ಸರ್ಕಾರ ಉಳಿಸಲು ಕಾಂಗ್ರೆಸ್‌ನಿಂದ “ಟಾರ್ಗೆಟ್‌ -9′

Team Udayavani, Jul 14, 2019, 3:11 AM IST

ಬೆಂಗಳೂರು: ರಾಜೀನಾಮೆ ಕೊಟ್ಟು ಮೈತ್ರಿ ಪಕ್ಷವನ್ನು ಕೋಮಾದಲ್ಲಿಟ್ಟಿರುವ ಶಾಸಕರನ್ನು ವಾಪಸ್‌ ಕರೆಸಿ, ಸರ್ಕಾರವನ್ನು ಬಚಾವ್‌ ಮಾಡಲು ಕಾಂಗ್ರೆಸ್‌ ನಾಯಕರು “ಟಾರ್ಗೆಟ್‌ 9′ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಕಾಂಗ್ರೆಸ್‌ನ 13 ಶಾಸಕರು ರಾಜೀನಾಮೆ ಸಲ್ಲಿಸಿದ್ದು, ಅವರಲ್ಲಿ ನಾಲ್ವರು ಮಾತ್ರ ಮುಂಬೈ ತಂಡ ಸೇರಿಕೊಂಡಿದ್ದಾರೆ. ಉಳಿದವರು ರಾಜೀನಾಮೆ ನೀಡಿದ್ದರೂ ತಮ್ಮ ವೈಯಕ್ತಿಕ ಕಾರಣದಿಂದ ಮುಂಬೈನಲ್ಲಿರುವ ತಂಡವನ್ನು ಸೇರಿಕೊಳ್ಳದಿರುವುದರಿಂದ ಅವರ ಮನವೊಲಿಸಿ ರಾಜೀನಾಮೆ ವಾಪಸ್‌ ಪಡೆಯುವಂತೆ ಮಾಡುವಲ್ಲಿ ಕೈ ನಾಯಕರು ಕಸರತ್ತು ಆರಂಭಿಸಿದ್ದಾರೆ.

13 ಜನರಲ್ಲಿ ರಾಮಲಿಂಗಾ ರೆಡ್ಡಿ, ರೋಷನ್‌ ಬೇಗ್‌, ಎಂ.ಟಿ.ಬಿ.ನಾಗರಾಜ್, ಡಾ.ಸುಧಾಕರ್‌, ಆನಂದ್‌ ಸಿಂಗ್‌, ಮುನಿರತ್ನ, ಎಸ್‌.ಟಿ.ಸೋಮಶೇಖರ್‌, ಬೈರತಿ ಬಸವರಾಜ್‌ ಹಾಗೂ ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರನ್ನು ಮಾತ್ರ ಮನವೊಲಿಸಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಶನಿವಾರ ಬೆಳಗ್ಗೆಯಿಂದಲೇ ಅತೃಪ್ತರ ಮನವೊಲಿಕೆ ಯತ್ನ ಆರಂಭವಾಗಿದೆ. ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್‌ ಅವರೊಂದಿಗೆ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಎಲ್ಲ ನಾಯಕರೂ ಮನವೊಲಿಕೆ ಕಾರ್ಯ ಮಾಡಿದ್ದು, ಅವರು ರಾಜೀನಾಮೆ ವಾಪಸ್‌ ಪಡೆಯುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌ ಅವರ ಮನವೊಲಿಕೆ ಕಾರ್ಯವೂ ನಡೆದಿದ್ದು, ಅವರೂ ಸಿದ್ದರಾಮಯ್ಯನವರ ಮಾತು ಮೀರುವುದಿಲ್ಲ ಎಂಬ ಭರವಸೆ ಕಾಂಗ್ರೆಸ್‌ ನಾಯಕರಲ್ಲಿದೆ. ಹೀಗಾಗಿ, ಬೆಂಗಳೂರು ಬಿಟ್ಟು ಮುಂಬೈಗೆ ಹಾರಿದರೂ, ಸೋಮವಾರದ ಹೊತ್ತಿಗೆ ಡಾ.ಸುಧಾಕರ್‌ ಅವರೂ ತಮ್ಮ ನಿಲುವು ಸಡಿಲಗೊಳಿಸುವ ವಿಶ್ವಾಸವನ್ನು ಕೈ ನಾಯಕರು ಹೊಂದಿದ್ದಾರೆ. ಶಾಸಕ ರಾಮಲಿಂಗಾ ರೆಡ್ಡಿ ಅವರನ್ನು ರಾಜ್ಯಸಭೆ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಅವರು ಈಗಾಗಲೇ ಮಾತುಕತೆ ನಡೆಸಿ ಮನವೊಲಿಸಿದ್ದಾರೆ ಎನ್ನಲಾಗಿದೆ.

ಎಸ್‌ಬಿಎಂ ವಾಪಸ್‌ ಬರುವ ನಂಬಿಕೆ: ಬೆಂಗಳೂರಿನ ಮೂವರು ಅತೃಪ್ತ ಶಾಸಕರಾದ ಮುನಿರತ್ನ, ಬೈರತಿ ಬಸವರಾಜ್‌ ಹಾಗೂ ಎಸ್‌.ಟಿ.ಸೋಮಶೇಖರ್‌ ಅತೃಪ್ತರ ಗುಂಪಿನಲ್ಲಿದ್ದರೂ ಈಗಲೂ ತಾವು ಕಾಂಗ್ರೆಸ್‌ ಪಕ್ಷ ತೊರೆಯುವುದಿಲ್ಲ ಎಂದು ಹೇಳುತ್ತಿದ್ದಾರೆ. ಅಲ್ಲದೇ ರಾಮಲಿಂಗಾ ರೆಡ್ಡಿ ಅವರ ನಡೆಯ ಮೇಲೆ ಆ ಮೂವರು ಶಾಸಕರ ನಡೆ ನಿಂತಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಸಿದ್ದರಾಮಯ್ಯ ಸೂಚನೆ ನೀಡಿದರೆ ಅವರು ವಾಪಸ್‌ ಬರುತ್ತಾರೆಂದು ಹೇಳಲಾಗುತ್ತಿದೆ. ಈಗಾಗಲೇ ಸಿದ್ದರಾಮಯ್ಯನವರು ಬೈರತಿ ಬಸವರಾಜ್‌ ಜತೆ ದೂರವಾಣಿ ಮೂಲಕ ಮಾತನಾಡಿದ್ದಾರೆ ಎನ್ನಲಾಗಿದ್ದು, ವಿಶ್ವಾಸಮತಯಾಚನೆ ಸಮಯದಲ್ಲಿ ಮೈತ್ರಿ ಪರ ನಿಲ್ಲುತ್ತಾರೆಂದು ಕಾಂಗ್ರೆಸ್‌ ನಾಯಕರು ಬಲವಾಗಿ ನಂಬಿದ್ದಾರೆ.

ರೋಷನ್‌ ಬೇಗ್‌ ಅಮಾನತು ವಾಪಸ್‌ಗೆ ಸೂಚನೆ: ಪಕ್ಷದಿಂದ ಅಮಾನತುಗೊಂಡಿರುವ ಶಿವಾಜಿನಗರ ಶಾಸಕ ರೋಷನ್‌ ಬೇಗ್‌ ಅವರ ಅಮಾನತು ಆದೇಶವನ್ನು ವಾಪಸ್‌ ಪಡೆಯುವಂತೆ ಹೈಕಮಾಂಡ್‌ ನಾಯಕ ಗುಲಾಂ ನಬಿ ಆಜಾದ್‌ ಈಗಾಗಲೇ ಸೂಚನೆ ನೀಡಿದ್ದಾರಂತೆ. ಆದರೆ, ಸಿದ್ದರಾಮಯ್ಯ ಅವರು ಬೇಗ್‌ ಅವರನ್ನು ವಾಪಸ್‌ ಕರೆಸುವ ಬಗ್ಗೆ ಇನ್ನೂ ಸಹಮತ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ವಾಪಸ್‌ ಪಡೆಯುವುದನ್ನು ಮುಂದೂಡಿದ್ದಾರೆ ಎನ್ನಲಾಗುತ್ತಿದೆ. ಆದರೆ, ಕಾಂಗ್ರೆಸ್‌ ಹೈಕಮಾಂಡ್‌ ಅವರನ್ನು ವಾಪಸ್‌ ಸೇರಿಸಿಕೊಳ್ಳಲು ಸೂಚನೆ ನೀಡಿರುವುದರಿಂದ ಮೈತ್ರಿ ಪಕ್ಷದ ಸಂಖ್ಯಾಬಲ ಹೆಚ್ಚಳಕ್ಕೆ ಅವರ ಸೇರ್ಪಡೆಯಾಗಲಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಎಚ್‌.ನಾಗೇಶ್‌ಗೆ ಡಿಕೆಶಿ ಗಾಳ: ಮುಳಬಾಗಿಲು ಪಕ್ಷೇತರ ಶಾಸಕ ಎಚ್‌.ನಾಗೇಶ್‌ ಅವರು, ಮಂತ್ರಿ ಮಾಡಿದ್ದರೂ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಅತೃಪ್ತರ ಪಡೆ ಸೇರಿಕೊಂಡಿದ್ದರು. ಆದರೆ, ರಾಜೀನಾಮೆ ಸಲ್ಲಿಸುವ ಮುಂಚಿನ ದಿನ ಮುಳಬಾಗಿಲು ಮಾಜಿ ಶಾಸಕ ಕೊತ್ತನೂರು ಮಂಜುನಾಥ್‌ ಅವರಿಗೆ ತಮ್ಮ ಖಾತೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದರೆಂದು ತಿಳಿದು ಬಂದಿದೆ. ಹೀಗಾಗಿ, ಅವರ ಮೂಲಕವೇ ಸಚಿವ ಡಿ.ಕೆ. ಶಿವಕುಮಾರ್‌ ವಾಪಸ್‌ ಕರೆಸುವ ಪ್ರಯತ್ನ ನಡೆಸಿದ್ದಾರೆ. ನಾಗೇಶ್‌ಗೆ ಉತ್ತಮ ಖಾತೆ ನೀಡುವ ಭರವಸೆ ನೀಡಿದ್ದಾರೆಂದು ತಿಳಿದು ಬಂದಿದೆ.

ವಿಜಯನಗರ ಶಾಸಕ ಆನಂದ್‌ ಸಿಂಗ್‌ ಅವರೂ ಜಿಂದಾಲ್‌ಗೆ ಜಮೀನು ಮಾರಾಟ ಮಾಡಬಾರದು ಎನ್ನುವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದರೂ, ಅಸಲಿಯಾಗಿ ಅವರ ಕ್ಷೇತ್ರದಲ್ಲಿ ಪಕ್ಕದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ ಹೇಳಿದಂತೆ ಎಲ್ಲ ಕೆಲಸಗಳನ್ನು ಮಾಡಿಕೊಡಲಾಗುತ್ತಿದೆ. ಅವರ ಹಸ್ತಕ್ಷೇಪ ತಡೆಯುವಂತೆ ಮಾಡಿದ ಮನವಿಗೆ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕರು ಸ್ಪಂದಿಸದೇ ಇರುವುದರಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ, ಅವರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿಯನ್ನು ಡಿಕೆಶಿ ವಹಿಸಿಕೊಂಡಿದ್ದಾರೆ.

ಈ ಒಂಬತ್ತು ಜನರಲ್ಲಿ ಕನಿಷ್ಠ ಎಂಟು ಶಾಸಕರು ವಾಪಸ್‌ ಬರುತ್ತಾರೆಂಬ ನಂಬಿಕೆಯನ್ನು ಕಾಂಗ್ರೆಸ್‌ ನಾಯಕರು ಇಟ್ಟುಕೊಂಡಿದ್ದಾರೆ. ಈಗಿರುವ ಸಂಖ್ಯಾಬಲದಲ್ಲಿ 8 ಜನ ವಾಪಸ್‌ ಬಂದರೆ ಸರಳ ಬಹುಮತ ಪಡೆಯಲು ಯಾವುದೇ ತೊಂದರೆ ಆಗುವುದಿಲ್ಲ ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕೈ ನಾಯಕರು “ಟಾರ್ಗೆಟ್‌ 9′ ಕಾರ್ಯತಂತ್ರ ರೂಪಿಸಿದ್ದಾರೆಂದು ಹೇಳಲಾಗುತ್ತಿದೆ.

ಇಬ್ಬರ ಅನರ್ಹತೆ: ಈ ಮಧ್ಯೆ, ಈಗಾಗಲೇ ವಿಪ್‌ ಉಲ್ಲಂಘನೆ ಪ್ರಕರಣದಲ್ಲಿ ಅನರ್ಹತೆಯ ಭೀತಿ ಎದುರಿಸುತ್ತಿರುವ ರಮೇಶ್‌ ಜಾರಕಿಹೊಳಿ ಹಾಗೂ ಮಹೇಶ್‌ ಕುಮಟಳ್ಳಿ ಅವರನ್ನು ವಿಶ್ವಾಸಮತ ಯಾಚನೆಗೂ ಮೊದಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸುವ ಸಾಧ್ಯತೆಯಿದೆ. ಅವರಿಬ್ಬರನ್ನು ಅನರ್ಹಗೊಳಿಸಿದರೆ, ಮುಂಬೈಗೆ ತೆರಳಿರುವ ಉಳಿದ ಅತೃಪ್ತ ಶಾಸಕರು ವಾಪಸ್‌ ಬರಬಹುದು ಎಂಬ ನಂಬಿಕೆಯನ್ನು ಕಾಂಗ್ರೆಸ್‌ ನಾಯಕರು ಇಟ್ಟುಕೊಂಡಿದ್ದಾರೆ.

ಒಂದು ವೇಳೆ ಅವರೂ ವಾಪಸ್‌ ಬರದಿದ್ದರೆ, ಅವರನ್ನೂ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್‌ಗೆ ಮನವಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈಗಿರುವ ಲೆಕ್ಕಾಚಾರದಲ್ಲಿ ಎಂಟು ಜನರನ್ನು ಬಿಟ್ಟು ಉಳಿದ ಎರಡೂ ಪಕ್ಷಗಳ ಶಾಸಕರನ್ನು ಬಹುಮತ ಸಾಬೀತಿಗೂ ಮೊದಲೇ ಅನರ್ಹಗೊಳಿಸುವ ಲೆಕ್ಕಾಚಾರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

* ಶಂಕರ ಪಾಗೋಜಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಪುಟ್ಟಿಯ ಮನೆಯ ಹಿತ್ತಲಿನಲ್ಲಿ ದಟ್ಟನೆ ಗಿಡ ಮರ ಬಳ್ಳಿ ಹೂ ಚೆಲ್ಲಿ ಬಟ್ಟಲು ಹಿಡಿದು ಬಟಾಣಿ ಕಡಿಯುತ ಪುಟ್ಟಿಯು ಹಿತ್ತಲ ಕಡೆಗೆ ನೋಡಿದಳು ಮರದಲಿ ನಾಮದ ಅಳಿಲು...

  • ಬಂಟ್ವಾಳ: ಮಂಗಳೂರು ಮನಪಾ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಮುಖ ಸಭೆಗಳು ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಬುಧವಾರ...

  • ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು...

  • ಬೆಂಗಳೂರು: "ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತಹ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಡಲು ಸೆಲ್‌ ಇಲ್ಲವೇ...

  • ಬೆಂಗಳೂರು: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಇದರಿಂದ...