CONNECT WITH US  

ಸಾಲಮನ್ನಾಗೆ ಸಿಎಂ, ಡಿಸಿಎಂ ಪ್ರತಿಕೃತಿ ದಹನ

ಗುಂಡ್ಲುಪೇಟೆ: ರೈತರ ಎಲ್ಲಾ ರೀತಿಯ ಸಾಲವನ್ನೂ ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ  ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ಹೊರಟ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಬಸ್‌ ನಿಲ್ದಾಣದ ಮುಂಭಾಗ ಮಾನವ ಸರಪಳಿ ರಚಿಸಿ ಕೆಲಕಾಲ ರಸ್ತೆ ತಡೆದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್‌ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. 

ನಂತರ ಪಾದಯಾತ್ರೆಯಲ್ಲಿ ತಾಲೂಕು ಕಚೇರಿಗೆ ತಲುಪಿದ ಪ್ರತಿಭಟನಾಕಾರರನ್ನುದ್ದೇಶಿಸಿ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್‌ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ಕುಮಾರಸ್ವಾಮಿ ನೀಡಿದ್ದ ಭರವಸೆಯಂತೆ ಎಲ್ಲಾ ರೀತಿಯ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು. ಅಧಿಕಾರ ಸಿಕ್ಕ ನಂತರ ದಿನಕ್ಕೊಂದು ರೀತಿಯಲ್ಲಿ ಮಾತನಾಡುತ್ತಾ ರೈತರ ದಿಕ್ಕು ತಪ್ಪಿಸಲಾಗುತ್ತಿದೆ.

ಇದರಿಂದ ಗೊಂದಲಕ್ಕೊಳಗಾದ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಹಿಂದಿನ ಕಾಂಗ್ರೆಸ್‌ ಸರ್ಕಾರ ಕೂಡ ಷರತ್ತುಗಳ ಮೇಲೆ ಸಾಲ ಮನ್ನಾ ಮಾಡಿದ್ದರಿಂದ ಹೆಚ್ಚಿನ ರೈತರಿಗೆ ಪ್ರಯೋಜನವಾಗಿಲ್ಲ. ಆದ್ದರಿಂದ ರೈತರ ಕೃಷಿ, ಬೆಳೆ, ವಾಹನ ಹಾಗೂ ಚಿನ್ನಾಭರಣಗಳ ಮೇಲಿನ ಎಲ್ಲಾ ಸಾಲವನ್ನೂ ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.

ಸದನದಲ್ಲಿ ಕೂಡಲೇ ಸಾಲಮನ್ನಾ ಘೋಷಣೆ ಪ್ರಕಟಿಸದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದೇ ವೇಳೆ ತಹಶೀಲ್ದಾರ್‌ ಚಂದ್ರಕುಮಾರ್‌ಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್‌, ಮಾಡ್ರಹಳ್ಳಿ ಮಹದೇವಪ್ಪ, ಮಹೇಶ್‌, ಮಾನವಹಕ್ಕುಗಳ ಸಂಘಟನೆಯ ಮುಖಂಡ ನಾಗೇಂದ್ರ ಸೇರಿದಂತೆ ರೈತಸಂಘದ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.


Trending videos

Back to Top