CONNECT WITH US  

ಜರ್ಮನಿ ಜಬರ್ದಸ್ತ್ ಪ್ರದರ್ಶನ

ನೆದರ್‌ಲ್ಯಾಂಡ್‌ ವಿರುದ್ಧ 4-1 ಜಯ *ಪಾಕಿಸ್ಥಾನ-ಮಲೇಶ್ಯ ಡ್ರಾ

ಭುವನೇಶ್ವರ: ಎರಡು ಬಾರಿಯ ಚಾಂಪಿಯನ್‌ ಜರ್ಮನಿ ಜಬರ್ದಸ್ತ್ ಪ್ರದರ್ಶನವೊಂದನ್ನು ನೀಡಿ ಬುಧವಾರದ ವಿಶ್ವಕಪ್‌ ಹಾಕಿ ಲೀಗ್‌ ಪಂದ್ಯದಲ್ಲಿ ನೆದರ್‌ಲ್ಯಾಂಡ್‌ ತಂಡವನ್ನು 4-1 ಗೋಲುಗಳಿಂದ ಮಣಿಸಿದೆ. ಇದರೊಂದಿಗೆ "ಡಿ' ವಿಭಾಗದಿಂದ ಜರ್ಮನಿ ನೇರವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸುವ ಅವಕಾಶವೊಂದು ತೆರೆದುಕೊಂಡಿದೆ. 
ಇದು ಜರ್ಮನಿ ಸಾಧಿಸಿದ ಸತತ 2ನೇ ಗೆಲುವು. ಮೊದಲ ಪಂದ್ಯದಲ್ಲಿ ಅದು ಪಾಕಿಸ್ಥಾನವನ್ನು 1-0 ಅಂತರದಿಂದ ಪರಾಭವಗೊಳಿಸಿತ್ತು.

ಪಂದ್ಯದ ಮೊದಲ ಗೋಲನ್ನು ಬಾರಿಸಿದ ನೆದರ್‌ಲ್ಯಾಂಡ್‌ ಭರ್ಜರಿ ಆರಂಭವನ್ನೇನೋ ಪಡೆಯಿತು. ಆದರೆ ಪಂದ್ಯ ಮುಂದುವರಿದಂತೆಲ್ಲ ಜರ್ಮನಿ ಹಿಡಿತವನ್ನು ಬಿಗಿಗೊಳಿಸುತ್ತ ಸಾಗಿತು. 13ನೇ ನಿಮಿಷದಲ್ಲಿ ವೆಲಂಟೀನ್‌ ವೆರ್ಗ ನೆದರ್‌ಲ್ಯಾಂಡ್‌ ಖಾತೆ ತೆರೆದಿದ್ದರು. ಮೊದಲ ಪಂದ್ಯದಲ್ಲಿ ಡಚ್‌ ಪಡೆ 7-0 ಗೋಲುಗಳಿಂದ ಮಲೇಶ್ಯವನ್ನು ಮಣಿಸಿತ್ತು.

ಜರ್ಮನಿ ಪಂದ್ಯವನ್ನು ಸಮಬಲಕ್ಕೆ ತರಲು 30ನೇ ನಿಮಿಷದ ತನಕ ಕಾಯಬೇಕಾಯಿತು. ಮಥಿಯಾಸ್‌ ಮುಲ್ಲರ್‌ ಈ ಗೋಲು ಬಾರಿಸಿದರು. ಬಳಿಕ ಲುಕಾಸ್‌ ವಿಂಡ್‌ಫೆಡರ್‌ (52ನೇ ನಿಮಿಷ), ಮಾರ್ಕೊ ಮಿಲ್ಟವ್‌(54ನೇ ನಿಮಿಷ) ಮತ್ತು ಕ್ರಿಸ್ಟೋಫ‌ರ್‌ ರುಹ್‌ (58ನೇ ನಿಮಿಷ) ಅಂತರವನ್ನು ಹೆಚ್ಚಿಸಿದರು.

ಪಾಕಿಗೆ ಒಲಿಯದ ಜಯ
ಮಲೇಶ್ಯ ವಿರುದ್ಧ ಕೂಟದ ದ್ವಿತೀಯ ಪಂದ್ಯವಾಡಿದ ಪಾಕಿಸ್ಥಾನ ಗೆಲುವಿನ ಖಾತೆ ತೆರೆಯುವಲ್ಲಿ ವಿಫ‌ಲವಾಯಿತು. ಜಿದ್ದಾಜಿದ್ದಿ ಸೆಣಸಾಟ ಕಂಡ ಈ ಮುಖಾಮುಖೀ 1-1 ಅಂತರದಿಂದ ಡ್ರಾಗೊಂಡಿತು. ಎರಡೂ ಗೋಲುಗಳು ಪಂದ್ಯದ ಕೊನೆಯ ಹಂತದಲ್ಲಿ ದಾಖಲಾದವು. 51ನೇ ನಿಮಿಷದಲ್ಲಿ ಪಾಕ್‌ನ ಮೊಹಮ್ಮದ್‌ ಅತಿಕ್‌ ಗೋಲು ಬಾರಿಸಿದರೆ, ನಾಲ್ಕೇ ನಿಮಿಷದಲ್ಲಿ ಮಲೇಶ್ಯದ ಫೈಜಲ್‌ ಸಾರಿ ಪಂದ್ಯವನ್ನು ಸಮಬಲಕ್ಕೆ ತಂದರು.

Trending videos

Back to Top