CONNECT WITH US  

ಅನ್ನ ಭಾಗ್ಯದ ಅಕ್ಕಿ ಖಾಸಗಿಯವರಿಗೆ ಮಾರಾಟ ಆರೋಪ, ದಾಳಿ

ಅಕ್ಕಿ, ಗೋಧಿ ಅಕ್ರಮ ದಾಸ್ತಾನು ಪತ್ತೆ

ಮಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜಿಲ್ಲಾ ಅಧಿಕಾರಿಗಳು ಶುಕ್ರವಾರ ಬೋಂದೆಲ್‌ ಸಮೀಪದ ಮಂಜಲ್ಪಾದೆ- ಪಡುಶೆಡ್ಡೆ ರಸ್ತೆಯ ಖಾಸಗಿ ಗೋದಾಮಿಗೆ ದಾಳಿ ಮಾಡಿ ಅನಧಿಕೃತವಾಗಿ ದಾಸ್ತಾನು ಇರಿಸಿದ್ದ 290 ಕ್ವಿಂಟಾಲ್‌ ಅಕ್ಕಿ ಮತ್ತು 9 ಕ್ವಿಂಟಾಲ್‌ ಗೋಧಿ ಸಹಿತ ಒಟ್ಟು 8,20,000 ರೂ. ಮೌಲ್ಯದ ಆಹಾರ ವಸ್ತುಗಳನ್ನು ಮತ್ತು 9 ಲ. ರೂ. ಮೌಲ್ಯದ 3 ವಾಹನಗಳನ್ನು ವಶಪಡಿಸಿಕೊಂಡು ಲಾರಿ ಚಾಲಕ ಮುಬಿರುಲ್‌ ಇಸ್ಲಾಂ ರಾಜ್‌ನನ್ನು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೂ ಇಬ್ಬರು ಆರೋಪಿಗಳಿದ್ದು ಅವರು ಪರಾರಿಯಾಗಿದ್ದಾರೆ ಎಂದು  ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾಗಿರುವ ಅಕ್ಕಿ ರಾಜ್ಯ ಸರಕಾರದ ಅನ್ನ ಭಾಗ್ಯ ಯೋಜನೆಗೆ ಸೇರಿದ್ದೆಂದು ಹೇಳಲಾಗಿದೆ. ರಾಜ್ಯ ಆಹಾರ ಇಲಾಖೆಯ ಶಕ್ತಿ ನಗರದ ಗೋದಾಮಿನಿಂದ ಹಾಸ್ಟೆಲ್‌ಗೆಂದು ಸಾಗಿಸುತ್ತಿದ್ದ ಈ ಅಕ್ಕಿ ಮತ್ತು ಗೋಧಿಯನ್ನು ಖಾಸಗಿಯವರಿಗೆ ಮಾರಾಟ ಮಾಡಲು ಯತ್ತಿಸುತ್ತಿದ್ದಾಗ ನಗರದ ಬಿಜೆಪಿ ಕಾರ್ಪೊರೇಟರ್‌ ದಿವಾಕರ್‌ ಮತ್ತು ಇತರರು ಮಾಹಿತಿ ಪಡೆದು ಆಹಾರ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ತಾಲೂಕು ಕಚೇರಿಯಲ್ಲಿ ಆಹಾರ ಇಲಾಖೆಯ ಶಿರಸ್ತೇದಾರರಾಗಿರುವ ಕಸ್ತೂರಿ ನೀಡಿದ ದೂರಿನನ್ವಯ ಕಾವೂರು ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಕ್ಕಿ ಮತ್ತು ಗೋಧಿಯ ಜತೆಗೆ ಲಾರಿ, 407 ಟೆಂಪೋ ಮತ್ತು ಪಿಕಪ್‌ ಸಹಿತ ಮೂರು ವಾಹನಗಳು, ಎಲೆಕ್ಟ್ರಾನಿಕ್‌ ತೂಕದ ಯಂತ್ರ ಮತ್ತು ಪ್ಯಾಕಿಂಗ್‌ ಯಂತ್ರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅನ್ನ ಭಾಗ್ಯದ  ಅಕ್ಕಿ ಮತ್ತು ಗೋಧಿಯನ್ನು ಲಾರಿ ಮಾಲಕ ಮತ್ತು ಚಾಲಕ ಸೇರಿ ಖಾಸಗಿಯವರಿಗೆ ಮಾರಾಟ ಮಾಡುತ್ತಿದ್ದರು ಹಾಗೂ ಬೋಂದೆಲ್‌ನ ಗೋದಾಮಿನಲ್ಲಿ ಈ ಅಕ್ಕಿಯನ್ನು ರಿಪ್ಯಾಕ್‌ ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.


Trending videos

Back to Top