CONNECT WITH US  

ಹೆಂಗಿತ್ತು, ಹೆಂಗಾಯ್ತು ಕಿರಿಕ್‌ ಬೈಕ್‌

ಶ್ರೀಮನ್ನಾರಾಯಣನ ಹೊಸ ಸವಾರಿ

ರಕ್ಷಿತ್‌ ಶೆಟ್ಟಿ ಸ್ಟೈಲಿಶ್‌ ಬೈಕ್‌ವೊಂದರಲ್ಲಿ ಓಡಾಡುತ್ತಿದ್ದೆರ ಖಂಡಿತಾ ನಿಮ್ಮ ಕಣ್ಣು ಆ ಬೈಕ್‌ ಮೇಲೆ ಬಿದ್ದೇ ಬೀಳುತ್ತದೆ. "ಇದ್ಯಾವುದಪ್ಪಾ ಇಂಫೋರ್ಟೆಡ್‌ ಬೈಕ್‌' ಎಂದು ನೋಡುವ ಸರದಿ ನಿಮ್ಮದಾಗುತ್ತದೆ. ಆ ಮಟ್ಟಿನ ಬೈಕ್‌ವೊಂದು ರಕ್ಷಿತ್‌ ಬಳಿ ಇದೆ. ಎಲ್ಲಾ ಓಕೆ ಯಾವುದು ಈ ಬೈಕ್‌ ಎಂದು ನೀವು ಹತ್ತಿರ ಹೋಗಿ ನೋಡಿದರೆ ಟ್ಯಾಂಕ್‌ ಮೇಲೆ "ಸುಕರ್ಣ' ಎಂದು ಕಾಣುತ್ತದೆ. ಸುಕರ್ಣ ಯಾವ ಕಂಪೆನಿಯ ಬೈಕ್‌ ಎಂದು ನೀವು ತಲೆಕೆಡಿಸಿಕೊಳ್ಳುವುದು ಗ್ಯಾರಂಟಿ.

ಅಷ್ಟಕ್ಕೂ ರಕ್ಷಿತ್‌ ಬಳಿ ಇರೋದು ರಾಯಲ್‌ ಎನ್‌ಫೀಲ್ಡ್‌ ಬುಲೆಟ್‌ ಬೈಕ್‌. ಅದನ್ನು ಅವರಿಗೆ ಬೇಕಾದಂತೆ ಸ್ಟೈಲಿಶ್‌ ಆಗಿ ರೆಡಿಮಾಡಿಸಿದ್ದಾರೆ. ನೀವು "ಕಿರಿಕ್‌ ಪಾರ್ಟಿ' ಸಿನಿಮಾ ನೋಡಿದ್ದರೆ ಅದರಲ್ಲಿ ರಕ್ಷಿತ್‌ ಬುಲೆಟ್‌ ಬೈಕ್‌ವೊಂದನ್ನು ಓಡಿಸುತ್ತಾರೆ. ಬುಲೆಟ್‌ನಲ್ಲಿ ಲಾಂಗ್‌ ರೈಡ್‌ ಹೋಗುವ ದೃಶ್ಯವಿದೆ. ಇತ್ತೀಚೆಗೆ ಆ ಬುಲೆಟ್‌ ಅನ್ನು ತಮಗೆ ಬೇಕಾದಂತೆ ಡಿಸೈನ್‌ ಮಾಡಿಸಿ, ಹೊಸ ಲುಕ್‌ ಕೊಟ್ಟಿದ್ದಾರೆ.

ಎಲ್ಲಾ ಓಕೆ ಈ ಬೈಕ್‌ಗೆ ಯಾವ ಹೆಸರು ಕೊಡೋದೆಂದು ರಕ್ಷಿತ್‌ ಆಲೋಚಿಸುತ್ತಿದ್ದಾಗ ಅವರಿಗೆ ತೋಚಿದ್ದು ಸುಕರ್ಣ. ಆ ಹೆಸರು ಕೊಡಲು ಕಾರಣ ಕೂಡಾ "ಕಿರಿಕ್‌ ಪಾರ್ಟಿ' ಚಿತ್ರ. ಆ ಚಿತ್ರದಲ್ಲಿ ರಕ್ಷಿತ್‌ ಹೆಸರು ಕರ್ಣ ಎಂದು. ಆರಂಭದಲ್ಲಿ ತುಂಟ ವಿದ್ಯಾರ್ಥಿಯಾಗಿರುವ ಕರ್ಣ ಮುಂದೆ ಒಳ್ಳೆಯವನಾಗುತ್ತಾನೆ. ಅದೇ ಕಾರಣಕ್ಕೆ ತಮ್ಮ ಬೈಕ್‌ಗೆ "ಸುಕರ್ಣ' ಎಂದು ಹೆಸರಿಟ್ಟಿದ್ದಾರೆ ರಕ್ಷಿತ್‌. ಜೊತೆಗೆ ಬೈಕ್‌ ಟ್ಯಾಂಕ್‌ ಮೇಲೆ ಸಣ್ಣ ಅಕ್ಷರಗಳಲ್ಲಿ "ಕಿರಿಕ್‌ ಪಾರ್ಟಿ' ಎಂದು ಬರೆಯಲಾಗಿದೆ.

ಸದ್ಯ ಈ ಬೈಕ್‌ ಅನೇಕರ ಗಮನ  ಸೆಳೆಯುತ್ತಿರೋದಂತೂ ಸುಳ್ಳಲ್ಲ. ರಾಜರಾಜೇಶ್ವರಿ ನಗರದ ತಮ್ಮ ಕಚೇರಿ ಮುಂದೆ ಬೈಕ್‌ ನಿಲ್ಲಿಸಿದ್ದರೆ ಅದನ್ನು ನೋಡುವವರ, ಅದರ ಜೊತೆ ಫೋಟೋ ತೆಗೆಸಿಕೊಳ್ಳುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅಂದಹಾಗೆ, ರಕ್ಷಿತ್‌ ಅವರ "ಅವನೇ ಶ್ರೀಮನ್ನಾರಾಯಣ' ಚಿತ್ರೀಕರಣ ಸೋಮವಾರದಿಂದ ಆರಂಭವಾಗಿದ್ದು, ಬಾಗಲಕೋಟೆಯಲ್ಲಿ ನಡೆಯುತ್ತಿದೆ.

ಈ ಚಿತ್ರದಲ್ಲಿ ರಕ್ಷಿತ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಿತ್‌ಗೆ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್‌ ಕಾಣಿಸಿಕೊಳ್ಳುತ್ತಿದ್ದು, ಮಿಕ್ಕಂತೆ ಅಚ್ಯುತ್‌ ಕುಮಾರ್‌, ಪ್ರಮೋದ್‌ ಶೆಟ್ಟಿ, ಬಾಲಾಜಿ ಮನೋಹರ್‌ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಚಿತ್ರವನ್ನು ಸಚಿನ್‌ ನಿರ್ದೇಶಿಸುತ್ತಿದ್ದು, ರಕ್ಷಿತ್‌ ಶೆಟ್ಟಿ, ಪುಷ್ಕರ್‌ ಮಲ್ಲಿಕಾರ್ಜುನಯ್ಯ ಮತ್ತು ಪ್ರಕಾಶ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಕರಮ್‌ ಚಾವ್ಲಾ ಅವರ ಛಾಯಾಗ್ರಹಣ ಮತ್ತು ಚರಣ್‌ರಾಜ್‌ ಅವರ ಸಂಗೀತವಿದೆ.

Trending videos

Back to Top