ಥಾನಿಯಾಯಿತು (2 ಚಿನ್ನ, 4
ಬೆಳ್ಳಿ, 1 ಕಂಚು).
ಟಾಪ್ ನ್ಯೂಸ್
