CONNECT WITH US  

ಸಬ್‌ಅರ್ಬನ್‌ ರೈಲು ಯೋಜನೆಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಬೆಂಗಳೂರಿನಿಂದ ಸುತ್ತಮುತ್ತಲಿನ ನಗರಗಳಿಗೆ ಸಂಪರ್ಕ ಕಲ್ಪಿಸುವ ಉಪ ನಗರ ರೈಲು ಯೋಜನೆಗೆ ರಾಜ್ಯ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಯೋಜನೆ ಅನುಷ್ಠಾನಗೊಳಿಸಲು ಒಪ್ಪಿಗೆ ನೀಡಲಾಗಿದ್ದು, ಕೇಂದ್ರ ಸರ್ಕಾರ ಯೋಜನಾ ವೆಚ್ಚದ ಶೇ.20ರಷ್ಟು ರಾಜ್ಯ ಸರ್ಕಾರ ಶೇ.20ರಷ್ಟು ಹಾಗೂ ವಿವಿಧ ಮೂಲಗಳಿಂದ ಸಾಲದ ರೂಪದಲ್ಲಿ ಶೇ.60ರಷ್ಟು ಅನುದಾನ ಪಡೆಯಲು ನಿರ್ಧರಿಸಲಾಗಿದೆ. 

ಸಂಪುಟ ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್‌, ಸಚಿವ ಸಂಪುಟದಲ್ಲಿ 23,093 ಕೋಟಿ ರೂ. ವೆಚ್ಚದ ಉಪ ನಗರ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಈ ಹಿಂದಿನ ಪ್ರಸ್ತಾಪಿತ ಯೋಜನೆ ಪೈಕಿ ಕೆಲವು ರೈಲು ಮಾರ್ಗಗಳನ್ನು ಪರಿಷ್ಕರಿಸಲಾಗಿದೆ ಎಂದು ಹೇಳಿದರು.

ಒಪ್ಪಿಗೆ ನೀಡಲಾದ ಉಪ ನಗರ ರೈಲು ಯೋಜನೆಗಳು
ಕಾರಿಡಾರ್‌ 1:
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ -ದೇವನಹಳ್ಳಿ 
ಕಾರಿಡಾರ್‌ 2: ವಸಂತಪುರ-ತುಮಕೂರು-ಬೈಯಪ್ಪನಹಳ್ಳಿ
ಕಾರಿಡಾರ್‌ 3: ರಾಮನಗರ- ಜ್ಞಾನಭಾರತಿವರೆಗೆ
ಕಾರಿಡಾರ್‌ 3ಎ: ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆವರೆಗೆ
ಕಾರಿಡಾರ್‌ 3ಬಿ: ಕೆಂಗೇರಿಯಿಂದ ವೈಟ್‌ಫೀಲ್ಡ್‌ವರೆಗೆ
ಕಾರಿಡಾರ್‌ 4: ಹೊಸೂರಿನಿಂದ ದೊಡ್ಡಬಳ್ಳಾಪುರವರೆಗೆ

ಮೆಟ್ರೋ ಯೋಜನಾ ವೆಚ್ಚ ಪರಿಷ್ಕರಣೆ: ನಮ್ಮ ಮೆಟ್ರೋ ಯೋಜನೆಯ 2 ಹಾಗೂ 3ನೇ ಹಂತದ ಪರಿಷ್ಕೃತ ಯೋಜನೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ. ಕೆ.ಆರ್‌.ಪುರದ ಎರಡನೇ ಹಂತದ ಯೋಜನೆಗೆ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್‌.ಪುರವರೆಗಿನ ಯೋಜನಾ ವೆಚ್ಚವನ್ನು ಪರಿಷ್ಕರಣೆ ಮಾಡಲಾಗಿದ್ದು, 4200 ಕೋಟಿ ರೂ.ನಿಂದ 5994 ಕೋಟಿ ರೂ.ಗೆ ಹೆಚ್ಚಿಸಲು ಸಂಪುಟ ಒಪ್ಪಿಗೆ ನೀಡಿದೆ. 

ಹೆಬ್ಟಾಳದಿಂದ ನಾಗವಾರ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ಮೂರನೇ ಹಂತದ ಯೋಜನಾ ವೆಚ್ಚವನ್ನು 5950 ಕೋಟಿ ರೂ.ನಿಂದ 10,508 ಕೋಟಿ ರೂ.ಗೆ ಹೆಚ್ಚಳ ಮಾಡಲು ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದೇ ವೇಳೆ ಚಲ್ಲಘಟ್ಟ ಬಳಿ ಮೆಟ್ರೋ ರೈಲು ನಿಲ್ದಾಣ ಸ್ಥಾಪನೆಗೆ 140 ಕೋಟಿ ರೂ. ಬಿಡುಗಡೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವ ಬಂಡೆಪ್ಪ ಕಾಶಂಪುರ್‌ ಹೇಳಿದರು.

Trending videos

Back to Top