CONNECT WITH US  

ಎರಡು ತಿಂಗಳೊಳಗೆ ಪೀಠಕ್ಕೆ ನ್ಯಾಯಮೂರ್ತಿಗಳ ನೇಮಕ

ಕಲಬುರಗಿ: ಇಲ್ಲಿನ ಕರ್ನಾಟಕ ಹೈಕೋರ್ಟ್‌ ಪೀಠಕ್ಕೆ ನ್ಯಾಯಮೂರ್ತಿಗಳ ನೇಮಕ ಬೇಡಿಕೆ ಈಡೇರಿಕೆ ಕಾಲ ಸನ್ನಿಹಿತವಾಗುತ್ತಿದ್ದು, ಮುಂದಿನ ಎರಡು ತಿಂಗಳುಗಳಲ್ಲಿ ಈ ಪೀಠಕ್ಕೆ ನಾಲ್ವರು ನ್ಯಾಯಮೂರ್ತಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಪ್ರಕಟಿಸಿದರು.

ಶನಿವಾರ ಇಲ್ಲಿನ ಕರ್ನಾಟಕ ಹೈಕೋರ್ಟ್‌ ಪೀಠದ ದಶಮಾನೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಿಂದೆ ಮೊದಲ ಬಾರಿ ಭೇಟಿ ನೀಡಿದಾಗ ಪ್ರಕರಣಗಳ ತ್ವರಿತ ವಿಲೇವಾರಿಗೆ ಹೆಚ್ಚಿನ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಬೇಡಿಕೆ ಇಡಲಾಗಿತ್ತು. 

ಅದೀಗ ಕಾರ್ಯರೂಪಕ್ಕೆ ಬರಲಿದೆ. ಕಲಬುರಗಿ ವಿಭಾಗದಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಯಾಗಿದ್ದರಿಂದ
ಈ ಭಾಗದ ಜನ ನ್ಯಾಯಕ್ಕಾಗಿ ಬೆಂಗಳೂರಿಗೆ ಅಲೆಯುವುದು ತಪ್ಪಿದೆ. ನ್ಯಾಯಾಂಗ ವ್ಯವಸ್ಥೆಯನ್ನು ಸಾರ್ವಜನಿಕರ
ಮನೆ ಬಾಗಿಲಿಗೆ ತಲುಪಿಸಲಾಗಿದೆ.

ಹೈಕೋರ್ಟ್‌ ಪೀಠ ಸ್ಥಾಪನೆಯಾಗಿದ್ದರಿಂದ ಈ ಭಾಗಕ್ಕೆ ಹೆಚ್ಚಿನ ಮಹತ್ವ ದೊರೆತಿದ್ದು, ಹೆಚ್ಚು ಅಭಿವೃದ್ಧಿಯಾಗುತ್ತಿದೆ. ನ್ಯಾಯಾಲಯಗಳು ಜನರಿಗಾಗಿ ಇದ್ದು, ಜನರು ನ್ಯಾಯಾಲಯಕ್ಕಾಗಿ ಅಲ್ಲ ಎನ್ನುವ ಅಂಶ ತಿಳಿದು ಸಾರ್ವಜನಿಕರು ನ್ಯಾಯಾಲಯಗಳಿಗೆ ಆಗಮಿಸಿದಾಗ ತ್ವರಿತವಾಗಿ ನ್ಯಾಯ ದೊರಕಿಸಿಕೊಡಬೇಕು ಎಂದರು.
 
ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್‌.ಕೆ. ಹಿರೇಮಠ ಸ್ವಾಗತಿಸಿ ಮಾತನಾಡಿ, 2008ರಲ್ಲಿ ಕಲಬುರಗಿ ಹೈಕೋರ್ಟ್‌ ಸಂಚಾರಿ ಪೀಠ ಪ್ರಾರಂಭವಾಯಿತು. ನಂತರ 2013ರಲ್ಲಿ ಕಾಯಂ ಪೀಠವಾಗಿ ಪರಿವರ್ತನೆಗೊಂಡಿತು.

ಕಲಬುರಗಿಯಲ್ಲಿ ಪೀಠ ಸ್ಥಾಪನೆಯಾದಾಗ ಹೈಕೋರ್ಟ್‌ ಪೀಠದ ವ್ಯಾಪ್ತಿಯ 9810 ಪ್ರಕರಣಗಳು ಬಾಕಿ ಇದ್ದವು. ಸದ್ಯ 32397 ಪ್ರಕರಣಗಳು ಬಾಕಿ ಇವೆ. 10 ವರ್ಷಗಳಲ್ಲಿ 1.50 ಲಕ್ಷ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಹೊಸದಾಗಿ 1.37 ಲಕ್ಷ ಪ್ರಕರಣಗಳು ದಾಖಲಾಗಿವೆ ಎಂದರು.

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದಿನೇಶ ಮಹೇಶ್ವರಿ ಅವರ ತಾಯಿ ರುಕ್ಮಿಣಿದೇವಿ ಮಹೇಶ್ವರಿ,
ಕರ್ನಾಟಕ ಹೈಕೋರ್ಟ್‌ ಕಲಬುರಗಿ ಪೀಠದ ನ್ಯಾಯಮೂರ್ತಿಗಳಾದ ಎಸ್‌. ಸುಜಾತಾ, ಎನ್‌.ಕೆ. ಸು ಧೀಂದ್ರರಾವ, ಮಹ್ಮದ್‌ ನವಾಜ್‌, ರವಿ ಮಳಿಮಠ, ರಾಜ್ಯ ಬಾರ್‌ ಕೌನ್ಸಿಲ್‌ ಸದಸ್ಯರಾದ ಕಾಶಿನಾಥ ಮೊತಕಪಲ್ಲಿ, ಎಸ್‌.ಎಸ್‌.ಮಿಥಲ್ಕೋಡ, ಕೆ.ಕೆ. ಕೋಟೇಶ್ವರ, ಆಸೀಫ್‌ ಅಲಿ, ಮೇಯರ್‌ ಶರಣಕುಮಾರ ಮೋದಿ, ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಹಿರಿಯ ನ್ಯಾಯವಾದಿಗಳಾದ ರಾಘವೇಂದ್ರ ನಾಡಗೌಡ, ಎಸ್‌.ಎಸ್‌. ಕುಮ್ಮಣ್ಣ,
ಉಸ್ತಾದ್‌ ಸಾದತ್‌ ಹುಸೇನ್‌, ಎಸ್‌ಪಿ ಎನ್‌. ಶಶಿಕುಮಾರ, ನ್ಯಾಯವಾದಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್‌. ಪಾಟೀಲ, ಉಪಾಧ್ಯಕ್ಷ ಸತೀಶ ಪಾಟೀಲ, ಹೈಕೋರ್ಟ್‌ ಘಟಕದ ಉಪಾಧ್ಯಕ್ಷ ಎಸ್‌.ಜಿ. ಮಠ, ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ಯಾದವ್‌ ಹಾಗೂ ನ್ಯಾಯವಾದಿಗಳ ಸಂಘದ ಇತರ ಪದಾಧಿಕಾರಿಗಳು, ಸದಸ್ಯರು, ಹಿರಿಯ
ನ್ಯಾಯವಾದಿಗಳು ಹಾಜರಿದ್ದರು. ಹಿರಿಯ ನ್ಯಾಯವಾದಿ ಅನುರಾಧಾ ದೇಸಾಯಿ ಹಾಗೂ ನಮೃತಾ ಪಾಟೀಲ ನಿರೂಪಿಸಿದರು. 


Trending videos

Back to Top