CONNECT WITH US  

ಹದಗೆಟ್ಟ ರಸ್ತೆ, ಕಸದ ರಾಶಿಗೆ ದಂಗಾದ ಡೀಸಿ

ಕೋಲಾರ: ನಗರ ಸಂಚಾರ ನಡೆಸಿದ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ರಿಗೆ ಹಳ್ಳಕೊಳ್ಳಗಳಾಗಿರುವ ರಸ್ತೆಗಳು, ಕಸದ ರಾಶಿಗಳು, ಧೂಳು ತುಂಬಿದ ಫುಟ್‌ಪಾತ್‌ ಒತ್ತುವರಿ ಸೇರಿದಂತೆ ನಗರದ ಸಮಸ್ಯೆಗಳ ದರ್ಶನವಾಯಿತು.

ಮಂಗಳವಾರ ಸಂಜೆ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ಹಾಕಿ ವಾಸ್ತವಾಂಶವನ್ನು ಅರಿತುಕೊಳ್ಳುವ ಪ್ರಯತ್ನ ನಡೆಸಿದ ಡೀಸಿಗೆ ನಗರದ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಪರಿಚಯವಾಯಿತು.

ಸಮಸ್ಯೆಗಳ ಆಲಿಕೆ: ಅರಹಳ್ಳಿ ರಸ್ತೆಯ ರಹಮತ್‌ ನಗರ, ಕೋಡಿಕಣ್ಣೂರು ಕರೆ, ಬಂಬೂ ಬಜಾರ್‌ ರಸ್ತೆ, ಹೊಸ ಬಸ್‌ ನಿಲ್ದಾಣ, ಕ್ಲಾಕ್‌ಟವರ್‌, ವಿನಾಯಕ ನಗರ, ಡೂಂ ಲೆ„ಟ್‌, ಎಂಜಿ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಖುದ್ದು ಭೇಟಿ
ನೀಡಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಪ್ರಗತಿಪರ ಸಂಘಟನೆಗಳ ಮುಖಂಡರು ಸಾಥ್‌ ನೀಡಿ, ಸಮಸ್ಯೆಗಳನ್ನು ವಿವರಿಸಿದರು. 

ಸ್ಥಳೀಯರ ದೂರು: ಅರಹಳ್ಳಿ ರಸ್ತೆ, ರಹಮತ್‌ ನಗರ ಭಾಗಕ್ಕೆ ತೆರಳಿದ ಜಿಲ್ಲಾಧಿಕಾರಿಗಳಿಗೆ, ಅಲ್ಲಿ ಅಗೆಯಲಾಗಿರುವ ರಸ್ತೆಗಳು, ಯುಜಿಡಿ ಸಮಸ್ಯೆಗಳು ಕಂಡುಬಂದವು. ಈ ವೇಳೆ ಮಾತನಾಡಿದ ಸ್ಥಳೀಯರು, ನಗರಸಭೆ ಅಧಿಕಾರಿಗಳಿಗೆ ನಮ್ಮ ವಾರ್ಡ್‌ ಲೆಕ್ಕಕ್ಕೆ ಇಲ್ಲದಾಗಿದೆ.

ಕಳೆದ ವರ್ಷ ರಂಜಾನ್‌ ಹಬ್ಬಕ್ಕೆ ಬಂದು ಸ್ವತ್ಛತೆ ಮಾಡಿ ತೆರಳಿದ್ದವರು, ಇತ್ತೀಚೆಗೆ ಬಕ್ರಿದ್‌ ಹಬ್ಬಕ್ಕೆ ಬಂದು ಹೋಗಿದ್ದಾರೆ. ಮುಂದಿನ ರಂಜಾನ್‌ಗೆ ಮತ್ತೆ ನಾವು ಅವರನ್ನು ಕಾಣುತ್ತೇವೆ ಎಂದು ದೂರಿದರು. ಅಲ್ಲದೇ, ಇಲ್ಲಿ ರಸ್ತೆಗಳನ್ನು
ಅಗೆಯಲಾಗಿದೆ. ಹಲವಾರು ತಿಂಗಳಿಂದ ಯುಜಿಡಿ ಒಡೆದು ತ್ಯಾಜ್ಯ ನೀರು ರಸ್ತೆಗೆ ಬರುತ್ತಿದೆ. ಮಳೆ ಬಂದರೆ ರಸ್ತೆಗಳು ಕೆಸರು ಗದ್ದೆಯಾಗುತ್ತವೆ. ಆದರೆ, ನಮ್ಮ ಸಮಸ್ಯೆಗೆ ಸ್ಪಂದಿಸುವವರು ಯಾರೂ ಇಲ್ಲ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.

ಕೆರೆ ಸ್ಥಿತಿಗೆ ಅಸಮಾಧಾನ: ರಹಮತ್‌ ನಗರದಿಂದ ಕೋಡಿಕಣ್ಣೂರು ಕೆರೆಯತ್ತ ತೆರಳಿದ ಜಿಲ್ಲಾಧಿಕಾರಿಗಳಿಗೆ ಅಲ್ಲಿ ಹಳೆಯ ಕಟ್ಟಡಗಳ ತ್ಯಾಜ್ಯ, ಮಾಂಸದ ಅಂಗಡಿಗಳ ತ್ಯಾಜ್ಯದ ದುರ್ವಾಸನೆಯನ್ನು ಕಂಡು ಅಸಮಾಧಾನಗೊಂಡರು. ಕೆರೆಯ ಸ್ವರೂಪವೇ ಬದಲಾಗಿ, ಕಸದ ತೊಟ್ಟಿಯಾಗಿದೆ. ಯಾರು ಇದನ್ನೆಲ್ಲ ಮಾಡುತ್ತಿದ್ದಾರೆ. ನಗರಸಭೆಯವರು ಏನು ಮಾಡುತ್ತಿದ್ದೀರಿ ಎಂದು ನಗರಸಭೆ ಆಯುಕ್ತರು, ಇಂಜಿನಿಯರ್‌ರನ್ನು ಪ್ರಶ್ನಿಸಿದರು.

ತ್ಯಾಜ್ಯಕ್ಕೆ ಕಡಿವಾಣ ಹಾಕಿ: ಈ ವೇಳೆ ಮಾತನಾಡಿದ ಪ್ರಗತಿಪರ ಸಂಘಟನೆಗಳ ಮುಖಂಡರು, ನಗರದಲ್ಲಿನ ಮಾಂಸದ ಅಂಗಡಿಯವರು ರಾತ್ರಿ ವೇಳೆ ತಂದು ಕೆರೆಗೆ ಸುರಿಯುತ್ತಿದ್ದಾರೆ. ಇದರಿಂದಾಗಿ ನಾಯಿಗಳ ಹಾವಳಿ ಮಿತಿಮೀರಿದೆ. ಅಲ್ಲದೇ, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳು ಹೆಚ್ಚಾಗಿವೆ. ಹಲವಾರು ವರ್ಷಗಳಿಂದ ಸಮಸ್ಯೆ ಮುಂದುವರಿದಿದ್ದರೂ ಇದುವರಿಗೂ ಯಾವೊಬ್ಬ ಅಧಿಕಾರಿಯೂ ಗಮನ ಹರಿಸಿಲ್ಲ. ಇದರ ಅವಕಾಶವನ್ನೇ ಬಳಸಿಕೊಂಡ ಅಂಗಡಿ ಮಾಲಿಕರು ಮುಲಾಜಿಲ್ಲದೇ ಇಲ್ಲಿ ಸುರಿಯುತ್ತಿದ್ದಾರೆ. ಇನ್ನಾದರೂ ಕಡಿವಾಣ ಹಾಕಿ ಎಂದು ಒತ್ತಾಯಿಸಿದರು.

ಧೂಳಿನ ಸಮಸ್ಯೆ: ನಗರದಲ್ಲಿ ಕೆಡವಲಾಗುವ ಹಳೆಯ ಮನೆ, ಕಟ್ಟಡಗಳ ತ್ಯಾಜ್ಯವನ್ನೂ ಕೆರೆಯ ಒಳಗೆ ಮತ್ತು ಕಟ್ಟೆಯ ಮೇಲೆ ಸುರಿಯಲಾಗುತ್ತಿದೆ. ಇದರಿಂದಾಗಿ ಧೂಳಿನ ಸಮಸ್ಯೆ ಎದುರಾಗಿದೆ. ರಾತ್ರೋ ರಾತ್ರಿ ತಂದು ಇಲ್ಲಿ ಸುರಿಯಲಾಗುತ್ತಿದ್ದು, ಸಿಸಿ ಕ್ಯಾಮೆರಾಗಳನ್ನಾದರೂ ಅಳವಡಿಸಬೇಕೆಂದು ಕೋರಿದ್ದರೂ ಇದುವರಿಗೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ರಸ್ತೆ ದುರಸಿಗೆ ಅನುದಾನವಿಲ್ಲ: ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡೀಸಿ ಜೆ.ಮಂಜುನಾಥ್‌, ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಡಾಂಬರೀಕರಣ ಮಾಡಿಸಲು ಸದ್ಯಕ್ಕೆ ಯಾವುದೇ ಅನುದಾನಗಳು ಲಭ್ಯವಿಲ್ಲ.
ಆದರೂ, ನಗರದಲ್ಲಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಯಾವುದೇ ಅನುದಾನದಲ್ಲಾದರೂ ಕ್ರಮ ಕೈಗೊಳ್ಳಲಾಗುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಎಸ್ಪಿ ಡಾ.ರೋಹಿಣಿ ಕಟೋಚ್‌ ಸೆಪಟ್‌, ವಿವಿಧ ಸಂಘಟನೆಗಳ ಮುಖಂಡರಾದ ಕೆ.
ನಾರಾಯಣಗೌಡ, ಕುರುಬರಪೇಟೆ ವೆಂಕಟೇಶ್‌, ಶ್ರೀನಿವಾಸ್‌, ಮೇಡಿಹಾಳ ಎಂ.ಕೆ.ರಾಘವೇಂದ್ರ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಅಮೃತ್‌ ಸಿಟಿ, ನಗರೋತ್ಥಾನ-3ರ ಅಡಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಕೆಲವು ರಸ್ತೆಗಳು ಲೋಕೋಪಯೋಗಿ, ನಗರಸಭೆ ವ್ಯಾಪ್ತಿಗೆ ಒಳಪಡುತ್ತವೆ. ಸದ್ಯಕ್ಕೆ ಅನುದಾನದ ಸಮಸ್ಯೆಯಿದ್ದು, ಎಲ್ಲ ಅಧಿಕಾರಿಗಳೊಂದಿಗೆ ಈ ಕೂಡಲೇ ಚರ್ಚಿಸಿ ಯಾವುದಾದರೂ ಅನುದಾನದಲ್ಲಿ ರಸ್ತೆಗಳ ಡಾಂಬರೀಕರಣ ಗೊಳಿಸಲಾಗುವುದು ಎಂದರು. ಜತೆಗೆ ಎಸ್ಪಿ, ನಗರಸಭೆ ಅಧ್ಯಕ್ಷರು, ಆಯುಕ್ತರು, ಲೋಕೋಪಯೋಗಿ,
ನೀರಾವರಿ ಸೇರಿದಂತೆ ಎಲ್ಲ ಅಧಿಕಾರಿಗಳನ್ನು ಜತೆಯಲ್ಲಿ ನಗರ ಪ್ರದಕ್ಷಿಣೆ ನಡೆಸಲಾಗುತ್ತಿದ್ದು, ಸಮಸ್ಯೆ ಬಗೆಹರಿಸಲು
ಯಾವ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳಬಹುದು ಎಂಬುದನ್ನು ತೀರ್ಮಾನಿಸಲಾಗುವುದು.
 ಜೆ.ಮಂಜುನಾಥ್‌, ಜಿಲ್ಲಾಧಿಕಾರಿ 


Trending videos

Back to Top