CONNECT WITH US  

ಬೆಳೆನಷ್ಟ ಪರಿಹಾರ ನೀಡಲು ಕ್ರಮ: ಕೆ.ಜೆ.ಜಾರ್ಜ್‌

ಶೃಂಗೇರಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ಅಧಿಕಾರಿಗಳಿಂದ ಸಮಗ್ರ ವರದಿ ಪಡೆದು ಸೂಕ್ತ ಪರಿಹಾರ ನೀಡಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್‌ ಭರವಸೆ ನೀಡಿದರು.

ಬುಧವಾರ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲೆನಾಡು ಭಾಗದಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದ್ದು, ಬೆಳೆ ಹಾನಿ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಈಗಾಗಲೇ ಆದೇಶಿಸಲಾಗಿದೆ. ಸಮಗ್ರ ವರದಿ ಬಂದ ನಂತರ ರೈತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. 

ರೈತಪರ ಚಿಂತನೆಯುಳ್ಳ ಸರಕಾರ ಈಗಾಗಲೇ ರೈತರ 44 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದೆ. ಇದುವರೆಗೂ ಯಾವ ಸರಕಾರ ಮಾಡಿರದ ಉತ್ತಮ ನಿರ್ಧಾರ ಇದಾಗಿದೆ. ವಾಣಿಜ್ಯ ಬ್ಯಾಂಕ್‌ ಮತ್ತು ಸಹಕಾರ ಸಂಸ್ಥೆಗಳ ಸಾಲ ಮನ್ನಾ ಮಾಡಲಾಗುತ್ತದೆ. ಫಸಲ್‌ ಬಿಮಾ ಕಂತು ರೈತರು ತುಂಬಬೇಕಿದ್ದು, ವಿಮೆ ಹಣ ತುಂಬದೆ ಪರಿಹಾರ ನಿರೀಕ್ಷಿಸಲಾಗದು ಎಂದರು.
 
ರಾಷ್ಟ್ರೀಯ ಹೆದ್ದಾರಿ 169ರ ತನಿಕೋಡು ಗೇಟ್‌ ನಿಂದ ಮುಂದಿನ ರಸ್ತೆ ಅಗಲೀಕರಣ ಮಾಡುವ ಕುರಿತು ಪ್ರತಿಕ್ರಿಯಿಸಿದ ಸಚಿವರು, ರಸ್ತೆ ಅಗಲೀಕರಣದ ಸಂದರ್ಭದಲ್ಲಿ ಅನಿವಾರ್ಯವಾಗಿ ಮರಗಳನ್ನು ಕಡಿತಲೆ ಮಾಡಬೇಕಾಗುತ್ತದೆ. ವನ್ಯಜೀವಿ ಹಾಗೂ ಅರಣ್ಯ ಇಲಾಖೆ ಮರ ಕಡಿತಲೆ ಮಾಡುವುದಕ್ಕೆ ವಿರೋಧವಿರುತ್ತದೆ.ಆದರೆ ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡ ಸಭೆಯಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಕೆ.ಶ್ರೀರಂಗಯ್ಯ ಮಾತನಾಡಿ, ಅತಿವೃಷ್ಟಿಯಿಂದ ಬೆಳೆ ನಷ್ಟ ಬಗ್ಗೆ ಪ್ರಾಥಮಿಕ ವರದಿ ಪಡೆದಿದ್ದರೂ, ಮಳೆ ನಿಲ್ಲುವವರೆಗೆ ಸಮೀಕ್ಷಾ ಕಾರ್ಯ ನಡೆಸಲಾಗದು. ಮಳೆ ಕಡಿಮೆಯಾದ ತಕ್ಷಣವೇ ಅಧಿಕಾರಿಗಳಿಂದ ಸಮೀಕ್ಷೆ ನಡೆಸಿ ಸರಕಾರಕ್ಕೆ ವರದಿ
ಸಲ್ಲಿಸಲಾಗುವುದು ಎಂದು ತಿಳಿಸಿದರು. 

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ತಾಲೂಕಿನಲ್ಲಿ ಉಂಟಾಗಿರುವ ಬೆಳೆ ನಷ್ಟ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಖುದ್ದು ವೀಕ್ಷಿಸಲು ಇಲ್ಲಿಗೆ ಆಗಮಿಸಿದ್ದಾರೆ. ಮನೆ, ಕೊಟ್ಟಿಗೆ ಹಾನಿಗೊಳಗಾದ ಮತ್ತು ಪ್ರವಾಹದಲ್ಲಿ ಮೃತರಾದವರಿಗೆ ಸರಕಾರದಿಂದ ಈಗಾಗಲೇ ಪರಿಹಾರ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ವೇಳೆ ಜಿಪಂ ಸಿಇಒ ಸತ್ಯಭಾಮ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ| ವಿಜಯಕುಮಾರ್‌, ನಟರಾಜ್‌, ತಾಪಂ ಸದಸ್ಯ ಕೆ.ಆರ್‌.ವೆಂಕಟೇಶ್‌, ಲಕ್ಷೀಶ, ರೈತ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಇದ್ದರು.  


Trending videos

Back to Top