CONNECT WITH US  

ಸರ್ಕಾರ, ಪಾಲಿಕೆ ವಿರುದ್ಧ ಹೋರಾಡಿ ಪಕ್ಷ ಸಂಘಟಿಸಿ

ಬೆಂಗಳೂರು: ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಯ ಕಾಂಗ್ರೆಸ್‌ ನೇತೃತ್ವದ ಆಡಳಿತದ ವಿರುದ್ಧ ಬಿಜೆಪಿ ಬೆಂಗಳೂರು ನಗರ ಘಟಕ ಹೋರಾಟ ಕೈಗೊಳ್ಳುವಲ್ಲಿ ವಿಫ‌ಲವಾಗಿರುವ ಬಗ್ಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಕ್ಷಣದಿಂದಲೇ ಹೋರಾಟ ತೀವ್ರಗೊಳಿಸುವ ಮೂಲಕ ಪಕ್ಷದ ಸಂಘಟನೆ ಚುರುಕುಗೊಳಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಬೆಂಗಳೂರು ನಗರ ಜಿಲ್ಲಾ ಬಿಜೆಪಿ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು, ನಗರ ಜಿಲ್ಲೆಯಲ್ಲಿ 17 ಶಾಸಕರು, ಮೂವರು ಸಂಸದರು, 101 ಕಾರ್ಪೋರೇಟ್‌ಗಳು ಪಕ್ಷದಿಂದ ಆಯ್ಕೆಯಾಗಿದ್ದಾರೆ. ಆದರೆ, ಆಡಳಿತ ನಡೆಸುವವರ ಜನ ವಿರೋಧಿ ನೀತಿಗಳ ವಿರುದ್ಧ ಯಾವ ಪ್ರಮಾಣದಲ್ಲಿ ಹೋರಾಟ ನಡೆಯಬೇಕಿತ್ತೋ ಆ ಪ್ರಮಾಣದಲ್ಲಿ ಹೋರಾಟ ನಡೆದಿಲ್ಲ ಎಂಬುದನ್ನು ನೋವಿನಿಂದ ಹೇಳುತ್ತೇನೆ ಎಂದರು.

ಬಿಬಿಎಂಪಿಯಲ್ಲಿ ಕಸ ವಿಲೇವಾರಿಗೆ 350 ಕೋಟಿ ರೂ. ಇದ್ದ ಮೊತ್ತವನ್ನು ಈಗ 857 ಕೋಟಿ ರೂ.  ಹೆಚ್ಚಿಸಲಾಗಿದೆ. ಆದರೂ ಕಸ ವಿಲೇ ಆಗುತ್ತಿಲ್ಲ ಎಂದರೆ ಇದರಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಆದರೆ, ನಾವು ಹೋರಾಟಕ್ಕಿಳಿಯದೆ ತಿನ್ನುವವರಿಗೆ ಅವಕಾಶ ಮಾಡಿಕೊಟ್ಟು ಕೈಕಟ್ಟಿಕೊಂಡು ಕೂತಿದ್ದೇವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕೋಟ್ಯಂತರ ರೂ. ಲೂಟಿ ಮಾಡುತ್ತಿದ್ದರೂ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಿಳಾ ಕಾರ್ಪೋರೇಟರ್‌ ಒಬ್ಬರು ತಮ್ಮ ಬಳಿ ಬಂದು ಕಾಂಗ್ರೆಸ್‌ ಶಾಸಕ ಮುನಿರತ್ನಂ ನಾಯ್ಡು ತಮ್ಮ ಮೇಲೆ ನಡೆಸುತ್ತಿರುವ ಗೂಂಡಾಗಿರಿ, ವಿನಾ ಕಾರಣ ಪೊಲೀಸರಿಗೆ ದೂರು ನೀಡಿ ಕಿರುಕುಳ ನೀಡುತ್ತಿರುವ ಬಗ್ಗೆ ಹೇಳಿಕೊಂಡು ಕಣ್ಣೀರು ಸುರಿಸಿದರು. ಇಂತಹ ಕೃತ್ಯಗಳು ನಗರದಲ್ಲಿ ನಡೆಯುತ್ತಿದ್ದರೂ ನಮ್ಮವರು ಮಾತ್ರ ಮೌನವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದ ಕಾಂಗ್ರೆಸ್‌ ಸರ್ಕಾರ ಅನ್ನಭಾಗ್ಯ ಯೋಜನೆ ತನ್ನದೇ ಎಂದು ಹೇಳಿಕೊಂಡು ಪ್ರಚಾರ ತೆಗೆದುಕೊಳ್ಳುತ್ತಿದೆ. ಆದರೆ, ಕೇಂದ್ರ ಸರ್ಕಾರ 32 ರೂ. ಅಕ್ಕಿಯನ್ನು ಕೇವಲ 3 ರೂ.ಗೆ ರಾಜ್ಯಕ್ಕೆ ನೀಡುತ್ತಿದೆ. ಆ ಮೂರು ರುಪಾಯಿಯನ್ನು ರಾಜ್ಯ ಸರ್ಕಾರ ಭರಿಸಿ ತಾನೇ ಉಚಿತ ಅಕ್ಕಿ ನೀಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಆದರೆ, ಕೇಂದ್ರ ಸರ್ಕಾರ ಪ್ರತಿ ಕೆ.ಜಿ. ಅಕ್ಕಿಗೆ 29 ರೂ. ಸಬ್ಸಿಡಿ ನೀಡುತ್ತಿರುವುದನ್ನು ಹೇಳಬೇಕಾದ ಮುಖಂಡರು, ಪದಾಧಿಕಾರಿಗಳು ಸುಮ್ಮನಿರುವುದು ಸರಿಯಲ್ಲ ಎಂದರು.

ಕೇಂದ್ರ ಸಚಿವ ಅನಂತಕುಮಾರ್‌ ಮಾತನಾಡಿ, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ನಗರಲ್ಲಿ ಬಿಜೆಪಿ 22ರಿಂದ 23 ಸ್ಥಾನಗಳನ್ನು ಗೆಲ್ಲಲು ಅವಕಾಶವಿದೆ. ಆ ನಿಟ್ಟಿನಲ್ಲಿ ಪಕ್ಷವನ್ನು ಸಿದ್ಧಪಡಿಸಬೇಕಿದೆ. ಅದಕ್ಕಾಗಿ ನೀರಿನ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳ ವಿರುದ್ಧ ನಿರಂತರ ಹೋರಾಟ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು. ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ವಿಧಾನಸ ಪರಿಷತ್‌ ಸದಸ್ಯ ರಾಮಚಂದ್ರಗೌಡ, ಶಾಸಕರು, ಬಿಬಿಎಂಪಿ ಸದಸ್ಯರು, ಬಿಜೆಪಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರು ಸಭೆಯಲ್ಲಿ ಹಾಜರಿದ್ದರು.

ಆಧಿಕಾರವನ್ನು ಬಂಗಾರದ ತಟ್ಟೆಯಲ್ಲಿ ಇಟ್ಟು ಕೊಡ್ತಾರೆ ಜನ!
ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತಧಿನಾಡಿ,  ಮತದಾರರಿಗಿಂತ ಹೆಚ್ಚಾಗಿ ಕಾರ್ಯಕರ್ತರು ಜವಾಬ್ದಾರಿಯುತ ಕೆಲಸ ಮಾಡಿದರೆ ಮಾತ್ರ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು. 2013ರಲ್ಲಿ 28 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 17 ಸ್ಥಾನ ಗೆದ್ದಿತ್ತು. ಈ ಬಾರಿ 20ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲಬೇಕಿದೆ.

ಅದಕ್ಕಾಗಿ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಕ್ರಿಯಾಶೀಲವಾಗಿ ಕೆಲಸ ಮಾಡಬೇಕು. ರಾಜ್ಯದಲ್ಲಿ ಜನ ಅಧಿಕಾರವನ್ನು ಬಂಗಾರದ ತಟ್ಟೆಯಲ್ಲಿಟ್ಟು ಬಿಜೆಪಿಗೆ ಕೊಡಲು ಸಿದ್ಧವಾಗಿದ್ದಾರೆ. ಅದನ್ನು ಅಷ್ಟೇ ಜವಾಬ್ದಾರಿಯಿಂದ ನಾವು ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮಲ್ಲಿರುವ ಗೊಂದಲಗಳನ್ನು ಬದಿಗಿಟ್ಟು ಜನರ ಪ್ರೀತಿ ಗಳಿಸುವ ಕೆಲಸ ಆಗಬೇಕು ಎಂದು ತಿಳಿಸಿದರು.


Trending videos

Back to Top