ಶ್ರದ್ಧಾ ಕೇಂದ್ರಗಳಿಗೂ ಆರ್ಥಿಕ ಗ್ರಹಣ ; ಶೀಘ್ರದಲ್ಲಿ ದೇವರ ದರ್ಶನ ನಿರೀಕ್ಷೆ
Team Udayavani, May 10, 2020, 11:30 AM IST
ಉಡುಪಿ: ಕಳೆದ 50 ದಿನಗಳಿಂದ ಭಕ್ತರಿಗೆ ದೇಗುಲಗಳ ಬಾಗಿಲು ಮುಚ್ಚಿದ್ದು, ಬಾಗಿಲು ತೆರೆದು ದೇವರ ದರುಶನ ಭಾಗ್ಯ
ನೀಡುವಂತೆ ಭಕ್ತರಿಂದ ಆಗ್ರಹಗಳು ವ್ಯಕ್ತವಾಗುತ್ತಿವೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯೂ ಗಂಭೀರ ಚಿಂತನೆ ನಡೆಸಿದ್ದು, ಭಕ್ತರ ಆಗಮನದ ಸಾಧಕ-ಬಾಧಕಗಳನ್ನು ಚರ್ಚಿಸಿ ಶೀಘ್ರದಲ್ಲಿ ನಿರ್ಧಾರ ಪ್ರಕಟಿಸುವ ನಿರೀಕ್ಷೆಯಿದೆ.
ಆರ್ಥಿಕತೆಯ ಪ್ರಮುಖ ಮೂಲವಾಗಿರುವ ಪ್ರವಾಸೋದ್ಯಮ ಇಲಾಖೆಯ ಮೇಲಂತೂ ಕೋವಿಡ್ ಸೋಂಕು ಭಾರೀ ಹೊಡೆತ ನೀಡಿದೆ. ಅವಿಭಜಿತ ದ.ಕ. ಜಿಲ್ಲೆಗಳ ಎಲ್ಲ ದೇಗುಲಗಳು ಬಂದ್ ಆಗಿರುವ ಕಾರಣ ಭಾರೀ ನಷ್ಟ ಅನುಭವಿಸುತ್ತಿವೆ.
ಸಾಮಾನ್ಯವಾಗಿ ಎಪ್ರಿಲ್, ಮೇ ತಿಂಗಳಲ್ಲಿ ದೇಗುಲಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚು. ಎ ಶ್ರೇಣಿಯ ದೇಗುಲಗಳನ್ನು ಹೊರತುಪಡಿಸಿ ಜಿಲ್ಲೆಯ ಇತರ ದೇಗುಲಗಳು ತಿಂಗಳಿಗೆ 4ರಿಂದ 6 ಕೋಟಿ ರೂ. ತನಕವೂ ಆದಾಯ ತರುತ್ತವೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಈಗ ದೇಗುಲಗಳಲ್ಲಿ ಸಂಪ್ರದಾಯದಂತೆ ದಿನಕ್ಕೆರಡು ಬಾರಿ ಪೂಜೆಗಳನ್ನು ಮಾತ್ರ ನಡೆಸಲಾಗುತ್ತಿದೆ.
ಭಕ್ತರ ಆಗಮನಕ್ಕೆ ಅವಕಾಶ ಇಲ್ಲ
ದ.ಕ.ದಲ್ಲಿ 494, ಉಡುಪಿ ಜಿಲ್ಲೆಯಲ್ಲಿ 810 ಸೇರಿ 1,304 ದೇವಸ್ಥಾನಗಳಿವೆ. ಇವುಗಳಲ್ಲಿ 64 ಎ ಶ್ರೇಣಿಯ ದೇವಸ್ಥಾನಗಳು. ವಾರ್ಷಿಕವಾಗಿ ಕುಕ್ಕೆ ದೇವಸ್ಥಾನ 100 ಕೋ.ರೂ., ಕೊಲ್ಲೂರು ದೇವಸ್ಥಾನ 80 ಕೋಟಿ ರೂ. ಕಟೀಲು ದೇವಸ್ಥಾನ 40-42 ಕೋ.ರೂ., ಮಂದಾರ್ತಿ 10-12 ಕೋ.ರೂ. ಆದಾಯವನ್ನು ಕಳೆದ ಸಾಲಿನಲ್ಲಿ ಗಳಿಸಿದ್ದವು. ಆದರೆ ಈ ಸಾಲಿನಲ್ಲಿ ದೇವಸ್ಥಾನಗಳು ಭಾರೀ ನಷ್ಟಕ್ಕೆ ಒಳಗಾಗಿವೆ.
ಕುಕ್ಕೆ ದೇಗುಲವೊಂದೇ ಕಳೆದ ವರ್ಷ ಮಾರ್ಚ್‌ನಲ್ಲಿ 7,60,18,137.93 ಕೋ.ರೂ., ಎಪ್ರಿಲ್‌ನಲ್ಲಿ 6,57,33,223.26 ಕೋ.ರೂ., ಮೇ ತಿಂಗಳಲ್ಲಿ 8,61,86,203.00 ಸೇರಿದಂತೆ ಈ ಮೂರು ತಿಂಗಳಲ್ಲಿ 22,79,37,564.19 ಕೋ.ರೂ. ಆದಾಯ ತಂದುಕೊಟ್ಟಿತ್ತು. ಆದರೆ ಈ ವರ್ಷ ಇದೇ ಅವಧಿಯಲ್ಲಿ ಭಕ್ತರೇ ಇಲ್ಲದ ಕಾರಣ ಸೇವೆಗಳು, ಕಾಣಿಕೆ ಮೂಲಕ ಬರುವ ಆದಾಯವೇ ಇಲ್ಲವಾಗಿದೆ.
150 ಕೋ. ರೂ. ನಷ್ಟ
ದೇವಸ್ಥಾನಗಳು ಬಂದ್ ಆಗಿರುವ ಕಾರಣ ರಾಜ್ಯಕ್ಕೆ ಸುಮಾರು 150 ಕೋ. ರೂ. ನಷ್ಟವಾಗಿದೆ ಎಂದು ಮುಜರಾಯಿ ಸಚಿವರು ಈಗಾಗಲೇ ಹೇಳಿದ್ದಾರೆ. ಕೋವಿಡ್ ಸೋಂಕು ಪಸರಿಸದಂತೆ ಸಾಮಾಜಿಕ ಅಂತರ ಇತ್ಯಾದಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಭಕ್ತರ ಆಗಮನಕ್ಕೆ ಅವಕಾಶ ನೀಡುವುದು ಹೇಗೆ ಎಂಬ ಬಗ್ಗೆ ಇಲಾಖೆಯು ಚಿಂತನೆಯಲ್ಲಿದೆ. ಆನ್‌ಲೈನ್ ಮೂಲಕ ಸೇವೆಗಳನ್ನು ಅರಂಭಿಸುವ ಯೋಜನೆಯೂ ಸರಕಾರದ ಮುಂದಿದೆ.
ದೇವಸ್ಥಾನಗಳಲ್ಲಿ ದೈನಂದಿನ ಪೂಜೆಗಳು, ಉತ್ಸವ ಇತ್ಯಾದಿ ಸಾಂಕೇತಿಕವಾಗಿ ನಡೆಯುತ್ತಿವೆ. ಭಕ್ತರು ಭೇಟಿ ನೀಡುವ ಸೀಸನ್‌ನಲ್ಲಿ ಲಾಕ್‌ಡೌನ್ ಆಗಿರುವುದರಿಂದ ಅವಿಭಜಿತ ದ.ಕ. ಜಿಲ್ಲೆಯ ದೇಗುಲಗಳು ಶೇ. 50ರಷ್ಟು ನಷ್ಟ ಅನುಭವಿಸಿವೆ. ದೇವಸ್ಥಾನಗಳನ್ನು ಭಕ್ತರಿಗೆ ದರ್ಶನಕ್ಕೆ ತೆರೆಯುವ ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ. ಶೀಘ್ರ ನಿರ್ಧಾರ ಪ್ರಕಟಿಸಲಾಗುವುದು.
– ಕೋಟ ಶ್ರೀನಿವಾಸ ಪೂಜಾರಿ, ಮುಜರಾಯಿ ಇಲಾಖೆ ಸಚಿವರು