CONNECT WITH US  

ಮಾದಕ ವಸ್ತು ಸೇವನೆ ವಿದ್ಯಾವಂತರಲ್ಲೇ ಹೆಚ್ಚು

ಹುಮನಾವಾದ: ಮಾದಕ ವಸ್ತು ಸೇವನೆಯಿಂದ ಪ್ರಾಣಹಾನಿ ಜೊತೆಗೆ ನಿಮ್ಮನ್ನೇ ನಂಬಿದ ಕುಟುಂಬ ಸದಸ್ಯರು
ತೀವ್ರ ತೊಂದರೆಗೆ ಸಿಲುಕಬೇಕಾಗುತ್ತದೆ. ಮಾದಕ ವಸ್ತು ಸೇವನೆಯಲ್ಲಿ ಅವಿದ್ಯಾವಂತರಿಗಿಂತ ವಿದ್ಯಾವಂತರ
ಸಂಖ್ಯೆಯೇ ಹೆಚ್ಚು ಇರುವುದು ವಿಪರ್ಯಾಸ ಎಂದು ಪಿಎಸ್‌ಐ ಎಲ್‌.ಟಿ. ಸಂತೋಷ ಹೇಳಿದರು.

ಇಲ್ಲಿನ ಯಲಾಲ್‌ ಶಿಕ್ಷಣ ದತ್ತಿ ಎಸ್‌.ಬಿ. ಪದವಿ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.  ಯಾರೊಬ್ಬರು ಮಾದಕ ದ್ರವ್ಯ ಸೇವನೆಯತ್ತ ಚಿತ್ತ ಹರಿಸದೇ ಪೌಷ್ಠಿಕ ಆಹಾರ ಸೇವಿಸಿ, ನೆಮ್ಮದಿ ಜೀವನ ಸಾಗಿಸಬೇಕು. ಒಳ್ಳೆ ಹವ್ಯಾಸ, ಆಚರಣೆಗಳು ಉತ್ತಮ ನಾಗರಿಕರ ಲಕ್ಷಣ. ಆದರೇ ಬಹುತೇಕ ಮಂದಿ ಬೇರೆ ಬೇರೆ ಕಾರಣಗಳಿಂದಾಗಿ ದುಶ್ಚಟಗಳಿಗೆ ಬಲಿಯಾಗಿ  ತೊಂದರೆ ಅನುಭವಿಸುತ್ತಾರೆ.

ಸರ್ಕಾರ ಈ ನಿಟ್ಟಿನಲ್ಲಿ ಮಾದಕ ಉತ್ಪನ್ನಗಳ ಮೇಲೆ ಮಾದಕ ವಸ್ತು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ನಮೂದಿಸುತ್ತದೆ. ಆದರೂ ಸೇವಿಸಿ ಅನಾರೋಗ್ಯದಿಂದ ನರಳುತ್ತಾರೆ ಎಂದು ಹೇಳಿದರು.

ಪ್ರೊಬೇಶನರಿ ಪಿಎಸ್‌ಐ ಗೌತಮ ಮಾತನಾಡಿ, ಸಂಚಾರ ನಿಯಮ ಪಾಲನೆಯಿಂದ ಪ್ರಾಣ ರಕ್ಷಣೆ ಸಾಧ್ಯ.
ಆದರೆ ಪ್ರತಿ ವರ್ಷ ಕನಿಷ್ಟ 50 ಜನ ಹೆಲ್ಮೆಟ್‌ ಧರಿಸದೇ ವಾಹನ ಚಾಲನೆ ಮಾಡಿದ ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ವಾಹನ ಚಾಲಕರು ಹೆಲ್ಮೆಟ್‌ ಧರಿಸಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಯಲಾಲ್‌ ಶಿಕ್ಷಣ ದತ್ತಿ ಮುಖ್ಯಧರ್ಮದರ್ಶಿ ಶಾಂತವೀರ ಎನ್‌.ಯಲಾಲ್‌ ಮಾತನಾಡಿ, ಫ್ಯಾಶನ್‌ ಆಗುತ್ತಿರುವ ಮೊಬೈಲ್‌ ಬಳಕೆಯಿಂದ ಅವಾಂತರ ಸಂಭವಿಸುತ್ತಿರುವ ಕಾರಣ ಮಹಾವಿದ್ಯಾಲಯದಲ್ಲಿ ಮೊಬೈಲ್‌
ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ. ಯಾವುದಕ್ಕೂ ತೊಂದರೆ ಇರುವುದಾದರೇ ವಿದ್ಯಾರ್ಥಿನಿಯರು ಸಮೀಪದ ಪೊಲೀಸ್‌ ಠಾಣೆಗೆ ಕರೆ ಮಾಡಿದಲ್ಲಿ ಇಲಾಖೆ ಅಧಿಕಾರಿಗಳು ನೆರವಾಗುತ್ತಾರೆ ಎಂದರು.

ಪ್ರಾಚಾರ್ಯ ಶಿಲ್ಪಾರಾಣಿ ಶೇರಿಕಾರ, ಉಪಪ್ರಾಚಾರ್ಯ ಆನಂದಕುಮಾರ ಚಾಕೂರೆ, ಪ್ರೌಢಶಾಲಾ ವಿಭಾಗದ
ಮುಖ್ಯಶಿಕ್ಷಕ ತುಕಾರಾಮ ಬೈನೋರ್‌, ಪೊಲೀಸ್‌ ಸಿಬ್ಬಂದಿ ವಿಜಯಕುಮಾರ ವೇದಿಕೆಯಲ್ಲಿದ್ದರು. ಪೂಜಾ
ಪ್ರಾರ್ಥಿಸಿದರು. ಮಮತಾರಾಣಿ ಮಿತ್ರಾ ಸ್ವಾಗತಿಸಿದರು. ಪ್ರೊ| ಗೌರಮ್ಮ ಪಂಚಮಠ… ನಿರೂಪಿಸಿದರು. ಪ್ರೊ| ಶಿವಲೀಲಾ ಕೋರಿ ವಂದಿಸಿದರು. 


Trending videos

Back to Top