CONNECT WITH US  

ಬಿಝಿ ನಟಿ ಆಶಿಕಾ!

ಮಹೇಶ್‌ ಬಾಬು ನಿರ್ದೇಶನದ "ಕ್ರೇಜಿಬಾಯ್‌' ಚಿತ್ರದ ಆಶಿಕಾ ರಂಗನಾಥ್‌ ಎಂಬ ತುಮಕೂರು ಹುಡುಗಿ ಎಂಟ್ರಿಕೊಟ್ಟಾಗ ಈ ಹುಡುಗಿಗೆ ಇಷ್ಟೊಂದು ಅವಕಾಶ ಸಿಗುತ್ತದೆಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ, ಆಶಿಕಾ ಮಾತ್ರ ಚಿತ್ರರಂಗದಲ್ಲಿ ಬಿಝಿಯಾಗುತ್ತಿದ್ದಾರೆ. "ರಾಜು ಕನ್ನಡ ಮೀಡಿಯಂ', "ಮಾಸ್‌ ಲೀಡರ್‌', "ಮುಗುಳು ನಗೆ', ಶರಣ್‌ ನಾಯಕರಾಗಿರುವ ಸಿನಿಮಾ ಸೇರಿದಂತೆ ಆಶಿಕಾ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಚಿತ್ರರಂಗಕ್ಕೆ ಬಂದ ಒಂದು ವರ್ಷದೊಳಗೆ ಬಿಝಿ ನಟಿ ಎನಿಸಿಕೊಂಡಿರುವ ಆಶಿಕಾ ಇಲ್ಲಿ ಮಾತನಾಡಿದ್ದಾರೆ ... 

1. ತುಂಬಾ ಬಿಝಿಯಾಗಿಬಿಟ್ರಲ್ಲಾ?
ಹೌದು, ಶೂಟಿಂಗ್‌, ಪ್ರಮೋಶನ್‌ ಅಂತ ಸ್ವಲ್ಪ ಬಿಝಿ. ಇದು ನನ್ನ ಜೀವನದಲ್ಲಿ ತುಂಬಾ ಹೊಸದು. ಹೋದಲ್ಲೆಲ್ಲಾ ಈಗ ಜನ ಗುರುತಿಸುತ್ತಾರೆ, ಫೋಟೋ ತೆಗೆಸಿಕೊಳ್ಳುತ್ತಾರೆ, ನಿಮ್ಮ ಸಂದರ್ಶನ ನೋಡಿದೆ ಎನ್ನುತ್ತಾರೆ. ಇವೆಲ್ಲ ನನಗೆ ತುಂಬಾ ಹೊಸದಾಗಿರುವುದರಿಂದ ತುಂಬಾ ಎಕ್ಸೆ„ಟ್‌ ಆಗಿದ್ದೀನಿ. ಅವೆಲ್ಲವನ್ನು ಖುಷಿಯಿಂದ ಅನುಭವಿಸುತ್ತಿದ್ದೇನೆ. 

2. ಸಿನಿಮಾಕ್ಕೆ ಬರುವಾಗ ಏನೆಲ್ಲಾ ಕನಸು ಕಂಡಿದ್ರಿ?
ನಿಜ ಹೇಳಬೇಕೆಂದರೆ ನಾನು ಏನೂ ಕನಸು ಕಂಡಿಲ್ಲ. ಬ್ಲ್ಯಾಂಕ್‌ ಮೈಂಡ್‌ನಿಂದಲೇ ಚಿತ್ರರಂಗಕ್ಕೆ ಬಂದೆ. ಅದಕ್ಕಿಂತ ಹೆಚ್ಚಾಗಿ ನನಗೆ ನಟಿಯಾಗಬೇಕು, ಸಿನಿಮಾದಲ್ಲಿ ಮಿಂಚಬೇಕೆಂಬ ಯಾವ ಕನಸು ಇರಲಿಲ್ಲ. ತುಂಬಾ ಸಿನಿಮಾ ನೋಡುತ್ತಿದ್ದೆ. ಆದರೆ, ನಟಿಯರ ಜಾಗದಲ್ಲಿ ನನ್ನನ್ನು ನಾನು ಯಾವತ್ತೂ ಕಲ್ಪಿಸಿಕೊಂಡಿಲ್ಲ. ಆದರೆ, ಅವಕಾಶ ಬಂತು. ಎಲ್ಲರೂ ಸಿಕ್ಕ ಅವಕಾಶವನ್ನು ಬಿಡಬೇಡ ಅಂದರು. ನಾನು ಕೂಡಾ ಯಾಕೆ ಪ್ರಯತ್ನಿಸಬಾರದು ಎಂದು ಸಿನಿಮಾ ಒಪ್ಪಿಕೊಂಡೆ. ಮೊದಲು ಸಿನಿಮಾ ನೋಡಿದಾಗ "ನಾನು ಹೀಗೆ ನಟಿಸಿದ್ದೇನಾ, ಇನ್ನೂ ಬೇರೆ ತರಹ ನಟಿಸಬಹುದಿತ್ತಲ್ಲಾ' ಎನಿಸಿದ್ದು ಸುಳ್ಳಲ್ಲ.

3. ಮೊದಲ ಚಿತ್ರ "ಕ್ರೇಜಿ ಬಾಯ್‌' ರಿಲೀಸ್‌ ಆಗುವಾಗ ನಿಮ್ಮ ಮನಸ್ಥಿತಿ ಹೇಗಿತ್ತು?
ಒಂದೇ ಸಿನಿಮಾ ಸಾಕು ಎಂಬ ಮನಸ್ಥಿತಿ ನನ್ನದಾಗಿತ್ತು. ಏಕೆಂದರೆ, ಸಿನಿಮಾಕ್ಕೆ ಬಂದರೆ ಪ್ರೈವೇಟ್‌ ಲೈಫ್ ಇರಲ್ಲ, ಚಿಕ್ಕ ಚಿಕ್ಕ ವಿಷಯಗಳು ಸುದ್ದಿಯಾಗುತ್ತವೆ, ಪಾಸಿಟಿವ್‌ ಎಷ್ಟೋ, ಅಷ್ಟೇ ನೆಗೆಟಿವ್‌ ಕೂಡಾ ಇದೆ ಎನಿಸಿ, ಒಂದೇ ಸಿನಿಮಾ ಸಾಕು ಎಂದುಕೊಂಡಿದ್ದೆ. ಆದರೆ, ನಾನು ನಟಿಸಿದ ಪ್ರತಿ ಚಿತ್ರತಂಡದಿಂದಲೂ ನನಗೆ ಸಿಕ್ಕ ಪ್ರೋತ್ಸಾಹದಿಂದ ನನ್ನ ಕೆರಿಯರ್‌ ಮುಂದುವರೆಸಿದೆ. ಅನೇಕರು ಕನ್ನಡದಲ್ಲಿ ಕನ್ನಡ ಹೀರೋಯಿನ್‌ಗಳ ಸಂಖ್ಯೆ ಕಡಿಮೆ ಇದೆ. ನಿನಗೆ ಈಗ ಅವಕಾಶ ಸಿಕ್ಕಿದೆ, ಬಿಟ್ಟು ಹೋಗಬೇಡ, ಮುಂದುವರಿ ಅಂದರು. 

4. ಚಿತ್ರರಂಗದಲ್ಲಿ ಇಷ್ಟೊಂದು ಅವಕಾಶ ಸಿಗಬಹುದೆಂದು ಅಂದುಕೊಂಡಿದ್ರಾ?
ಇಲ್ಲಾ, "ಕ್ರೇಜಿ ಬಾಯ್‌' ಆದ ಮೇಲೆ ಒಂದು ಸಿನಿಮಾ ಸಿಗಬಹುದೇನೋ ಅಂದುಕೊಂಡಿದ್ದೆ. ಆದರೆ, ಈಗ ಒಳ್ಳೆಯ ಅವಕಾಶಗಳು ಸಿಗುತ್ತಿವೆ. ಒಂದೊಂದು ಅವಕಾಶಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ನನ್ನದು. ರಾತ್ರೋರಾತ್ರಿ ಬರುವ ಯಶಸ್ಸು ಶಾಶ್ವತವಲ್ಲ ಎಂದು ನಂಬಿದವಳು ನಾನು. ಹಾಗಾಗಿ, ಒಂದೊಂದು ಮೆಟ್ಟಿಲುಗಳ ಮೂಲಕ ಮೇಲೆರುವುದು ಉತ್ತಮ.

5. ತುಂಬಾ ಬೇಗನೇ ಸ್ಟಾರ್‌ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಹೇಗನಿಸ್ತಾ ಇದೆ?
ಖುಷಿ ಇದೆ. ಜೊತೆಗೆ ಅಚ್ಚರಿಯೂ ಇದೆ. ಶಾಲಾ ದಿನಗಳಲ್ಲಿ ಗಣೇಶ್‌, ಶಿವರಾಜಕುಮಾರ್‌ ಅವರ ಸಿನಿಮಾಗಳನ್ನು ನೋಡಿಕೊಂಡು ಬಂದವಳು ನಾನು. ಆದರೆ, ಈಗ ಅವರ ಜೊತೆಯೇ ನಟಿಸುವ ಅವಕಾಶ ಸಿಕ್ಕಿದೆ. ಮೊದಲು ಹೇಗಪ್ಪಾ, ಇವರ ಜೊತೆ ನಟಿಸೋದು, ತುಂಬಾ ಹೆಸರು ಮಾಡಿದ ನಟರು. ನಾನು ಹೊಸಬಳು ಎಂಬ ಭಾವನೆ ಇತ್ತು. ಆದರೆ ಅವರು ಕೊಟ್ಟ ಪ್ರೋತ್ಸಾಹದಿಂದ ಆರಾಮವಾಗಿ ನಟಿಸಿದೆ. 

6. ಅವಕಾಶ ಸಿಕ್ತಾ ಇದೆ ಅಂತ ಸಿನಿಮಾ ಒಪ್ಕೋತ್ತಾ ಇದ್ದೀರಾ ಅಥವಾ ಪಾತ್ರ ನೋಡ್ತೀರಾ?
ಇಲ್ಲಾ, ಆ ತರಹ ಒಪ್ಪೋದಾಗಿದ್ರೆ "ಕ್ರೇಜಿ ಬಾಯ್‌' ನಂತರ ನನಗೆ ಸಾಕಷ್ಟು ಅವಕಾಶಗಳು ಬಂದುವು. ನಾನು ಪಾತ್ರ ನೋಡುತ್ತೇನೆ. ಪ್ರೇಕ್ಷಕಳಾಗಿ ಒಂದು ಪಾತ್ರವನ್ನು ಕಲ್ಪಿಸಿಕೊಳ್ಳುತ್ತೇನೆ. ಸಿನಿಮಾ ನೋಡುವಾಗ ಆ ಪಾತ್ರ ಮೋಡಿ ಮಾಡಬಹುದೇ ಎಂದು ಆಲೋಚಿಸುತ್ತೇನೆ. ಆಗ ನನಗೆ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತೇನೆ. 

7. ನಿಮ್ಮ ಪ್ರಕಾರ, ನಿಮಗೆ ಇಷ್ಟೊಂದು ಅವಕಾಶ ಸಿಗಲು ಏನು ಕಾರಣ ಇರಬಹುದು?
ಗೊತ್ತಿಲ್ಲ, ಬಹುಶಃ ನಾನು ಜಾಸ್ತಿ ಯಾವುದೇ ವಿಷಯಕ್ಕೂ ಹೋಗುವುದಿಲ್ಲ. ಸೆಟ್‌ನಲ್ಲೂ ಎಲ್ಲರ ಜೊತೆ ಫ್ರೆಂಡ್ಲಿಯಾಗಿರುತ್ತೇನೆ. ಕೊಟ್ಟ ಪಾತ್ರಕ್ಕೆ ನನ್ನ ಕೈಲಾದಷ್ಟು ನ್ಯಾಯ ಒದಗಿಸುತ್ತೇನೆ. ಅದು ಒಂದು ಕಾರಣವಿರಬಹುದು. 

8. ನಿಮ್ಮ ಅಕ್ಕನ ನಿಮಗಿಂತ ಮುಂಚೆ ಚಿತ್ರರಂಗಕ್ಕೆ ಬಂದವರು. ನಿಮ್ಮ ಬೆಳವಣಿಗೆ ನೋಡಿ ಏನಂತಾರೆ?
ಅವಳು ತುಂಬಾ ಖುಷಿಪಡ್ತಾಳೆ. ಸಿನಿಮಾ ಒಪ್ಪುವಾಗ ಕೆಲವು ಸಜೇಶನ್ಸ್‌ ಕೊಡ್ತಾಳೆ, ಈ ಸಿನಿಮಾ ಒಪ್ಪಿದರೆ ಪಾಸಿಟಿವ್‌-ನೆಗೆಟಿವ್‌ ಏನು ಎಂದು. "ಮುಗುಳುನಗೆ'ಯ ಅವಕಾಶ ನನಗೆ ಸಿಕ್ಕಾಗ ಅಕ್ಕ ತುಂಬಾ ಖುಷಿಪಟ್ಟಿದ್ದಾಳೆ.

9. ಸಿನಿಮಾಕ್ಕೆ ಬಾರದೇ ಹೋಗಿದ್ದರೆ ನೀವು ಇದ್ರಿ?
ನನಗೆ ಡಾಕ್ಟರ್‌ ಆಗಬೇಕೆಂಬ ಆಸೆ ಇತ್ತು. ಒಂದು ವೇಳೆ ಅದು ಸಾಧ್ಯವಾಗದೇ ಇದ್ದರೆ ಡ್ಯಾನ್ಸ್‌ ಕ್ಷೇತ್ರದಲ್ಲೆ ಏನಾದರೂ ಮಾಡಿಕೊಂಡು ಇರುತ್ತಿದ್ದೆ. ನನಗೆ ಡ್ಯಾನ್ಸ್‌ ಎಂದರೆ ತುಂಬಾ ಇಷ್ಟ. ಬೇರೆ ಬೇರೆ ಡ್ಯಾನ್ಸ್‌ ಪ್ರಾಕಾರಾಗಳನ್ನು ಕಲಿಯೋದೆಂದರೆ ನನಗೆ ತುಂಬಾ ಇಷ್ಟ.

10. ಯಾವ ತರಹದ ಪಾತ್ರ ನಿಮಗೆ ಸಿಗುತ್ತಿದೆ?
ನನ್ನ ವಯಸ್ಸಿಗೆ ತಕ್ಕುದಾದ ಪಾತ್ರಗಳೇ ಬರುತ್ತಿವೆ. ಕಾಲೇಜು ಹುಡುಗಿ, ತರಲೆ, ತಮಾಷೆಯ ಪಾತ್ರಗಳು. "ಮುಗುಳುನಗೆ'ಯಲ್ಲಿ ತರಲೆ ಮಾಡಿಕೊಂಡಿರುವ ಕಾಲೇಜು ಹುಡುಗಿಯ ಪಾತ್ರ ಸಿಕ್ಕಿದೆ. ಅದು ನನ್ನ ರಿಯಲ್‌ ಲೈಫ್ಗೂ ಹತ್ತಿರವಾಗಿರುವ ಪಾತ್ರ. 

11. ಯಾರ ಜೊತೆ ನಟಿಸಬೇಕೆಂದು ತುಂಬಾ ನಿರೀಕ್ಷೆಯಿಂದ ಕಾಯ್ತಾ ಇದ್ದೀರಿ?
ನಟಿಯಾಗಿ ಎಲ್ಲರ ಜೊತೆಯೂ ನಟಿಸಬೇಕೆಂಬ ಆಸೆ ಇರುತ್ತದೆ. ನನ್ನ ವೈಯಕ್ತಿಕವಾಗಿ ಪುನೀತ್‌ ರಾಜಕುಮಾರ್‌ ತುಂಬಾ ಇಷ್ಟ. ಅವರು ಒಳ್ಳೆಯ ಡ್ಯಾನ್ಸರ್‌ ಕೂಡಾ. ನನಗೆ ಅವರ ಸಿನಿಮಾದಲ್ಲಿ ನಟಿಸಲು ಆಸೆ ಇದೆ. 

12. ನಿರ್ದೇಶಕ ಮಹೇಶ್‌ ಬಾಬು ಲಕ್ಕಿ ಹ್ಯಾಂಡ್‌, ಅವರು ಲಾಂಚ್‌ ಮಾಡಿದ ಹೀರೋಯಿನ್‌ಗಳು ಕ್ಲಿಕ್‌ ಆಗುತ್ತಾರೆ ಅಂತಾರಲ್ಲ. ಈ ಬಗ್ಗೆ ಏನಂತ್ತೀರಿ?
ಆರಂಭದಲ್ಲಿ ನನಗೆ ಆ ಬಗ್ಗೆ ನಂಬಿಕೆ ಇರಲಿಲ್ಲ. ಅವರವರ ಶ್ರಮದಿಂದ ಮೇಲೆ ಬರುತ್ತಾರೆಂದುಕೊಂಡಿದ್ದೆ. ಆದರೆ ಈಗ ಒಂದು ಮಟ್ಟಿಗೆ ಅವರು ಲಕ್ಕಿಹ್ಯಾಂಡ್‌ ಅನ್ಸುತ್ತೆ. ಅವರು ಲಾಂಚ್‌ ಮಾಡಿದ ನಾಯಕಿಯರಲ್ಲೆ ಒಂದು ಲೆವೆಲ್‌ಗೆ ಹೋಗಿದ್ದಾರೆ. ಈಗ ನನಗೂ ಸಾಕಷ್ಟು ಅವಕಾಶಗಳು ಸಿಗುತ್ತಿವೆ. 

Trending videos

Back to Top