ಬಾಟಲಿಯಿಂದ ನೀರು ಕುಡಿದ ಕೋಲ ವಿಡಿಯೋ ವೈರಲ್
Team Udayavani, Jan 2, 2019, 5:05 AM IST
ಆಸ್ಟ್ರೇಲಿಯಾ ಬಿಸಿ ಮಾರುತದಿಂದ ತತ್ತರಿಸಿದೆ. ಮಾನವರಿಗೇ ಬಿಸಿ ಗಾಳಿ, ಅಧಿಕ ಉಷ್ಣಾಂಶ ತಡೆಯಲು ಸಾಧ್ಯವಾಗುತ್ತಿಲ್ಲ.ಅಂಥದರಲ್ಲಿ ಪ್ರಾಣಿಗಳು ಹೇಗೆ ತಡೆದುಕೊಂಡಾವು? ಕಳೆದ ವಾರದಿಂದ ಆಸ್ಟ್ರೇಲಿಯಾದಲ್ಲಿ 44 ಡಿಗ್ರಿ ಸೆಲ್ಸಿಯಸ್ನಿಂದ 60 ಡಿಗ್ರಿ ಸೆಲ್ಸಿಯಸ್ ಇತ್ತು. ಇದೇ ವೇಳೆ ಮಹಿಳೆಯೊಬ್ಬರು ಕಾಡಿನ ಕೋಲಗೆ ಬಾಟಲಿಯಲ್ಲಿ ನೀರು ಕುಡಿಸಿರುವ ವಿಡಿಯೋವೊಂದು ಆಸ್ಟ್ರೇಲಿಯಾದಾದ್ಯಂತ ವೈರಲ್ ಆಗಿದೆ.
ವಿಕ್ಟೋರಿಯಾದ ಮುರ್ರೆ ನದಿ ಪ್ರದೇಶದಲ್ಲಿ ಓಡಾಡುತ್ತಿದ್ದ ಚಾಂಟೆಲ್ಲೆ ಲೌರಿ ಎಂಬುವವರಿಗೆ ಕೋಲವೊಂದು ಕಣ್ಣಿಗೆ ಬೀಳುತ್ತದೆ. ಅದು ನೀರಿಗಾಗಿ ಹಪಹಪಿಸುತ್ತಿದೆ ಎಂದು ಭಾವಿಸಿದ ಅವರು ನೀರಿನ ಬಾಟಲಿಯನ್ನು ಅದರ ಬಾಯಿಯ ಬಳಿ ಒಯ್ಯುತ್ತಾರೆ. ಅದು ಬಾಟಲಿಯಿಂದ ನೀರು ಕುಡಿದು ಸಂತೃಪ್ತಿಯಿಂದ ಮರ ಏರುತ್ತದೆ.