CONNECT WITH US  

ಹನುಮ ಗೀತೆಗೆ ಭರ್ಜರಿ ಡ್ಯಾನ್ಸ್‌

ಸರ್ಜಾ ಫ್ಯಾಮಿಲಿ ಜತೆ ದರ್ಶನ್‌ ಹೆಜ್ಜೆ

ಅರ್ಜುನ್‌ ಸರ್ಜಾ ನಿರ್ದೇಶಿಸಿ, ನಿರ್ಮಿಸುತ್ತಿರುವ "ಪ್ರೇಮ ಬರಹ' ಚಿತ್ರದ ಬಗ್ಗೆ ಎಲ್ಲರಿಗೂ ಗೊತ್ತು. ಈಗಾಗಲೇ ಬಹುತೇಕ ಚಿತ್ರೀಕರಣಗೊಂಡಿರುವ ಚಿತ್ರದ ವಿಶೇಷ ಹಾಡೊಂದಕ್ಕೆ ಬುಧವಾರ ಚಾಲನೆ ಸಿಕ್ಕಿದೆ. ಈ ಹಾಡಿನ ವಿಶೇಷವೆಂದರೆ, ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಹೆಜ್ಜೆ ಹಾಕಿರುವುದು. ಅಷ್ಟೇ ಅಲ್ಲ, ಅವರೊಂದಿಗೆ ಧ್ರುವ ಸರ್ಜಾ, ಚಿರಂಜೀವಿ ಸರ್ಜಾ ಕೂಡ ಹೆಜ್ಜೆ ಹಾಕುವ ಮೂಲಕ ಆ ಹಾಡಿಗೆ ಮತ್ತಷ್ಟು ಮೆರುಗು ನೀಡಿದ್ದಾರೆ.

ಹೌದು, ಬುಧವಾರ ತಿಪ್ಪಸಂದ್ರ ಸಮೀಪ ಇರುವ ಆಂಜನೇಯ ದೇವಸ್ಥಾನ ಆವರಣದಲ್ಲಿ ಚಿತ್ರೀಕರಣ ಜೋರಾಗಿಯೇ ನಡೆದಿದೆ. ಈ ಹಾಡಲ್ಲಿ ದರ್ಶನ್‌, ಧ್ರುವ, ಚಿರಂಜೀವಿ ಸರ್ಜಾ ಅವರೊಂದಿಗೆ ಅರ್ಜುನ್‌ ಸರ್ಜಾ ಅವರೂ ಹೆಜ್ಜೆ ಹಾಕಿರುವುದು ಮತ್ತೂಂದು ವಿಶೇಷ. ದರ್ಶನ್‌ ಆ ಹಾಡಲ್ಲಿ ಹನುಮನ ಭಕ್ತರಾಗಿ ಕಾಣಿಸಿಕೊಂಡಿದ್ದಾರೆ. ಕೇಸರಿ ವಸ್ತ್ರ ಧರಿಸಿ, ಹೆಜ್ಜೆ ಹಾಕಿರುವ ದರ್ಶನ್‌, ಆಂಜನೇಯ ಎದುರು ಹನುಮನ ಭಕ್ತನ ಗೆಟಪ್‌ನಲ್ಲಿ ಕುಣಿದು ಕುಪ್ಪಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಸರ್ಜಾ ಫ್ಯಾಮಿಲಿ ಜತೆ ದರ್ಶನ್‌ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದು ವಿಶೇಷ. ಅಂದಹಾಗೆ, ಜೆಸ್ಸಿಗಿಫ್ಟ್ ಸಂಗೀತ ಇರುವ "ಪ್ರೇಮ ಬರಹ' ಚಿತ್ರಕ್ಕೆ ವಿಜಯ ನರಸಿಂಹ ಸಾಹಿತ್ಯ ಬರೆದಿದ್ದಾರೆ. ಹನುಮಾನ್‌ ಚಾಲೀಸ್‌ ಹಾಡಿಗೆ ಎಸ್‌.ಪಿ.ಬಾಲಸುಬ್ರಮಣ್ಯಂ ಧ್ವನಿಯಾಗಿದ್ದಾರೆ. ಆ ಹಾಡನ್ನು ನೃತ್ಯ ನಿರ್ದೇಶಕ ಮೋಹನ್‌ ಸಂಯೋಜಿಸಿದ್ದಾರೆ. ಇದೇ ಮೊದಲ ಸಲ ಅರ್ಜುನ್‌ ಸರ್ಜಾ ಅವರೊಂದಿಗೆ ಚಿರಂಜೀವಿ ಸರ್ಜಾ ಮತ್ತು ಧ್ರುವಸರ್ಜಾ ಅವರು ಹೆಜ್ಜೆ ಹಾಕಿದ್ದಾರೆ.

ಸರ್ಜಾ ಫ್ಯಾಮಿಲಿಯ ಮೂವರು ನಾಯಕರು ಒಂದೇ ಹಾಡಲ್ಲಿ ಕಾಣಿಸಿಕೊಂಡಿರುವುದು ವಿಶೇಷತೆಗಳ್ಲಲೊಂದು. ಅಂದಹಾಗೆ, ಹಲವು ವರ್ಷಗಳಿಂದಲೂ ಸರ್ಜಾ ಫ್ಯಾಮಿಲಿ ಆಂಜನೇಯನಿಗೆ ಭಕ್ತರು. ಮನೆದೇವನೆಂದೇ ಹೇಳಿಕೊಳ್ಳುವ ಹನುಮನ ಹಾಡಿಗೆ ಸರ್ಜಾ ಕುಟುಂಬದ ಜತೆ ದರ್ಶನ್‌ ಹೆಜ್ಜೆ ಹಾಕಿರುವುದು ಸಹ ವಿಶೇಷ. "ಪ್ರೇಮ ಬರಹ' ಚಿತ್ರಕ್ಕೆ ಚಂದನ್‌ ಹೀರೋ. ಅವರಿಗೆ ಅರ್ಜುನ್‌ ಸರ್ಜಾ ಅವರ ಪುತ್ರಿ ಐಶ್ವರ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Trending videos

Back to Top