CONNECT WITH US  

ಶ್ರಾವಣ ಮಾಸದ ಜಾತ್ರಾ ಸಂಭ್ರಮ

ಬನಹಟ್ಟಿ: ದೇವಸ್ಥಾನ ಮುಂದೆ ನಿರ್ಮಿಸಲಾಗಿರುವ ಅಗ್ನಿ ಕುಂಡ. ಅಗ್ನಿ ಕುಂಡದಲ್ಲಿ ಉರಿಯುತ್ತಿರುವ ಅಗ್ನಿ.(ಒಳಚಿತ್ರ).

ಬನಹಟ್ಟಿ: ಕುಲಹಳ್ಳಿಯ ಶ್ರೀ ಶಿವಲಿಂಗೇಶ್ವರ ದೇವಸ್ಥಾನದ ಜಾತ್ರೆ ಶ್ರಾವಣ ಕೊನೆಯ ಸೋಮವಾರ ಸೆ.3ರಂದು ಜರುಗಲಿದೆ. ಈ ದೇವಸ್ಥಾನ ಎದುರಿಗೆ ಅಗ್ನಿಕುಂಡಕ್ಕಾಗಿ ದೊಡ್ಡದಾದ ಗವಿಯನ್ನು ನಿರ್ಮಿಸಲಾಗಿದ್ದು, ಇದು 13 ನೇ ಶತಮಾನದಿಂದಲೂ ಉರಿಯುತ್ತ ಬಂದಿದೆ ಎನ್ನುತ್ತಾರೆ ಇಲ್ಲಿಯ ಭಕ್ತರು. ಈ ದೇವಸ್ಥಾನ ಚಾಲುಕ್ಯರ ಕಾಲದಿಂದಲೂ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ದೇವಸ್ಥಾನ ಕುಲಹಳ್ಳಿ ಗ್ರಾಮಸ್ಥರಿಗೆ ಸುಪ್ರೀಂಕೋರ್ಟ್‌ ಇದ್ದಂತೆ. ಇಂತಹ ದೇವರು ಹಳ್ಳಿಯನ್ನು ಸದಾ ಬೆಳಗುತ್ತಿರುತ್ತಾರೆ ಎನ್ನುವ ಸಂಕೇತವಾಗಿ ಈ ಅಗ್ನಿಕುಂಡ ಸ್ಥಾಪನೆ ಮಾಡಲಾಗಿದೆ. ಸುಮಾರು 800ಕ್ಕೂ ಹೆಚ್ಚು ವರ್ಷಗಳಿಂದ ಇಲ್ಲಿಯ ತನಕವೂ ಗ್ರಾಮಸ್ಥರ ಅಗ್ನಿಕುಂಡದಲ್ಲಿ ಬೆಂಕಿ ಆರದಂತೆ ಕಾಪಾಡಿಕೊಂಡು ಬಂದಿದ್ದಾರೆ. ಈಗಲೂ ಕೂಡಾ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. 

ಈ ಅಗ್ನಿಕುಂಡಕ್ಕೆ ಬನ್ನಿಮರದ ತುಂಡುಗಳನ್ನು ಬಳಸಲಾಗುತ್ತಿದೆ. ಗ್ರಾಮಸ್ಥರು ತಮ್ಮ ಜಮೀನುಗಳಲ್ಲಿ ಬೆಳೆದ ಬನ್ನಿ ಮರದ ದಿನ್ನೆಗಳನ್ನು ಅಗ್ನಿಕುಂಡಕ್ಕಾಗಿ ಉಚಿತವಾಗಿ ನೀಡುತ್ತಾರೆ. ಅಗ್ನಿ ಆರದಂತೆ ನೋಡಿಕೊಳ್ಳಲು ಹಗಲು-ರಾತ್ರಿಯಂತೆ ಸೇವಕರನ್ನು ನೇಮಿಸಲಾಗಿರುತ್ತದೆ. ಈ ಬೆಂಕಿ ಆರಿದ್ರೆ ಅಂದು ಕುಲಹಳ್ಳಿಗೆ ಕೇಡಾಗುತ್ತದೆ ಎಂದು ಗ್ರಾಮಸ್ಥರು ಬಲವಾಗಿ ನಂಬುತ್ತಾರೆ ಎನ್ನುತ್ತಾರೆ ಸ್ಥಳೀಯ ನಿವಾಸಿ ಗಜಾನನ ಬಡಿಗೇರ. ಅಗ್ನಿಕುಂಡದ ದರ್ಶನ ಪಡೆಯಲು ನಾನಾ ಭಾಗದಿಂದ ಜನರು ಆಗಮಿಸುತ್ತಾರೆ. ಗ್ರಾಮಸ್ಥರು ಅಗ್ನಿಕುಂಡದ ಪಾವಿತ್ರ್ಯ ಕಾಪಾಡಿಕೊಂಡು ಬರುತ್ತಿರುವುದು ವಿಶೇಷ.


Trending videos

Back to Top