CONNECT WITH US  

ಅವೈಜ್ಞಾನಿಕ ಆಚರಣೆಯಿಂದ ಜನರಿಗೆ ವಂಚನೆ

ದಾವಣಗೆರೆ: ಧಾರ್ಮಿಕ ಶ್ರದ್ಧೆ, ನಂಬಿಕೆ ಮತ್ತು ಆಚರಣೆಗಳು ಮೌಡ್ಯವಾಗದೆ ಬದುಕಿನಲ್ಲಿ ನೆಮ್ಮದಿ ಮೂಡಿಸಲು ಸಹಕಾರಿಯಾಗಬೇಕು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಚಾರ್ಯ ಡಾ| ಮಲ್ಲಿಕಾರ್ಜುನ ಕಲಮರಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಮಾನವ ಬಂಧುತ್ವ ವೇದಿಕೆಯಿಂದ ಬುಧವಾರ ಶ್ರೀಮತಿ ಗೌರಮ್ಮ ಡಿ.ಎಂ. ಹನಗೋಡಿಮಠ ಶಾಲೆಯಲ್ಲಿ ಏರ್ಪಡಿಸಿದ್ದ ಬಸವ ಪಂಚಮಿ- ವೈಚಾರಿಕ ಹಬ್ಬದಲ್ಲಿ ಮಾತನಾಡಿದ ಅವರು, ಇಂದಿನ ಆಧುನಿಕ ಕಾಲಘಟ್ಟದಲ್ಲೂ ಅವೈಜ್ಞಾನಿಕ ಆಚರಣೆಗಳ ಮೂಲಕ ಜನರನ್ನು ವಂಚಿಸಲಾಗುತ್ತಿದೆ ಎಂದು ವಿಷಾದಿಸಿದರು.

ಜನಸಾಮಾನ್ಯರ ಮುಗ್ಧತೆಯನ್ನೇ ಬಂಡವಾಳವಾಗಿ ಮಾಡಿಕೊಳ್ಳುವ ಸ್ಥಾಪಿತ ಹಿತಾಸಕ್ತಿಗಳು ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಯ ಹೆಸರಲ್ಲಿ ಜೀವವಿರೋಧಿ ಆಚರಣೆ ಹೇರುತ್ತಿರುವುದು ಮಾತ್ರವಲ್ಲ ಹಣದ ಸುಲಿಗೆಯನ್ನೂ ಮಾಡುತ್ತಿವೆ. ಮಾನವ ಬಂಧುತ್ವ ವೇದಿಕೆ ಮೌಡ್ಯದ ವಿರುದ್ಧ ವೈಚಾರಿಕ ಚಿಂತನೆ ಬಿತ್ತುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರ  ಎಂದು ಹೇಳಿದರು.

ಮಾನವ ಬಂಧುತ್ವ ವೇದಿಕೆ ವಿಭಾಗೀಯ ಸಂಚಾಲಕ ರಾಘು ದೊಡ್ಮನಿ ಮಾತನಾಡಿ, ನಾಗರಪಂಚಮಿ ಹೆಸರಲ್ಲಿ ಲಕ್ಷಾಂತರ ಲೀಟರ್‌ ಹಾಲನ್ನು ಕಲ್ಲುನಾಗರಕ್ಕೆ ಎರೆಯಲಾಗುತ್ತದೆ. ಅತ್ಯಂತ ಉತ್ಕೃಷ್ಠ ಪೌಷ್ಠಿಕಾಂಶ
ಹೊಂದಿರುವ ಹಾಲನ್ನು ಧಾರ್ಮಿಕ ಆಚರಣೆಯ ನೆಪದಲ್ಲಿ ಪೋಲು ಮಾಡುವುದು ಸರಿಯಲ್ಲ. ಜನರು ಅರ್ಥ
ಮಾಡಿಕೊಂಡು ವೈಚಾರಿಕ ಆಚರಣೆಗೆ ಮುಂದಾಗಬೇಕು ಎಂದರು.

ಹಿರಿಯ ಕಾರ್ಮಿಕ ಮುಖಂಡ ಎಚ್‌. ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಡಾಳ್‌ ಶಿವಕುಮಾರ್‌, ಪ್ರೊ. ಭೀಮಪ್ಪ ಸುಣಗಾರ್‌, ಎಚ್‌. ಮಲ್ಲೇಶ್‌ ಕುಕ್ಕುವಾಡ, ಕುಂದುವಾಡ ಮಂಜುನಾಥ್‌, ಮುರುಗೇಶ್‌, ಬುಳಸಾಗರದ ಹನುಮಂತಪ್ಪ, ಶಶಿಕುಮಾರ್‌, ಪ್ರಕಾಶ್‌, ಶಿವರಾಜ್‌, ಪತ್ರಕರ್ತರಾದ ಬಸವರಾಜ್‌ ದೊಡ್ಮನಿ, ಬಿ.ಬಿ. ಮಲ್ಲೇಶ್‌
ಇತರರು ಇದ್ದರು.

Trending videos

Back to Top