ಮತ್ತೆ ಸಿದ್ದರಾಮಯ್ಯ ಅಹಿಂದ ಅಸ್ತ್ರ

Team Udayavani, Jun 26, 2019, 3:09 AM IST

ಬೆಂಗಳೂರು: ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತೆ ಅಹಿಂದ ಮಂತ್ರ ಜಪಿಸುತ್ತಿರುವುದು ಕಾಂಗ್ರೆಸ್‌ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಪಕ್ಷದಲ್ಲಿ ತಮ್ಮ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಲು ಸಿದ್ದರಾಮಯ್ಯ ಈ ಅಸ್ತ್ರ ಪ್ರಯೋಗಿಸುತ್ತಿದ್ದು, ರಾಜ್ಯದಲ್ಲಿ ಹಿಂದುಳಿದ ಸಮುದಾಯಗಳ ಮೇಲೆ ಹಿಡಿತ ಸಾಧಿಸುವುದರ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ತಮ್ಮದೇ ಪ್ರಾಬಲ್ಯ ಮುಂದುವರಿಯಬೇಕು ಎಂಬ ಲೆಕ್ಕಾಚಾರ ಹಾಕಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ಲೆಕ್ಕಾಚಾರವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್‌ ಹೈ ಕಮಾಂಡ್‌ಗೆ ರಾಜ್ಯದಲ್ಲಿ ಅಹಿಂದ ಸಂಘಟನೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ರಾಜ್ಯದಲ್ಲಿ ಒಕ್ಕಲಿಗರು ಹಾಗೂ ಲಿಂಗಾಯತರು ಸೇರಿ ಶೇ.30ರಷ್ಟಿರುವ ಮೇಲ್ವರ್ಗದ ಸಮುದಾಯದವರು ಕಾಂಗ್ರೆಸ್‌ ಬಗ್ಗೆ ಅಷ್ಟಾಗಿ ಒಲವು ತೋರುತ್ತಿಲ್ಲ.

ಶೇ. 70ರಷ್ಟಿರುವ ಅಲ್ಪ ಸಂಖ್ಯಾತರು, ದಲಿತರು, ಹಿಂದುಳಿದ ವರ್ಗದ ಸಮುದಾಯಗಳು ಕಾಂಗ್ರೆಸ್‌ನ ಓಟ್‌ ಬ್ಯಾಂಕ್‌ ಆಗಿದ್ದು, ಆ ಮತಗಳು ಛಿದ್ರವಾಗುವುದನ್ನು ತಡೆಯಲು ಎಲ್ಲರನ್ನೂ ಒಗ್ಗೂಡಿಸುವ ಪ್ರಯತ್ನವಾಗಬೇಕು. ಹೀಗಾಗಿ ಅಹಿಂದ ಸಂಘಟನೆ ಸಕ್ರಿಯಗೊಳಿಸುವುದು ಅನಿವಾರ್ಯ ಎಂಬ ವಾದ ಹೈಕಮಾಂಡ್‌ ಮುಂದಿಟ್ಟು ಹೋರಾಟ ಬಲಗೊಳಿಸಲು ಮುಂದಾಗಿದ್ದಾರೆ.

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ನಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವುದರಿಂದ ಪಕ್ಷದ ಮೇಲಿನ ತಮ್ಮ ಹಿಡಿತ ಕೈ ತಪ್ಪುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಈ ಅಸ್ತ್ರ ಪ್ರಯೋಗಿಸುತ್ತಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಲು ಸಿದ್ದರಾಮಯ್ಯ ಅವರು ತೆಗೆದುಕೊಂಡ ತೀರ್ಮಾನಗಳೂ ಕಾರಣ ಎಂದು ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೇ ಮೈತ್ರಿ ಸರ್ಕಾರ ಹಾಗೂ ಪಕ್ಷದಲ್ಲಿ ಅವರು ಎರಡು ಹುದ್ದೆ ಹೊಂದಿರುವುದರಿಂದ ಒಂದು ಹುದ್ದೆಯಿಂದ ಅವರನ್ನು ಕೈ ಬಿಡಬೇಕೆಂಬ ಆಗ್ರಹವೂ ಕೇಳಿ ಬಂದಿತ್ತು.

ಹೀಗಾಗಿ, ಪಕ್ಷದಲ್ಲಿ ತಮ್ಮನ್ನು ವಿರೋಧಿಸುವವರು ಹಾಗೂ ತಮ್ಮ ಹುದ್ದೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಬ್ರೇಕ್‌ ಹಾಕಲು ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಲು ಅಹಿಂದಗೆ ಮೊರೆ ಹೋಗಿದ್ದಾರೆ ಎಂಬ ವ್ಯಾಖ್ಯಾನಗಳು ಇವೆ.

ಬೆಂಬಲ ಸಿಗುತ್ತಾ?: ಹಿಂದೆ ಜೆಡಿಎಸ್‌ನಿಂದ ಹೊರ ಬಂದು ಅಹಿಂದ ಸಂಘಟನೆ ಮಾಡಿದಾಗ ಸಿದ್ದರಾಮಯ್ಯ ಅವರಿಗೆ ಬೆಂಬಲ ಸೂಚಿಸಿದ್ದ ಅಲ್ಪ ಸಂಖ್ಯಾತರು ಹಾಗೂ ದಲಿತ ಸಮುದಾಯ ಈ ಬಾರಿ ಬೆಂಬಲಕ್ಕೆ ನಿಲ್ಲುತ್ತಾರ? ಪ್ರಮುಖವಾಗಿ ಸಿದ್ದರಾಮಯ್ಯ ಅಹಿಂದ ಆರಂಭಿಸಿದಾಗ ಅವರೊಂದಿಗೆ ಗುರುತಿಸಿಕೊಂಡಿದ್ದ, ದಲಿತ ನಾಯಕ ಶ್ರೀನಿವಾಸ ಪ್ರಸಾದ್‌, ಕುರುಬ ಸಮುದಾಯದ ಎಚ್‌. ವಿಶ್ವನಾಥ್‌, ಕೋದಂಡ ರಾಮಯ್ಯ, ಆರ್‌.ಎಲ್‌. ಜಾಲಪ್ಪ, ಮುಕುಡಪ್ಪ ಯಾರೂ ಈಗ ಜತೆಗಿಲ್ಲ.

ಜತೆಗೆ, ಹಿರಿಯ ಕಾಂಗ್ರೆಸ್‌ ನಾಯಕ ದಲಿತ ಸಮುದಾಯದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮೂಲೆಗುಂಪು ಮಾಡಲು ಸಿದ್ದರಾಮಯ್ಯ ಪ್ರಯತ್ನ ನಡೆಸಿದ್ದಾರೆಂಬ ಅಪಸ್ವರವೂ ಇದೆ. ಅಲ್ಪಸಂಖ್ಯಾತ ಸಮುದಾಯದ ಶಾಸಕ ರೋಷನ್‌ಬೇಗ್‌ ಅವರನ್ನು ಪಕ್ಷದಿಂದ ಅಮಾನತು ಮಾಡಲು ಇವರೇ ಕಾರಣ ಎಂಬ ಬೇಸರವೂ ಹಲವರಲ್ಲಿದೆ. ಹೀಗಾಗಿ, ಎಷ್ಟರ ಮಟ್ಟಿಗೆ ಈ ಬಾರಿ ಅಹಿಂದ ವರ್ಗದ ಬೆಂಬಲ ಸಿಗಬಹುದು ಎಂಬ ಪ್ರಶ್ನೆಯೂ ಇದೆ.

ಹೈಕಮಾಂಡ್‌ ಒಪ್ಪುತ್ತಾ?: ಸಿದ್ದರಾಮಯ್ಯ ಪಕ್ಷ ಸಂಘಟನೆ ಹೆಸರಿನಲ್ಲಿ ಅಹಿಂದ ಅಸ್ತ್ರ ಪ್ರಯೋಗಿಸುವ ಮೂಲಕ ಪಕ್ಷದಲ್ಲಿ ಹಿಡಿತ ಸಾಧಿಸಲು ನಡೆಸುತ್ತಿರುವ ಪ್ರಯತ್ನಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಒಪ್ಪುತ್ತಾ ಎಂಬುದು ಕುತೂಹಲ ಮೂಡಿಸಿದೆ. ಜತೆಗೆ, ಪಕ್ಷದಲ್ಲಿರುವ ಸಿದ್ದರಾಮಯ್ಯ ವಿರೋಧಿ ಬಣದವರು ಪಕ್ಷದ ಚೌಕಟ್ಟಿನಲ್ಲೇ ಸಮಾವೇಶ ಆಯೋಜನೆಯಾಗಲಿ ಎಂದು ಹೈಕಮಾಂಡ್‌ ಮೇಲೆ ಒತ್ತಡ ಹೇರಬಹುದು ಎಂದು ಹೇಳಲಾಗುತ್ತಿದೆ.

* ಶಂಕರ ಪಾಗೋಜಿ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ರಾಂಚಿ: ಜಾರ್ಖಂಡ್ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಜಾರಿಯಲ್ಲಿದ್ದು ನಾಲ್ಕನೇ ಹಂತದ ಮತದಾನ ಸೋಮವಾರ ನಡೆಯುತ್ತಿದೆ.  ಮತದಾನ ನಡೆಯುವ ಕ್ಷೇತ್ರಗಳಲ್ಲಿ ಬಿಗಿ...

  • ಕೋಲ್ಕತಾ: ಭಾರತ್‌ ಅರ್ಥ್ ಮೂವರ್ಸ್‌ ಲಿಮಿಟೆಡ್‌ (ಬಿಇಎಂಎಲ್‌)ನಲ್ಲಿ ಕೇಂದ್ರ ಸರಕಾರ ತಾನು ಹೊಂದಿರುವ ಶೇ.28ರಷ್ಟು ಷೇರುಗಳನ್ನು ಮಾರುವ ಸಾಧ್ಯತೆ ಇದೆ. ಉಳಿದಿರುವ...

  • ಹೊಸದಿಲ್ಲಿ: ಉನ್ನಾವ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸದಿಲ್ಲಿಯ ಸ್ಥಳೀಯ ಕೋರ್ಟ್‌ ಸೋಮವಾರ (ಡಿ.16) ತೀರ್ಪು ಪ್ರಕಟಿಸಲಿದೆ. ಬಿಜೆಪಿಯ...

  • "ನನ್ನ 38 ವರ್ಷಗಳ ಸಿನಿಮಾ ಜರ್ನಿ ಸಾರ್ಥಕವೆನಿಸಿದೆ. ಸಿನಿಮಾರಂಗದಲ್ಲಿ ನೆಮ್ಮದಿ ಸಿಕ್ಕಾಗಿದೆ. ಇನ್ನು ಸಾಕು ಅಂದುಕೊಂಡಿದ್ದೆ. ಆದರೆ, ಕವಿರಾಜ್‌, ನೀವು ಸುಮ್ಮನೆ...

  • ದರ್ಶನ್‌ ಅಭಿನಯದ "ಒಡೆಯ' ಚಿತ್ರದ ಆರ್ಭಟ ಜೋರಾಗಿದೆ. ಅದರಲ್ಲೂ ದರ್ಶನ್‌ ಅಭಿಮಾನಿಗಳಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವ ಅಂಶಗಳು "ಒಡೆಯ'ದಲ್ಲಿರುವುದರಿಂದ...