ಕಲರ್ಸ್ ಕನ್ನಡದಲ್ಲಿ “ತಕಧಿಮಿತ’
Team Udayavani, Feb 3, 2019, 5:40 AM IST
ಕಿರುತೆರೆಯಲ್ಲಿ ಇತ್ತೀಚೆಗೆ ಡ್ಯಾನ್ಸ್ಗೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮಗಳು ಬರುತ್ತಿಲ್ಲ ಎಂದು ಗೊಣಗುತ್ತಿದ್ದವರಿಗೆ ಇದೇ ವಾರಾಂತ್ಯದಿಂದ ಮಸ್ತ್ ಮನರಂಜನೆ ನೀಡುವ ತಕಧಿಮಿತ ಎನ್ನುವ ಹೆಸರಿನಲ್ಲಿ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ನೃತ್ಯಾಸಕ್ತರು ಮತ್ತು ನೃತ್ಯ ಪ್ರೇಮಿಗಳಿಗಾಗಿಯೇ ಪ್ರಾರಂಭವಾಗಿರುವ ತಕಧಿಮಿತ ಕಾರ್ಯಕ್ರಮ ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಇನ್ನು ತಕಧಿಮಿತ ರಿಯಾಲಿಟಿ ಶೋನಲ್ಲಿ ನಟ ಕ್ರೇಜಿಸ್ಟಾರ್ ರವಿಚಂದ್ರನ್, ನಟಿ ಸುಮನ್ ರಂಗನಾಥ್ ಮತ್ತು ಖ್ಯಾತ ಶಾಸ್ತ್ರೀಯ ನೃತ್ಯ ಕಲಾವಿದೆ ಅನುರಾಧಾ ವಿಕ್ರಾಂತ್ ತೀರ್ಪುಗಾರರಾಗಿ ವೇದಿಕೆಯಲ್ಲಿ ಇರಲಿದ್ದು, ಅಕುಲ್ ಬಾಲಾಜಿ ಈ ಶೋವನ್ನು ನಿರೂಪಣೆ ಮಾಡಲಿದ್ದಾರೆ.
ಇನ್ನೊಂದು ವಿಶೇಷವೆಂದರೆ, ಈ ಶೋನಲ್ಲಿ ಒಟ್ಟು 14 ಸೆಲೆಬ್ರಿಟಿಗಳು ನೃತ್ಯ ಸ್ಪರ್ಧಿಗಳಾಗಿ ಭಾಗವಹಿಸಲಿದ್ದು, ಅವರಿಗೆ ಜೋಡಿಯಾಗಿ 14 ಜನಸಾಮಾನ್ಯರು ಹೆಜ್ಜೆ ಹಾಕಲಿದ್ದಾರೆ. ಶೃತಿ ಪ್ರಕಾಶ್, ಕಾರುಣ್ಯಾ ರಾಮ್, ಆದಂ ಪಾಷಾ, ದಿಶಾ ರಾಮ್, ರಕ್ಷಿತ್, ನೇಹಾ ಗೌಡ, ಸುನೀಲ್, ಲಾಸ್ಯ ನಾಗರಾಜ್ ಮೊದಲಾದ ಕಿರುತೆರೆ ಸೆಲೆಬ್ರಿಟಿಗಳು ತಮ್ಮ ಜೊತೆಗಾರರೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.