CONNECT WITH US  

ಮುನಿರತ್ನ ವಿರುದ್ಧ ಪ್ರಕರಣ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಸಾವಿರಾರು ಚುನಾವಣಾ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಮುನಿರತ್ನಂ ವಿರುದ್ಧ ಎಫ್ಐಆರ್‌ ದಾಖಲಿಸುವಂತೆ ನಗರದ 7ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.

ಈ ಮಧ್ಯೆ ಅಪಾರ್ಟ್‌ಮೆಂಟ್‌ನಲ್ಲಿ ಬಂಡಲ್‌ ಗಟ್ಟಲೆ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಕುರಿತು ತನಿಖೆ ಮುಂದುವರಿಸಿರುವ ಉತ್ತರ ವಿಭಾಗದ ಪೊಲೀಸರು ಶುಕ್ರವಾರ ಮೂವರನ್ನು ಬಂಧಿಸಿದ್ದಾರೆ. ಚಿನ್ನತಂಬಿ, ಚಿನ್ನ
ದೊರೈ ಮತ್ತು ಶರವಣ ಬಂಧಿತರು. ಮೂವರು ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಎಂದು ಹೇಳಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಮತದಾರರ ಗುರುತಿನ ಚೀಟಿ ಪತ್ತೆ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಕುರಿತು ಬಿಜೆಪಿ ಕಾರ್ಯಕರ್ತ ಎನ್‌. ರಾಕೇಶ್‌ ನಗರದ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದು, ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕರ ಕೈವಾಡವೂ ಇರುವುದರಿಂದ ಅವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರಿಗೆ ಸೂಚಿಸಬೇಕು ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಕೋರ್ಟ್‌, ಶಾಸಕ ಮುನಿರತ್ನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಜಾಲಹಳ್ಳಿ ಠಾಣೆ ತನಿಖಾಧಿಕಾರಿಗೆ ಆದೇಶಿಸಿತು.

ಅಲ್ಲದೆ, ಐಪಿಸಿ ಸೆಕ್ಷನ್‌ 420 (ವಂಚನೆ), 465 (ನಕಲಿ), 468 (ವಂಚನೆ ಉದ್ದೇಶದಿಂದ ದಾಖಲೆಗಳನ್ನು ನಕಲಿ ಮಾಡುವುದು), 471 (ಅಸಲಿಯಂತೆ ಕಾಣುವ ನಕಲಿ ದಾಖಲೆಗಳ ಬಳಕೆ)171 ಎಫ್‌ (ಚುನಾವಣೆ ಮೇಳೆ
ಮತದಾರರ ಮೇಲೆ ಪ್ರಭಾವ) ಮತ್ತು ಜನಪ್ರತಿನಿಧಿ ಕಾಯ್ದೆ ಕಲಂ 123 (ಮತದಾರರಿಗೆ ಲಂಚದ ಆಮಿಷ, ಪ್ರಭಾವ ಬೀರುವುದು) ಅನ್ವಯ ಪ್ರಕರಣ ದಾಖಲಿಸಿಕೊಳ್ಳಲು ಆದೇಶಿಸಿದ್ದು, ಜೂ.25ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

ಏನಿದು ಪ್ರಕರಣ?: ಜಾಲಹಳ್ಳಿಯ ಎಸ್‌ಎಲ್‌ವಿ ಅಪಾರ್ಟ್‌ಮೆಂಟ್‌ ಮೇಲೆ ಚುನಾವಣಾ ವಿಚಕ್ಷಣಾ ದಳ ದಾಳಿ ನಡೆಸಿದ್ದು, ಈ ವೇಳೆ 9 ಸಾವಿರಕ್ಕೂ ಹೆಚ್ಚು ಗುರುತಿನ ಚೀಟಿಗಳು, ಐದು ಲ್ಯಾಪ್‌ಟಾಪ್‌, ಮತದಾರರ ಪಟ್ಟಿ ಸೇರಿದಂತೆ ಹಲವು ದಾಖಲೆಗಳು ಪತ್ತೆಯಾಗಿದ್ದವು. ಪತ್ತೆಯಾದ ಗುರುತಿನ ಚೀಟಿಗಳು ಅಸಲಿಯಾಗಿದ್ದವು. ಜತೆಗೆ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಮುನಿರತ್ನ ನಾಯ್ಡು ಭಾವಚಿತ್ರ ಇರುವ ಕರಪತ್ರಗಳು ಕೂಡ ಪತ್ತೆಯಾಗಿದ್ದವು. ಕೇಂದ್ರ ಚುನಾವಣಾಧಿಕಾರಿಗಳು 14 ಮಂದಿ ವಿರುದ್ಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಮುನಿರತ್ನರನ್ನು 14ನೇ ಆರೋಪಿಯನ್ನಾಗಿ ಮಾಡಲಾಗಿದೆ. ಮುನಿರತ್ನ ವಿರುದ್ಧ ಎಫ್ಐಆರ್‌ ದಾಖಲಿಸಲು ಕೋರ್ಟ್‌ ಆದೇಶಿಸಿದೆ.

ದೂರಿನಲ್ಲಿ ಏನಿತ್ತು?
ಮೇ 8ರಂದು ಜಾಲಹಳ್ಳಿಯ ಎಸ್‌ ಎಲ್‌ವಿ ಅಪಾರ್ಟ್‌ಮೆಂಟ್‌ನಲ್ಲಿ ಚುನಾವಣಾ ಅಕ್ರಮ ನಡೆಯುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಅದರಂತೆ ಸ್ಥಳಕ್ಕೆ ತೆರಳಿದಾಗ, ಸಾವಿರಾರು ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಕಾಂಗ್ರೆಸ್‌ ಸ್ಥಳೀಯ ಮುಖಂಡರಾದ ಸುನಂದಮ್ಮ, ಈಕೆಯ ಪುತ್ರ ಮೋಹನ್‌, ಕಿರಣ್‌ ಸೇರಿ ನಾಲ್ಕೈದು ಮಂದಿ ಇದ್ದು, ಮೇ 12 ರಂದು ನಡೆಯಲಿರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವಿಗಾಗಿ ಅಕ್ರಮದಲ್ಲಿ ತೊಡಗಿದ್ದರು. ಇದನ್ನು ಪ್ರಶ್ನಿಸಿದಾಗ ಆರೋಪಿಗಳು ನನ್ನ ಬೆಂಬಲಿಗರು, ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸುವಾಗ ಪೊಲೀಸರು ಮುನಿರತ್ನ ಹೆಸರು ಕೈಬಿಟ್ಟು ಇತರರ ವಿರುದ್ಧ ದೂರು ದಾಖಲಿಸಿದ್ದರು. ಮುನಿರತ್ನ ಅವರನ್ನು ಆರೋಪಿಯನ್ನಾಗಿಸಿ ಎಂದು ರಾಖೇಶ್‌ ದೂರಿನಲ್ಲಿ ಒತ್ತಾಯಿಸಿದ್ದರು.

Trending videos

Back to Top