CONNECT WITH US  

ಬ್ಯಾಕ್‌ ಟು ಬ್ಯಾಕ್‌ ರಶ್ಮಿಕಾ

ರಶ್ಮಿಕಾ ಮಂದಣ್ಣಗೆ ಡಿಸೆಂಬರ್‌ ತಿಂಗಳು ಬಹಳ ಲಕ್ಕಿ ಎಂದನಿಸುತ್ತಿದೆ. ಏಕೆಂದರೆ, ಕಳೆದ ವರ್ಷ ಡಿಸೆಂಬರ್‌ನಲ್ಲಿ ರಶ್ಮಿಕಾ ಅಭಿನಯದ ಮೊದಲ ಚಿತ್ರ "ಕಿರಿಕ್‌ ಪಾರ್ಟಿ' ಬಿಡುಗಡೆಯಾಗಿತ್ತು. ಈ ವರ್ಷದ ಡಿಸೆಂಬರ್‌ನಲ್ಲಿ ರಶ್ಮಿಕಾ ಅಭಿನಯದ ಎರಡು ಕನ್ನಡ ಚಿತ್ರಗಳು ಬ್ಯಾಕ್‌ ಟು ಬ್ಯಾಕ್‌ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.

ಹೌದು, ರಶ್ಮಿಕಾ ಮಂದಣ್ಣ ಅಭಿನಯದ ಎರಡು ಚಿತ್ರಗಳು ಈ ತಿಂಗಳು ಬಿಡುಗಡೆಯಾಗುತ್ತಿದೆ. "ಕಿರಿಕ್‌ ಪಾರ್ಟಿ' ಯಶಸ್ಸಿನ ನಂತರ ರಶ್ಮಿಕಾ ಕನ್ನಡದಲ್ಲಿ ಎರಡು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಪುನೀತ್‌ ರಾಜಕುಮಾರ್‌ ಅಭಿನಯದ "ಅಂಜನಿಪುತ್ರ' ಒಂದಾದರೆ, ಗಣೇಶ್‌ ಅಭಿನಯದ "ಚಮಕ್‌' ಇನ್ನೊಂದು ಚಿತ್ರವಾಗಿತ್ತು. ಈಗ ಆ ಎರಡೂ ಚಿತ್ರಗಳು ಒಂದರ ಹಿಂದೊಂದು ಬಿಡುಗಡೆಯಾಗುತ್ತಿದೆ.

ಈಗಾಗಲೇ "ಚಮಕ್‌' ಚಿತ್ರದ ಸೆನ್ಸಾರ್‌ ಆಗಿದ್ದು, ಚಿತ್ರಕ್ಕೆ "ಯು/ಎ' ಪ್ರಮಾಣ ಪತ್ರ ಸಿಕ್ಕಿತ್ತು. ಈಗ ಪ್ರಮಾಣ ಪತ್ರ ಸಿಕ್ಕಿರುವುದರಿಂದ, ಚಿತ್ರವನ್ನು ಡಿಸೆಂಬರ್‌ 29ರಂದು ಬಿಡುಗಡೆ ಮಾಡುವುದಕ್ಕೆ ನಿರ್ದೇಶಕ ಸುನಿ ಮತ್ತು ನಿರ್ಮಾಪಕ ಚಂದ್ರಶೇಖರ್‌ ತೀರ್ಮಾನಿಸಿದ್ದಾರೆ. ಅದಕ್ಕೂ ಒಂದು ವಾರದ ಮುನ್ನ, ಅಂದರೆ ಡಿಸೆಂಬರ್‌ 22ರಂದು "ಅಂಜನಿಪುತ್ರ' ಚಿತ್ರವು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

ಈ ಮಧ್ಯೆ ರಶ್ಮಿಕಾ ತೆಲುಗಿನ ನಾಗಶೌರ್ಯ ಅಭಿನಯದ "ಚಲೋ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಚಿತ್ರದ ಟೀಸರ್‌ಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ. ಇನ್ನು ರಶ್ಮಿಕಾ, ಧ್ರುವ ಸರ್ಜಾ ಅಭಿನಯದ "ಪೊಗರು' ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದು, ಸದ್ಯದಲ್ಲಿಯೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆ.

Trending videos

Back to Top