ಕಣ್ಣಿನಲ್ಲೇ ಸೆಳೆದು ವೈರಲ್ ಆದ ಚೆಲುವೆಯ ಸಿನಿಮಾ ಹಾಡಿಗೆ! ಆಕ್ಷೇಪವೇನು | Udayavani - ಉದಯವಾಣಿ
   CONNECT WITH US  
echo "sudina logo";

ಕಣ್ಣಿನಲ್ಲೇ ಸೆಳೆದು ವೈರಲ್ ಆದ ಚೆಲುವೆಯ ಸಿನಿಮಾ ಹಾಡಿಗೆ! ಆಕ್ಷೇಪವೇನು

ನವದೆಹಲಿ: ಒಂದೇ ಒಂದು ಕಣ್ಸನ್ನೆಯಿಂದ ಕ್ಷಿಪ್ರವಾಗಿ ಜಗತ್ತಿನಾದ್ಯಂತ ವೈರಲ್ ಆದ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅಭಿನಯದ ಒರು ಅಡಾರ್ ಲವ್ ಚಿತ್ರಕ್ಕೆ ಈಗ ಸಂಕಷ್ಟ ಎದುರಾಗಿದೆ.

ಹೌದು ತನ್ನ ಒಂದೇ ಒಂದು ಕಣ್ಸನ್ನೆ ಮೂಲಕ ಪಡ್ಡೆ ಯುವಕರ ಹೃದಯಕ್ಕೆ ಲಗ್ಗೆ ಇಟ್ಟ ಪ್ರಿಯಾ ವಾರಿಯರ್ ನಟಿಸಿದ್ದ ಸಿನಿಮಾದ ಹಾಡಿನ ವಿರುದ್ಧವೇ ಅಪಸ್ವರ ಎದ್ದಿದೆ.

ಒರು ಅಡಾರ್ ಲವ್  ಸಿನಿಮಾದ ಮಾಣಿಕ್ಯ ಮಲರಯಾ ಪೂವಿ ಹಾಡಿನಲ್ಲಿ ಮುಸಲ್ಮಾನರ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೈದ್ರಾಬಾದ್ ಫಾರೂಖ್ ನಗರದ ಯುವಕರ ಗುಂಪು ಫಾಲಕ್ ನೂಮಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಎಎನ್ ಐ ವರದಿ ಪ್ರಕಾರ, ಠಾಣೆಯ ಎಸಿಪಿ ಸೈಯದ್ ಫೈಯಾಜ್ ಮಾತನಾಡಿ ಮಾಣಿಕ್ಯ ಮಲರಯಾ ಪೂವಿ ಎಂಬ ವೈರಲ್ ಹಾಡಿನಲ್ಲಿ ಮುಸ್ಲಿಂ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ದೂರು ನೀಡಿದ್ದಾರೆ. ಆದರೆ ಅವರು ವಿಡಿಯೋ ದಾಖಲೆ ಕೊಟ್ಟಿಲ್ಲ. ವಿಡಿಯೋ ದಾಖಲೆ ನೀಡುವಂತೆ ದೂರುದಾರರಿಗೆ ಸೂಚಿಸಿದ್ದೇವೆ, ಈವರೆಗೂ ಎಫ್ಐಆರ್ ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆಕ್ಷೇಪ ಯಾಕೆ?

ಚಿತ್ರದ ಹಾಡಿನಲ್ಲಿ ಪ್ರವಾದಿ ಕೀರ್ತನೆ ಇದೆ. ಪವಿತ್ರ ಮೆಕ್ಕಾದಲ್ಲಿ ಪ್ರವಾದಿಯವರ ಪತ್ನಿ ವಿಹರಿಸುತ್ತಿರುವ ಹಾಡಿನ ಸಾಲನ್ನು ಕಣ್ಸನ್ನೆ ಸಂದರ್ಭದಲ್ಲಿ ಜೋಡಿಸಿರುವುದಕ್ಕೆ ಮುಸ್ಲಿಂ ಸಮುದಾಯ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಓಮರ್ ಲಾಲು ಅವರ ನಿರೀಕ್ಷಿತ ಒರು ಅಡಾರ್ ಲವ್ ಸಿನಿಮಾದ ಮಾಣಿಕ್ಯ ಮಲರಯಾ ಪೂವಿ ಹಾಡಿನ ಸಣ್ಣ ತುಣುಕೊಂದು ಪ್ರಿಯಾಳನ್ನು ರಾತ್ರಿ ಬೆಳಗಾಗುವಷ್ಟರಲ್ಲಿ ಸೆಲೆಬ್ರಿಟಿಯನ್ನಾಗಿ ಮಾಡಿಬಿಟ್ಟಿತ್ತು. 18 ವರ್ಷದ ಪ್ರಿಯಾ ಪ್ರಕಾಶ್ ವಾರಿಯರ್ ಈಗ ಹಾಲಿವುಡ್ ನ ಸ್ಟಾರ್ ಗಳಾದ ಅಮೆರಿಕ ಮಾಡೆಲ್, ಟಿವಿ ನಿರೂಪಕಿ ಕೈಲಿ ಜೆನ್ನರ್ ಮತ್ತು ಖ್ಯಾತ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಸಾಲಿನಲ್ಲಿ ಬಂದು ನಿಂತಿದ್ದಾರೆ. ಈ ಹಾಡನ್ನು ವಿನೀತ್ ಶ್ರೀನಿವಾಸನ್ನು ಹಾಡಿದ್ದು, ಈ ಚಿತ್ರದ ಹಾಡನ್ನು ಶಾನ್ ರಹಮಾನ್ ಸಂಯೋಜಿಸಿದ್ದರು.

Trending videos

Back to Top