CONNECT WITH US  

ಕಾಫಿನಾಡಲ್ಲಿ ಅಜಾತಶತ್ರು ನೆನಪಿನ ಘಮಲು

ಚಿಕ್ಕಮಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನದಲ್ಲಿ ಎರಡು ಬಾರಿ ಚಿಕ್ಕಮಗಳೂರಿಗೆ ಆಗಮಿಸಿದ್ದರು. ವಾಜಪೇಯಿ 1977ರಲ್ಲಿ ತುರ್ತು ಸ್ಥಿತಿ ನಂತರ ಇಂದಿರಾ ಕಾಂಗ್ರೆಸ್ಸೇತರ ಪಕ್ಷಗಳು ಒಟ್ಟಾಗಿ ಜನತಾ ಪಕ್ಷ ಎಂದು ನಾಮಕರಣಗೊಂಡು ಚುನಾವಣೆಗೆ ಇಳಿದಾಗ ಚಿಕ್ಕಮಗಳೂರಿಗೆ 1977ರಲ್ಲಿ ಆಗಮಿಸಿದ್ದ ವಾಜಪೇಯಿ ಆಗಿನ ಸರ್ವಪಕ್ಷಗಳ ಅಭ್ಯರ್ಥಿಯಾಗಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿದಿದ್ದ ಬಿ.ಎಲ್‌. ಸುಬ್ಬಮ್ಮ ಅವರ ಪರ ಜಿಲ್ಲಾ ಆಟದ ಮೈದಾನದಲ್ಲಿ ಚುನಾವಣಾ ಭಾಷಣ ಮಾಡಿದ್ದರು.

ಇಲ್ಲಿಂದ ಆಲ್ದೂರಿನಲ್ಲಿ ಸ್ವಲ್ಪ ಕಾಲ ತಂಗಿದ್ದು, ನಂತರ ಮೂಡಿಗೆರೆಗೆ ಹೋಗಿ ಅಲ್ಲಿ ಪಕ್ಷದ ಅಭ್ಯರ್ಥಿ ಸಗನಯ್ಯ ಅವರ ಪರ ಪ್ರಚಾರ ಭಾಷಣ ಮಾಡುತ್ತಾ "ಸಗುಣ ಎಂದರೆ ಅತ್ಯಂತ ಒಳ್ಳೆಯ ಗುಣ. ಹಾಗಾಗಿ ಸಗುನಯ್ಯ ಎಂದು ಹೆಸರಿಟ್ಟಿಕೊಂಡಿರುವ ನಮ್ಮ ಅಭ್ಯರ್ಥಿ ಅತ್ಯಂತ ಉತ್ತಮರು. ಹಾಗಾಗಿ ಅವರಿಗೆ ನಿಮ್ಮ ಮತ ನೀಡಿ' ಎಂದು ಹೇಳಿದ್ದರು.

ವಾಜಪೇಯಿ ಅವರಿಗೆ ಸದಾ ಕಾರ್ಯಕರ್ತರ ಜೊತೆ ಇರುವುದೆಂದರೆ ಸಂತೋಷ. ಆಲ್ದೂರಿನಲ್ಲಿ ಒಮ್ಮೆ ಊಟಕ್ಕೆ ಪಕ್ಷದ ಮುಖಂಡರೋರ್ವರ ಮನೆಯಲ್ಲಿ ವ್ಯವಸ್ಥೆ ಮಾಡಿದಾಗ ಅವರಿಗೆ ಸಿಟ್ಟು ಬಂತು. ತಕ್ಷಣ ಪಕ್ಷದ ರಾಜ್ಯ ಮುಖಂಡರೊಬ್ಬರನ್ನು ಕರೆದು "ನಿನ್ನ ತಲೆಯಲ್ಲಿ ಸಗಣಿ ಇದೆಯಾ, ನಾನು ಬಂದಿರುವುದು ಪಕ್ಷದ ಕಾರ್ಯಕರ್ತರೊಡನೆ ಬೆರೆಯಲು. ಅವರ ಜೊತೆಯೇ ಊಟದ ವ್ಯವಸ್ಥೆ ಮಾಡಬೇಕಿತ್ತು' ಎಂದು ಗದರಿಸಿದ್ದರು.

ಅನಂತರ 1991ರಲ್ಲಿ ಜನತಾ ಪಕ್ಷದಿಂದ ಹೊರಬಂದು ಭಾರತೀಯ ಜನತಾ ಪಕ್ಷವಾದ ನಂತರ ಅದರ ಅಧ್ಯಕ್ಷರಾಗಿ
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ವಾಜಪೇಯಿ ಅವರಿಗೆ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲೆಯಿಂದ 1 ಲಕ್ಷ ರೂ. ಹಮ್ಮಿಣಿ ನೀಡಲಾಯಿತು. ಅದರಲ್ಲಿ 30 ಸಾವಿರ ರೂ. ಮಾತ್ರ ಪಕ್ಷದ ಕೇಂದ್ರ ಕಚೇರಿ ಖಾತೆಗೆ ತೆಗೆದುಕೊಂಡು ಉಳಿದ 70 ಸಾವಿರವನ್ನು ಜಿಲ್ಲಾ ಘಟಕಕ್ಕೆ ನೀಡಿದ್ದರು. ಕನ್ನಡದಲ್ಲಿ ಮಾತನ್ನು ಆರಂಭಿಸಿ ನಮಸ್ಕಾರ ಹೇಳಿದ ವಾಜಪೇಯಿ, "ದೇಶ ಪರಿವರ್ತನೆಯ ಬಾಗಿಲಲ್ಲಿ ನಿಂತಿದೆ.

ಪರಿವರ್ತನೆ ಆಗುವಾಗಲೆಲ್ಲಾ ನಾನು ಚಿಕ್ಕಮಗಳೂರಿಗೆ ಬರುತ್ತೇನೆ' ಎಂದು ತಿಳಿಸಿ, ತಾವು 12 ವರ್ಷದ ಹಿಂದೆ ಈ ಊರಿಗೆ ಬಂದಿದ್ದನ್ನು ನೆನಪಿಸಿಕೊಂಡರು. ಮತ್ತೆ ಏಪ್ರಿಲ್‌ 14, 1991ರಂದು ಶೃಂಗೇರಿಗೆ ಭೇಟಿ ನೀಡಿದ ವಾಜಪೇಯಿ ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಅವರ ದರ್ಶನ ಮಾಡಿ "ನಾನು ರಾಜಕೀಯವಾಗಿ ಕೇಳಲು ಬಂದಿಲ್ಲ, ದೇಶ ಸಂಕಷ್ಟದ ಸ್ಥಿತಿಯಲ್ಲಿದೆ. ಒಳ್ಳೆಯ ಸ್ಥಿತಿಗಾಗಿ ಹರಸಿ' ಎಂದು ಮನವಿ ಮಾಡಿದಾಗ ಶ್ರೀಗಳು "ನನ್ನ ಮನಸ್ಸು ಹಾಗೂ ಹೃದಯಪೂರ್ವಕವಾಗಿ ಉತ್ತಮ ಸ್ಥಿತಿ ಬರಲೆಂದು ಆಶೀರ್ವದಿಸಿದ್ದೇನೆ' ಎಂದರು. ಆಗಲೆ ಲೋಕಸಭಾ ಅಭ್ಯರ್ಥಿಯಾಗಿ ಡಿ.ಸಿ. ಶ್ರೀಕಂಠಪ್ಪ ಅವರನ್ನು ಪಕ್ಷದ ಅಧ್ಯಕ್ಷ ಯಡಿಯೂರಪ್ಪ ಘೋಷಿಸಿದರು.

ವಾಜಪೇಯಿ ಜನಿಸಿದ್ದು 1924ರಲ್ಲಿ ಗ್ವಾಲಿಯರ್‌ನಲ್ಲಿ. ಅಟಲ್‌ ಎಂದರೆ ಗಟ್ಟಿಗ ಎಂದು, ಬಿಹಾರಿ ಎಂದರೆ ವಿಚಾರ ಮಾಡುವಾತ ಎಂದು. ಹೆಸರಿಗೆ ಅನ್ವರ್ಥವಾಗಿ ವಾಜಪೇಯಿ ಗಟ್ಟಿ ಮನಸ್ಸಿನ ವಿಚಾರವಂತ ರಾಜಕಾರಣಿಯಾಗೆ ಬೆಳೆದು ಮುತ್ಸದ್ಧಿ ಎನಿಸಿಕೊಂಡವರು. ಗ್ವಾಲಿಯರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ ಪದವೀಧರರಾಗಿ ಹೊರಬಂದು ನಂತರ ಕಾನ್‌ಪುರದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. 1942ರ ಭಾರತ ಬಿಟ್ಟು ತೊಲಗಿ ಚಳವಳಿಯಲ್ಲಿ ಭಾಗವಹಿಸಿ ಬಂಧನಕ್ಕೊಳಗಾಗಿದ್ದರು. ಅವರ ರಾಜಕೀಯ ಕ್ಷೇತ್ರದ ಪ್ರವೇಶ 1951ರಲ್ಲಿ ಜನಸಂಘದ ಮೂಲಕ ಆಯಿತು. ಅದರ ಸ್ಥಾಪಕ ಸದಸ್ಯರಾಗಿ ಸಂಸ್ಥಾಪಕ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರೊಂದಿಗೆ ಪಕ್ಷದ ಬೆಳವಣಿಗೆಗೆ ಕೆಲಸ ಮಾಡಿ ಅವರ ನಂತರ ಪಕ್ಷವನ್ನು ಮುನ್ನಡೆಸಿದವರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ವಾಜಪೇಯಿ, 1957ರಲ್ಲಿ ಮೊದಲ ಬಾರಿಗೆ ಉದಂಪುರದಿಂದ ಲೋಕಸಭಾ ಸದಸ್ಯರಾದರು. ಆನಂತರ 1962, 67, 84, 91, 94, 96, 98ರವರೆಗೂ ಅವರು ಲೋಕಸಭೆಗೆ ವಿವಿಧ ಕ್ಷೇತ್ರಗಳಿಂದ ಆಯ್ಕೆಯಾದರು. 1962, 67, 86, 91ರವರೆಗೆ ರಾಜ್ಯಸಭಾ ಸದಸ್ಯರೂ ಆಗಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ ತುರ್ತು ಸ್ಥಿತಿ ಘೋಷಿಸಿದಾಗ 1975ರಲ್ಲಿ ಅವರನ್ನು ಬಂಧಿಸಿ ಸೆರೆಮನೆಗೆ ತಳ್ಳಲಾಯಿತು. ಆನಂತರ 1977ರಲ್ಲಿ ಜನತಾಪಕ್ಷ ಅಧಿಕಾರಕ್ಕೆ ಬಂದಾಗ 1980ರವರೆಗೂ ವಿದೇಶಾಂಗ ಸಚಿವರಾಗಿದ್ದರಲ್ಲದೆ, ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿ ಉತ್ತಮ ಸಂಸದೀಯ ಪಟು ಎಂಬ ಹೆಸರು ಗಳಿಸಿದ್ದರು.

ವಾಜಪೇಯಿ ಪತ್ರಕರ್ತರಾಗೂ ಕಾರ್ಯನಿರ್ವಹಿಸಿದ್ದಾರೆ. ರಾಷ್ಟ್ರಧರ್ಮ, ಸ್ವದೇಶ, ಚೇತನ್‌, ಕ್ರೆಸಿಸ್‌, ಪಾಂಚಜನ್ಯ, ವೀರಅರ್ಜುನ ಮುಂತಾದ ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದವರು. ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದ ಭಾರತದ ಮೊದಲ ರಾಜಕಾರಣಿ. ಅಂದಿನ ಪ್ರಧಾನಿ ಪಂಡಿತ ಜವಾಹರ್‌ಲಾಲ್‌ ಅವರಿಂದ ಸಂಸತ್ತಿನಲ್ಲಿ ಅವರ ಮಾತುಗಾರಿಕೆಯಿಂದ ಬೆನ್ನು ತಟ್ಟಿಸಿಕೊಂಡವರು ವಾಜಪೇಯಿ.

1996, ಮೇ 16ರಂದು ಮೊದಲ ಪ್ರಧಾನಿಯಾಗಿ 13 ದಿನಗಳ ಕಾಲ ಅಧಿಕಾರದಲ್ಲಿದ್ದು, ಬಹುಮತ ಸಿಗದೆ ಅವಿಶ್ವಾಸಮತವನ್ನು ಕೋರುವ ದಿನ ಅವರು ಮಾಡಿದ ಭಾಷಣ, ಇಂದೂ ಸಹ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಉತ್ತಮ ಭಾಷಣಗಳಲ್ಲೊಂದು ಎಂದು ಪರಿಗಣಿತವಾಗಿದೆ. ರಾಜೀನಾಮೆ ನೀಡಲು ರಾಷ್ಟ್ರಪತಿ ಭವನಕ್ಕೆ ತೆರಳುವ ಮುನ್ನ ಅವರು ಶ್ರೀರಾಮ ಹೇಳಿದ ವಾಕ್ಯ, "ನ ಭೀತೊ ಮರಣಾದಸ್ಮಿ ಕೇವಲ್‌ ಧೂಷಿತೋಯಶಃ' ಅಂದರೆ ನಾನು ಸಾವಿಗೆ ಹೆದರುವುದಿಲ್ಲ. ಹೆದರುವುದು ಅವಮಾನಕ್ಕೆ ಮಾತ್ರ ಎಂದು. 


Trending videos

Back to Top